ತಾಲೂಕಿನಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತ!
ಬಂಗಾರಪೇಟೆ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬಾಲಕಾರ್ಮಿಕರನ್ನು ಎಲ್ಲಾ ಕೆಲಸಗಳಿಗೆ ದುಡಿಸಿಕೊಳ್ಳುತ್ತಿದ್ದರೂ ತಾಲೂಕು ಆಡಳಿತ ಮೌನ ವಹಿಸಿರುವುದು ಪರೋಕ್ಷವಾಗಿ ಬಾಲ ಕಾರ್ಮಿಕ ಪದ್ಧತಿಗೆ ಬೆಂಬಲ ನೀಡುವಂತಾಗಿದೆ.
18 ವಯಸ್ಸಿನ ಒಳಗಿನ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಅವರನ್ನು ಯಾವುದೇ ಕಾರಣಕ್ಕೂ ಕೂಲಿ ಕೆಲಸಕ್ಕೆ ಕಳುಹಿಸಬಾರದು ಎಂದು ಸರ್ಕಾರ ಹೇಳುತ್ತಾ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡುವ ಸಲುವಾಗಿಯೇ ಪ್ರತ್ಯೇಕ ಕಾರ್ಮಿಕ ಇಲಾಖೆ ಸಹ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಇಲಾಖೆ ಎಲ್ಲಿದೆ ಎಂಬುದು ಪಟ್ಟಣದ ನಾಗರಿಕರಿಗೆ ತಿಳಿದೇ ಇಲ್ಲ. ಪಟ್ಟಣದಲ್ಲಿರುವ ಅಕ್ಕಿ ಗಿರಣಿಗಳಲ್ಲಿ, ಚಹಾ ಅಂಗಡಿಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಹಾಗೂ ಕಟ್ಟಡ ನಿರ್ಮಾಣದಲ್ಲಿ, ಬೆಸ್ಕಾಂ ಇಲಾಖೆ ಕೆಲಸಗಳಲ್ಲಿ ಬಾಲ ಕಾರ್ಮಿಕರು ಪ್ರತಿದಿನ ಕೆಲಸ ಮಾಡುತ್ತಿದ್ದರೂ ಯಾವೊಬ್ಬರು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ ಎಂದರೆ ಸರ್ಕಾರ ಸೂಚನೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆಂದು ತಿಳಿಯುತ್ತದೆ.
ಪಟ್ಟಣದ ಜನಬೀಡಿತ ಪ್ರದೇಶವಾದ ತಾಪಂ ಕಚೇರಿ ಮುಂದೆ ಬೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಕಂಬಗಳ ಬದಲಾಯಿಸುವ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಪಶ್ಚಿಮ ಬಂಗಾಲದ ರಾಜ್ಯದ ಬಾಲ ಕಾರ್ಮಿಕರಿಬ್ಬರು ಕೆಲಸ ಮಾಡುತ್ತಿದ್ದು ಕಂಡು ಬಂತು. ಈ ಬಗ್ಗೆ ಸ್ಥಳದಲ್ಲಿದ್ದ ಗುತ್ತಿಗೆದಾರನ ಸಹಾಯಕರನ್ನು ಪ್ರಶ್ನಿಸಿದರೆ ನಮಗೆ ಗೊತ್ತಿಲ್ಲ ನಮ್ಮ ಮಾಲೀಕರು ಹೇಳಿದಂತೆ ನಡೆದುಕೊಳ್ಳುವುದೇ ನಮ್ಮ ಕೆಲಸವಾಗಿದೆ. ಇಷ್ಟಕ್ಕೂ ಪಶ್ಚಿಮ ಬಂಗಾಲ ರಾಜ್ಯ ಹುಡುಗರು ಬಾಲ ಕಾರ್ಮಿಕರಲ್ಲ. ಅವರಿಗೆ 18ವಯಸು ತುಂಬಿದೆ. ಆ ರಾಜ್ಯದಲ್ಲಿ 20 ವಯಸಿನವರೂ ಚಿಕ್ಕ ಮಕ್ಕಳಂತೆ ಕಾಣುವರು ಎಂದು ಹೇಳಿ ನುಣುಚಿಕೊಂಡರು.
ಈ ಬಗ್ಗೆ ಜೀತ ವಿಮುಕ್ತ ಸಂಘಟನೆಯ ಸಂಚಾಲಕ ರಾಮಚಂದ್ರ ಸ್ಥಳಕ್ಕೆ ಬಂದು ಬಾಲ ಕಾರ್ಮಿಕರನ್ನು ಅದೂ ಅಪಾಯಕಾರಿ ವಿದ್ಯುತ್ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಾಲಕಾರ್ಮಿಕ ಅಧಿಕಾರಿಯ ಗಮನಕ್ಕೆ ದೂರವಾಣಿ ಮುಖಾಂತರ ತಂದರೂ ಅವರು ದೂರಿಗೆ ಕಿವಿ ಕೊಡಲಿಲ್ಲ. ನಂತರ ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗೆ ತಿಳಿಸಿದರೂ ಅವರು ಲಿಖಿತ ದೂರು ನೀಡಿದರೆ ಕ್ರಮಕ್ಕೆ ಮುಂದಾಗುವೆ ಎಂದಷ್ಟೇ ಹೇಳಿ ಪಲಾಯನ ಮಾಡಿದರು.
ಪಟ್ಟಣದಲ್ಲಿ ಬಾಲಕಾರ್ಮಿಕ ಪದ್ದತಿ, ಜೀತ ಪದ್ದತಿ ಜೀವಂತವಾಗಿದ್ದರೂ ಅಧಿಕಾರಿಗಳು ಗಮನ ಹರಿಸದೆ ಗುತ್ತಿಗೆದಾರರೊಂದಿಗೆ ಹಾಗೂ ಮಾಲೀಕರೊಂದಿಗೆ ಶಾಮೀಲಾಗಿ ಮೌನಕ್ಕೆ ಶರಣಾಗಿದ್ದಾರೆಂದು ಜಿವಿಕ ರಾಮಚಂದ್ರ ಆರೋಪಿಸಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶಾಲೆಗೆ ಹೋಗದೆ ಕೂಲಿ ಕೆಲಸಕ್ಕೆ ಹೋಗುತ್ತಿರುವ ಅನಾಥ ಮಕ್ಕಳಿಗೆ ರಕ್ಷಣೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

