ಗಾಂಜಾ ಮಾರಾಟ; ವ್ಯಕ್ತಿ ಬಂಧನ (ಸುದ್ದಿ ಸಂಕ್ಷೇಪ)
ಕೆಜಿಎಫ್: ಸಾರ್ವಜನಿಕ ಪ್ರದೇಶದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯ ಸಾಮಿಲ್ ಲೈನ್ ನಿವಾಸಿ ಜಯಕುಮಾರ್ ಎಂಬವನು ನಗರದ ವಾಸನ್ ವೃತ್ತದ ಬಳಿ ಒಂದು ಚೀಲದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪರಕ್ಷಣಾಧಿಕಾರಿ ರಾಜಣ್ಣ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದ ಆತನನ್ನು ಹಿಡಿದು ವಿಚಾರಿಸಿದಾಗ ಗಾಂಜಾವನ್ನು ಆಂಧ್ರದ ಪಲಮನೇರ್ನಿಂದ ತಂದು ಒಂದು ಪ್ಯಾಕೆಟ್ 80 ರಿಂದ 100 ರೂಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಮುಳಬಾಗಲು: ತಾಲೂಕಿನ ಕನ್ನಸಂದ್ರ ಕೆರೆಯಂಚಿನಲ್ಲಿ ಕಳೆದ ವಾರ ಸಿಕ್ಕ ಅಪರಿಚಿತ ಶವದ ಗುರುತನ್ನು ಮುಳಬಾಗಲು ಪೊಲೀಸರು ಭೇದಿಸಿದ್ದಾರೆ. ಅಪರಿಚಿತ ಶವದ ಜೇಬಿನಲ್ಲಿದ್ದ ಫೋಟೋ ಆಧಾರದ ಮೇಲೆ ಆರೋಪಿಗಳನ್ನು ಮುಳಬಾಗಲು ಸರ್ಕಲ್ ಇನ್ಸೆಪೆಕ್ಟರ್ ಶಿವಕುಮಾರ್ ಮತ್ತು ಅಪರಾಧ ವಿಭಾಗದ ಸಬ್ಇನ್ಸೆಪೆಕ್ಟರ್ ಶಂಕರಪ್ಪ ಪತ್ತೆ ಹಚ್ಚಿದ್ದಾರೆ. ಆರೋಪಿಗಳು ಬೆಂಗಳೂರು ನಗರದ ಕಾಟಂನಲ್ಲೂರು ವಾಸಿಗಳಾಗಿದ್ದು ಮೃತ ರಮೇಶ್(45) ನ ಪತ್ನಿ ಗೀತಾ ಮತ್ತು ಆಕೆಯ ಪ್ರಿಯಕರ ಕಿರಾಣಿ ಅಂಗಡಿ ಮಾಲೀಕ ಸುಬ್ರಮಣ್ಯಂ, ಕೊಲೆಗೆ ಸಹಕರಿಸಿದ ನಾಗನನ್ನು ಬಂಧಿಸಲಾಗಿದೆ. ಗೀತಾ ಪತಿ ರಮೇಶ್ ಕೆಲಸ ಕಳೆದುಕೊಂಡು ಕುಡಿತಕ್ಕಾಗಿ ಪ್ರತಿ ದಿವಸ ಹೆಂಡತಿಗೆ ಹಿಂಸೆ ನೀಡುತ್ತಿದ್ದ. ಈ ನಡುವೆ ಮನೆಯ ಸಮೀಪದಲ್ಲಿ ಕಿರಾಣೆ ಅಂಗಡಿ ನಡೆಸುತ್ತಿದ್ದ ಸುಬ್ರಮಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗೀತಾ ಗಂಡನಿಗೆ ಚನ್ನಾಗಿ ಕುಡಿಸಿ ನಂತರ ತನ್ನ ಪ್ರಿಯಕರನ ಸಹಕಾರದೊಂದಿಗೆ ಪತಿಯನ್ನು ಸಾಯಿಸಿ ಮುಳಬಾಗಲು ಬಳಿ ಶವವನ್ನು ಬಿಸಾಡಿದ್ದರು ಎನ್ನಲಾಗಿದೆ.
ಜೂಜಾಟ; 8 ಜನರ ಸೆರೆ
ಚಿಂತಾಮಣಿ: ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ 8 ಜನರ ಬಂಧಿಸಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವೇಗಲಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ವೇಗಲಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಹಾಲಪ್ಪಲ್ಲಿ ಮತ್ತು ಕಟ್ಟಿಗೇನಹಳ್ಳಿ ಗ್ರಾಮದ ಮುನಿಸ್ವಾಮಿ, ವೇಮರೆಡ್ಡಿ, ಬೈರಾರೆಡ್ಡಿ ಸೇರಿದಂತೆ 8 ಜನರನ್ನು ಬಂಧಿಸಿ 2915 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂದಿಸಿ ಸಬ್ ಇನ್ಸೆಪೆಕ್ಟರ್ ಪ್ರವೀಣಣ್ ಕುಮಾರ್ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗ್ರಾಮೀಣರಿಗೆ ಕಾನೂನಿನ ಸಾಕ್ಷರತೆ ಅಗತ್ಯ: ನ್ಯಾ. ಈರಣ್ಣವರ್
ಗುಡಿಬಂಡೆ: ಗ್ರಾಮೀಣ ಜನತೆಗೆ ಕಾನೂನಿನ ಸಾಕ್ಷರತೆ ಹೆಚ್ಚಿಸಿ ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲಿ ಗೌರವಯುತವಾಗಿ ಜೀವಿಸುವಷ್ಟು ಅರಿವು ಮೂಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ. ಈರಣ್ಣವರ್ ತಿಳಿಸಿದರು. ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಿವಿಧ ಸರ್ಕಾರಿ ಇಲಾಖೆಗಳು, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ಗಾಂದಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ರಥದ ಪ್ರವಾಸ ಮತ್ತು ಸಂಚಾರಿ ಜನತಾ ನ್ಯಾಯಲಯ ಎರಡು ದಿನಗಳ ಕಾರ್ಯಕ್ರಮದ ಮೊದಲನೇ ದಿನ ಸಂಜೆ ಪಟ್ಟಣದ ನಾಗರಿಕರಿಗೆ ಕಾನೂನು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಶಿವಪ್ರಸಾದ್, ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ, ತಹಸೀಲ್ದಾರ್ ನಂಜಪ್ಪ, ಉನ್ನತಿ ವಿಶ್ವನಾಥ್, ಕ್ಷೇತ್ರಶಿಕ್ಷಣಾಧಿಕಾರಿ ವೈ.ಸಿ.ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

