ಲಕ್ಷ್ಮಯ್ಯ ಹಠಾವೋ, ಬಿಜೆಪಿ ಬಚಾವೋ
ಕೋಲಾರ: ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಲಕ್ಷ್ಮಯ್ಯ ಹಠಾವೋ, ಬಿಜೆಪಿ ಬಚಾವೋ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪ್ರಮುಖ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷ ಎನ್. ಲಕ್ಷ್ಮಯ್ಯ ಕಡೆಗಣಿಸಿದ್ದಾರೆ, ಕಳೆದ ಎರಡು ವರ್ಷಗಳಿಂದ ಅನೇಕರು ಸರ್ಕಾರದ ವಿವಿಧ ಸಂಸ್ಥೆಗಳಿಗೆ ನಾಮಕರಣಗೊಳ್ಳಲು ಅರ್ಜಿ ಸಲ್ಲಿಸಿದ್ದರೂ ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಡುವುದಕ್ಕೆ ಬದಲಾಗಿ ತಮ್ಮ ಪರ ಜೈ ಎನ್ನುವವರಿಗೆ ಎರಡೂ ಮೂರು ಹುದ್ದೆಗಳಲ್ಲಿ ಇರುವುದಕ್ಕೆ ಅವಕಾಶ ಕಲ್ಪಿಸಿದ್ದಾರೆಂದು ಕಾರ್ಯಕರ್ತರು ದೂರಿದ್ದಾರೆ.
ಪಕ್ಷಕ್ಕೆ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದಕ್ಕೆ ಅಧ್ಯಕ್ಷರಿಗೆ ಆಸೆ ಇಲ್ಲದಿರುವುದರಿಂದ ಹಳಬರನ್ನು ನಿರ್ಲಕ್ಷ್ಯ ಮಾಡಿ ಕಾರ್ಯಕರ್ತರೇ ಬೇಸತ್ತು ತಾವಾಗಿಯೇ ಪಕ್ಷ ಬಿಡುವಂತೆ ಷಡ್ಯಂತ್ರ ರೂಪಿಸಿದ್ದಾರೆಂದು ಆರೋಪಿಸಿದ್ದಾರೆ.
ಎನ್. ಲಕ್ಷ್ಮಯ್ಯನವರು ಆರ್.ಎಸ್.ಎಸ್. ಎಬಿವಿಪಿ ಮೂಲಕ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು ಈ ಎರಡೂ ಸಂಘಟನೆಗಳ ಸಂಸ್ಕಾರದಿಂದ ಪಕ್ಷಕ್ಕೆ ಒಳ್ಳೆಯದು ಆಗಬಹುದು, ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೂಕ್ತವಾದ ಸ್ಥಾನ-ಮಾನ ದೊರಕಿಸಿಕೊಡಬಹುದೆಂಬ ನಂಬಿಕೆಯಿಂದ ಅನೇಕ ಕಾರ್ಯಕರ್ತರು ತಾಳ್ಮೆಯಿಂದ ಇರಬೇಕಾಯಿತು. ಆದರೆ, ಅಧ್ಯಕ್ಷರು ಕಾರ್ಯಕರ್ತರ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಿ ಶೋಷಣೆ ಮಾಡುತ್ತಿದ್ದಾರೆ. ಇವರನ್ನು ಇನ್ನಷ್ಟು ದಿನ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರೆಸಿದಲ್ಲಿ ಪಕ್ಷವನ್ನು ಸಂಪೂರ್ಣವಾಗಿ ಹಾಳು ಮಾಡುವ ಸಾಧ್ಯತೆಗಳಿರುವುದರಿಂದ ಕೂಡಲೇ ಅಧ್ಯಕ್ಷ ಪದವಿಯಿಂದ ಬಿಡುಗಡೆ ಮಾಡುವಂತೆ ರಾಜ್ಯ ನಾಯಕರಿಗೆ ಮನವಿ ಸಲ್ಲಿಸಲು ನಿಶ್ಚಯಿಸಿದ್ದಾರೆ.
ಪಕ್ಷದ ನಿಯಮಗಳ ಪ್ರಕಾರ ಯಾವುದೇ ಒಬ್ಬ ಕಾರ್ಯಕರ್ತನಿಗೆ ಎರಡು ಮೂರು ಹುದ್ದೆಗಳಲ್ಲಿ ಕೆಲಸ ಮಾಡುವುದಕ್ಕೆ ಅವಕಾಶವಿಲ್ಲ. ಆದರೆ, ಜಿಲ್ಲಾಧ್ಯಕ್ಷರು ಜಿ.ಪಂ ಸದಸ್ಯೆ ಮುತ್ಯಾಲಮ್ಮನವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆಸಿದ್ದಾರಲ್ಲದೆ, ರಾಜ್ಯ ಕುಕ್ಕುಟ ಮಂಡಳಿ ನಿರ್ದೇಶಕಿಯನ್ನಾಗಿ ಮಾಡಿದ್ದಾರೆಂದು ಮುಖಂಡರು ದೂರಿದ್ದಾರೆ.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮಿ ಅವರು ಬಂಗಾರಪೇಟೆ ತಾ.ಪಂ ಸದಸ್ಯಯಾಗಿರುವುದಲ್ಲದೆ ಕೋಚಿಮುಲ್ ನಾಮನಿರ್ದೇಶಕರನ್ನಾಗಿ ಮಾಡಲಾಗಿದೆ. ಬಿಜೆಪಿ ತೊರೆದು ಕೆಜೆಪಿ ಜತೆ ಗುರುತಿಸಿಕೊಂಡಿರುವ ಸುಕನ್ಯಾ ಅವರು ಜಿ.ಪಂ ಕೆಡಿಪಿ ಸದಸ್ಯರಾಗಿ ಮುಂದುವರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಪಕ್ಷದ ಚಟುವಟಿಕೆಯಿಂದ ಕಳೆದ ಎರಡು ವರ್ಷಗಳಿಂದ ದೂರವಿದ್ದ ಪ್ರಮೀಳಾ ಮಲ್ಲಿಕಾರ್ಜುನ್ ಅವರನ್ನು ಕೆಎಂಎಫ್ ನಾಮ ನಿರ್ದೇಶಕಿಯನ್ನಾಗಿ ನೇಮಿಸಲಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ವಿವಿಧ ಹುದ್ದೆಗಳಿಗೆ ನೇಮಿಸಲು ಅನೇಕರು ಅರ್ಜಿ ಸಲ್ಲಿಸಿದ್ದರೂ ಅಧ್ಯಕ್ಷರು ಪ್ರಾಮಾಣಿಕರಿಗೆ ಅವಕಾಶ ಕಲ್ಪಿಸಲು ಆಸಕ್ತಿ ತೋರದಿರುವುದರಿಂದ ರಾಜ್ಯ ನಾಯಕರ ಮುಂದೆ ನಮ್ಮ ಅಳಲು ತೋಡಿಕೊಳ್ಳುವ ಉದ್ದೇಶದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಲಕ್ಷ್ಮಯ್ಯ ಹಠಾವೋ, ಬಿಜೆಪಿ ಬಚಾವೋ ಸಂಘಟನೆಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಕೋಲಾರ ತಾಲೂಕು ದರಕಾಸ್ತು ಸಮಿತಿಗೆ ಸದಸ್ಯರನ್ನಾಗಿ ಮಾಡುವುದಕ್ಕೆ ತಾಲೂಕು ಸಮಿತಿಯಿಂದ ಶಿಫಾರಸು ಮಾಡಿರುವುದನ್ನು ಸಹ ಅಧ್ಯಕ್ಷರು ಪರಿಗಣಿಸಿಲ್ಲ, ಸರ್ಕಾರದ ಅವಧಿ ಮುಗಿಯುತ್ತಾ ಬಂದಿರುವುದರಿಂದ ನಿಷ್ಟಾವಂತ ಕಾರ್ಯಕರ್ತರಿಗೆ ನ್ಯಾಯ ಸಿಗುವುದು ಅನುಮಾನ, ಕನಿಷ್ಠ ಪಕ್ಷದಲ್ಲಿ ಕಾರ್ಯಕರ್ತರು ಉಳಿಯಬೇಕಾದರೆ, ಪಕ್ಷ ಉಳಿಯಬೇಕಾದರೆ ಲಕ್ಷ್ಮಯ್ಯನವರನ್ನು ಬದಲಾವಣೆ ಮಾಡಬೇಕೆಂಬುದು ಲಕ್ಷ್ಮಯ್ಯ ವಿರೋಧಿ ಬಣದ ಮುಖಂಡರ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

