ಕೋಲಾರ

ಸ.ರಘುನಾಥ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ

Published On :





ಟಿ ಪಾ.ಶ್ರೀ.ಅನಂತರಾಮ್
ಕೋಲಾರ: ಇದೇ 23 ಮತ್ತು 24 ರಂದು ಮಾಲೂರಿನಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ, ಅನುವಾದಕ, ಎಲ್ಲಕಿಂತ ಮಿಗಿಲಾಗಿ ಗ್ರಾಮೀಣ ಮಕ್ಕಳ ಪ್ರೀತಿಯ ಶಿಕ್ಷಕ ಸ.ರಘುನಾಥ ಅವರನ್ನು ಆಯ್ಕೆಯಾಗಿದ್ದಾರೆ.
1954ರ ಆಗಸ್ಟ್ 13 ರಂದು ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯಲ್ಲಿ ಪದ್ಮಮ್ಮ, ಸುಬ್ರಮಣ್ಯ ದಂಪತಿಗೆ ಜನಿಸಿದ ರಘುನಾಥ, ಜನ್ಮ ನೀಡಿದ ತಂದೆ-ತಾಯಿಗಿಂತ ಹೆಚ್ಚಾಗಿ ಅಜ್ಜಿ ವೆಂಕಟಮ್ಮ ಮತ್ತು ತಾತ ನಾರಾಯಣರಾವ್ ಆಶ್ರಯದಲ್ಲಿ ಬೆಳೆದು ಅವರಿಬ್ಬರು ನೀಡಿದ ಸಂಸ್ಕಾರ, ಮಾರ್ಗದರ್ಶದಿಂದ ಪಡೆದ ಅನುಭವದಿಂದ ಸಾಹಿತಿ, ಕವಿಯಾಗಿ, ಬಡ ಮಕ್ಕಳ ಬಂಧುವಾಗಿ ನಾಡಿನಲ್ಲಿ ಪರಿಚಿತರಾಗಿದ್ದಾರೆ.
ಮನೆಯಲ್ಲಿದ್ದ ಬಡತನ, ಸಮಾಜದಲ್ಲಿದ್ದ ಸಾಮಾಜಿಕ ವ್ಯವಸ್ಥೆಯಿಂದ ಬಾಲ್ಯದಲ್ಲಿ ಸಾಕಷ್ಟು ನೋವು, ವೇದನೆ, ಶೋಷಣೆ, ತಾತ್ಸರಕ್ಕೆ ಒಳಗಾಗಿದ್ದ ಸ.ರಘುನಾಥ ಅವರಿಗೆ ತಂದೆ-ತಾಯಿಗಿಂತ, ಜೀವನಕ್ಕೆ ಸಂಬಂಧಿಸಿದಂತೆ ಅಜ್ಜಿ ನೀಡಿದ  ಪಾಠ ಯಾವುದೇ ವಿಶ್ವ ವಿದ್ಯಾಲಯದಲ್ಲಿ ಪಡೆಯಲಾಗದಷ್ಟು ಅನುಭವ ಕಲಿಸಿದೆ, ಅಜ್ಜಿಯ ಜತೆಗೆ ತಾತ ಒಬ್ಬ ದಾರ್ಶನಿಕನಾಗಿ ನೀಡಿದ ಮಾರ್ಗದರ್ಶನ ರಘುನಾಥ ಅವರು ಸಾಹಿತ್ಯ ಲೋಕದಲ್ಲಿ ವಿಶೇಷ ಸಾಧನೆ ಮತ್ತು ಕೀರ್ತಿ ಸಂಪಾದಿಸಲು ಅವಕಾಶ ಕಲ್ಪಿಸಿದೆ.
ಇಂಗ್ಲಿಷ್ ಒಲ್ಲದೆ ಕಾಲೇಜು ಬಿಟ್ಟರು: ಹುಟ್ಟೂರಾದ ಮಲಿಯಪ್ಪನಹಳ್ಳಿ, ದೊಡ್ಡ ಶಿವಾರ, ದೊಡ್ಡ ಕಡತ್ತೂರು ಗ್ರಾಮಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ಎಸ್ಎಲ್ಎಲ್ಸಿ ಮುಗಿಸಿದ ರಘುನಾಥ ಮುಂದೆ ಪಿಯುಸಿ ಓದುವುದಕ್ಕೆ ಇಂಗ್ಲಿಷ್ ಕಲಿಯುವುದಕ್ಕೆ ಇದ್ದ ನಿರಾಸಕ್ತಿಯಿಂದ ಶಿಕ್ಷಣ ಮುಂದುವರೆಸಲು ಆಗದೆ, ಬೆಂಗಳೂರಿಗೆ ಹೋಗಬೇಕಾಯಿತು.
ಹಳ್ಳಿಯಲ್ಲಿದ್ದಾಗ ಮನೆಯಲ್ಲಿ ಊಟ-ತಿಂದಿ ಸಿಗದಿದ್ದರೂ ಅಕ್ಕ-ಪಕ್ಕದ ಮನೆಯಲ್ಲಿ ಒಂದು ಹಿಡಿಯಷ್ಟಾದರೂ ಅನ್ನ ಸಿಗುತ್ತಿತ್ತು, ಇಲ್ಲವೇ ಒಂದು ಬೋಗಸೆಯಷ್ಟು ನೀರಾದರೂ ಸಿಕ್ಕೇ ಸಿಗುತ್ತಿತ್ತು. ಆದರೆ, ಬೆಂಗಳೂರಿನಲ್ಲಿ ಒಂದು ಹೊತ್ತಿನ ಊಟಕ್ಕಾಗಿ ರಘುನಾಥ ಪಟ್ಟ ಕಷ್ಟ ಅಷ್ಟಿಷ್ಟು ಆಗಿರಲಿಲ್ಲ. ಬದುಕಲೇಬೇಕಾದ ಅನಿವಾರ್ಯತೆಯಿಂದಾಗಿ ಭಿಕ್ಷೆ ಬೇಡಿದ ದಿನಗಳು ಉಂಟು.
ಬೆಂಗಳೂರಿನಲ್ಲಿ ಇದ್ದಷ್ಟು ದಿನ ಕೂಲಿ ನಾಲಿ ಮಾಡಿದ್ದಾರೆ, ಫುಟ್ಪಾತ್ ಮೇಲೆ ಮಲಗಿದ್ದಾರೆ, ಹೋಟೆಲ್ಗಳಲ್ಲಿ ಗ್ಲಾಸು-ಲೋಟ ತೊಳೆದಿದ್ದಾರೆ. ಇಷ್ಟೆಲ್ಲಾ ತೊಂದರೆ ಅನುಭವಿಸಿದ ನಂತರ ಸ್ನೇಹಿತನೊಬ್ಬ ಮಂಡ್ಯದಲ್ಲಿ ಕೆಲಸ ಕೊಡಿಸುವುದಾಗಿ ಅಲ್ಲಿಗೆ ಕರೆದುಕೊಂಡು ಹೋಗಿ ಮೋಸ ಮಾಡಿದ್ದರಿಂದ ಅಲ್ಲೂ ಕೆಲ ದಿನ ಭಿಕ್ಷೆ ಬೇಡಬೇಕಾಯಿತು. ಮತ್ತೆ ಅಲ್ಲಿಂದ ಬೆಂಗಳೂರಿಗೆ ಬಂದು ಸ್ವಲ್ಪ ದಿನಗಳ ನಂತರ ತವರೂರಿಗೆ ವಾಪಸ್ ಬಂದ ರಘುನಾಥ 1977ರಿಂದಲೇ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ, ನಷ್ಟ, ನೋವು-ನಲಿವಿನ ಬಗ್ಗೆ ಸಣ್ಣ ಸಣ್ಣ ಕಥೆ, ಕವನ ಬರೆಯುವುದಕ್ಕೆ ಆರಂಭಿಸಿದರು.
ಸ್ನೇಹಿತನಿಂದ ಶಿಕ್ಷಕರಾದರು: ಅದೇ ವೇಳೆಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿದ್ದ ಕೃಷ್ಣಪ್ಪ ಎಂಬುವರು ರಘುನಾಥ ಅವರಲ್ಲಿದ್ದ ಬುದ್ಧಿ ಶಕ್ತಿ, ಬರವಣಿಗೆ ಗಮನಿಸಿ ತಾವೇ ನಾಲ್ಕಾಣೆ ಕೊಟ್ಟು ಅರ್ಜಿ ತಂದು ಶಿಕ್ಷಣ ಇಲಾಖೆಗೆ ಅರ್ಜಿ ಹಾಕಿಸಿ ಶಿಕ್ಷಕನಾಗಲು ಅವಕಾಶ ಮಾಡಿಕೊಟ್ಟರು.
ಇದರಿಂದಾಗಿ ರಘುನಾಥ ಅವರ ಭಿಕ್ಷೆ ಬೇಡುವ ಜೀವನಕ್ಕೆ ಮೋಕ್ಷ ಸಿಕ್ಕಿತು, ತಾವು ನಿರುದ್ಯೋಗಿ ಆಗಿದ್ದಾಗ ರಚಿಸಿದ ಗತಿ ಎಂಬ ಕವನ ಸಂಕಲನವನ್ನು ಸಾರಸ್ವತ ಲೋಕಕ್ಕೆ ಪರಿಚಯಿಸುವುದಕ್ಕೆ ಧೈರ್ಯ ಬಂದಿತು.
ಹೀಗೇ ಶಿಕ್ಷಕನ ವೃತ್ತಿಯ ಜತೆಗೆ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪು ಮೂಡಿಸಲು ಶಕ್ತಿ ಪಡೆದ ರಘುನಾಥ, ಅಭಿಮುಖ, ದಾರಿ ಮತ್ತು ಆಕಾಶ, ಶಬ್ಧ ಕಣ್ಣಿನ ನಡುವೆ, ಕಣ, ಅಭಿರುಚಿ, ಕುಗಿಲ್ಲದ ಪ್ರತಿಧ್ವನಿ, ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಕಂದುಕುರಿ ಸೇರಿದಂತೆ ಒಟ್ಟು 32 ಕೃತಿ ರಚನೆ ಮಾಡಿದ್ದಾರೆ.
ಈ ಪೈಕಿ ಹೆಚ್ಚಿನದು ಕವನ ಸಂಕಲನ, ನಂತರ ಕಥಾ ಸಂಕಲನಕ್ಕೆ ಗಮನ ನೀಡಿದ್ದಾರೆ, ಪುರಂದರ ದಾಸರ 150 ಕೀರ್ತನೆಗಳನ್ನು ಕನ್ನಡದಿಂದ ತೆಲುಗು ಭಾಷೆಗೆ ಅನುವಾದ ಮಾಡಿ ಆಂಧ್ರದಲ್ಲೂ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಕಂದಕೂರಿ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿ ಶ್ರೇಷ್ಠ ಅನುವಾದ ಪ್ರಶಸ್ತಿ ಪಡೆದಿದ್ದಾರೆ.
ತೆಲುಗನ್ನಡ ಕಥಲು, ಯ್ಯರರಾಗಿಡಿ ಹಾಗೂ ಸಾಮಾಜಿಕ ಬದುಕಿನ ನೂರಾರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರುವ ಇವರು ಜಿಲ್ಲೆ ಮಾತ್ರವಲ್ಲದೆ ರಾಜ್ಯ ವಿವಿಧ ಕಡೆ ಮಕ್ಕಳ ಶೈಕ್ಷಣಿಕ ಪ್ರಗತಿ, ವಿಚಾರ ಧಾರೆಗಳಿಗೆ ಸಂಬಂಧಿಸಿದಂತೆ ಉಪನ್ಯಾಸ, ಕಮ್ಮಟ, ಕಾರ್ಯಾಗಾರ, ಸಂವಾದ ನಡೆಸಿಕೊಟ್ಟು ಹೆಸರು ವಾಸಿಯಾಗಿದ್ದಾರೆ.
ಸಮಾಜ ಸೇವೆಯಲ್ಲೂ ಸೈ: ಸಾಹಿತ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಘುನಾಥ, ತಮ್ಮ ಮನೆ, ಶಾಲೆ, ಆಶ್ರಮದಲ್ಲಿ 800ಕ್ಕೂ ಹೆಚ್ಚು ಅನಾಥ ಪ್ರಾಣಿಗಳಿಗೆ ರಕ್ಷಣೆ ನೀಡಿ, ಆರೈಕೆ ಮಾಡಿ, ಆರೋಗ್ಯ ಸುಧಾರಿಸಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟು ಪ್ರಾಣಿಗಳ ಮೇಲೆ ದಯೆ ತೋರಿದ್ದಾರೆ. ತಮ್ಮ ಅಶ್ರಮದಲ್ಲಿ 60 ಹೆಚ್ಚು ಬಡ ಮಕ್ಕಳನ್ನು ಸಾಕಿ, ಪೋಷಣೆ ಮಾಡಿದ್ದು, ಈ ಪೈಕಿ ಹಲವರು ವೈದ್ಯರು, ಇಂಜನಿಯರ್ ಹಾಗೂ ಸರ್ಕಾರಿ ಅಧಿಕಾರಿಗಳು ಆಗಿರುವುದು ರಘುನಾಥ ಅವರ ಸಾಧನೆಗೆ ಸಾಕ್ಷಿಯಾಗಿದೆ.
ಇಂದಿಗೂ 15 ಮಕ್ಕಳು ರಘುನಾಥ ಆಶ್ರಯದಲ್ಲಿ ಉತ್ತಮ ಬದುಕು ಕಾಣುತ್ತಿದ್ದಾರೆ. ಇವರ ಸಾಧನೆಗೆ ಪತ್ನಿ ನಿರ್ಮಲ ಅವರ ಸಹಕಾರವೂ ಉಂಟು. ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಅಭ್ಯಾಸವಿಲ್ಲ, ಸಾಧನೆ ಗುರುತಿಸಿ ಪ್ರೋತ್ಸಾಹ ನೀಡಿದರೆ ಅತ್ಯಂತ ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ ಎಂದು 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡಮ್ಮನ ಗಾಯ ಗಿಲ್ಲುವುದಿಲ್ಲ:12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿ ಪ್ರೀತಿಯಿಂದ ಮಾಡಿರುವ ಆಯ್ಕೆ. ಕಸಾಪ ಜಿಲ್ಲಾ ಪದಾಧಿಕಾರಿಗಳಿಗೆ ಮತ್ತು ಸಾಹಿತ್ಯ ಪ್ರೇಮಿಗಳ ಭಾವನೆಯನ್ನು ಗೌರವಿಸುತ್ತೇನೆ ಎಂದು ಪ್ರಕ್ರಿಯೆ ನೀಡಿದರು.
ಇದಕ್ಕಾಗಿ ಖಂಡಿತ ಹಿಗ್ಗುವುದಿಲ್ಲ, ಅವಕಾಶ ಸಿಗದಿದ್ದಲ್ಲಿ ಕುಗ್ಗುತ್ತಲೂ ಇರಲಿಲ್ಲ.   ಅಧ್ಯಕ್ಷನಾಗಿ ವ್ಯಕ್ತಪಡಿಸುವ ಆಶಯದಲ್ಲಿ ವಿಶೇಷವೇನೂ ಇಲ್ಲ. ಈಗಲಾದರೂ ಸಮ್ಮೇಳನದ ಆಶಯಗಳು ಈಡೇರಲಿ ಎಂದು ಆಶಿಸುತ್ತೇನೆ. ಆದರೆ, ಇದಕ್ಕಾಗಿ ಕನ್ನಡಮ್ಮನ ಗಾಯ ಗಿಲ್ಲಲಾರೆ ಎಂದು ಸೂಚ್ಯವಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.