ಕೋಲಾರ

ಬಜೆಟ್‌ನಲ್ಲಿ ಜಿಲ್ಲೆ ನಿರ್ಲಕ್ಷ್ಯ ಖಂಡಿಸಿ ಶೆಟ್ಟರ್ ಪ್ರತಿಕೃತಿ ದಹನ

Published On :

ಬಂಗಾರಪೇಟೆ: ರಾಜ್ಯ ಸರ್ಕಾರ ಕೋಲಾರ ಜಿಲ್ಲೆ ಅಭಿವೃದ್ಧಿಯನ್ನು ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ತೀವ್ರವಾಗಿ ಖಂಡಿಸಿ ರೈತ ಸಂಘ ಹಾಗೂ ಹಸಿರುವ ಸೇನೆ ಮುಖಂಡರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೂತ ದಹನವನ್ನು ಮಾಡಿದರು.
ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿಗೆ ಪ್ರತಿ ವರ್ಷ ಹಾಹಾಕಾರ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಎರಡೂ ಜಿಲ್ಲೆಗಳ ರೈತರು ಬಂದ್ ಆಚರಿಸಿ ಸರ್ಕಾರದ ಗಮನ ಸೆಳೆದರು. ಅಂದು ಎರಡೂ  ಜಿಲ್ಲೆಗಳ ಪ್ರತಿನಿಧಿಗಳಿಗೆ ಶಾಶ್ವತ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಡಾ. ಪರಮಶಿವಯ್ಯ ಶಿಪಾರಸ್ಸಿನ ವರದಿ ಅನುಷ್ಟಾನಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಪ್ರಸ್ತಾಪಿಸದೆ ವಚನ ಭ್ರಷ್ಟರಾಗಿದ್ದಾರೆಂದು ಕಿಡಿಕಾರಿದರು.
ಬಯಲುಸೀಮೆಯ ಜಿಲ್ಲೆಗಳಲ್ಲಿನ ರೈತರು, ಕೃಷಿಕಾರ್ಮಿಕರು ಬಹಳ ಕಷ್ಟಪಟ್ಟು ಅಂತರ್ಜಲವನ್ನೇ ನಂಬಿ ಬುದುಕುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕುಸಿದಿರುವುದರಿಂದ ಹಾಗೂ ವಿದ್ಯುತ್ ಸಹ ಕೈಕೊಡುತ್ತಿರುವುದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಈ ಎರಡು ಜಿಲ್ಲೆಗಳ ರೈತರು ಇಷ್ಟೆಲ್ಲಾ ಅವ್ಯವಸ್ಥೆಯಲ್ಲಿದ್ದರೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೆ ಕಡೆಗಣಿಸಿರುವುದನ್ನು ನೋಡಿದರೆ ಕೋಲಾರ ರಾಜ್ಯದಲ್ಲಿದೆ ಎಂಬುದು ಅನುಮಾನ ಕಾಡುತ್ತದೆ ಎಂದರು.
ರೈತರು ತೀವ್ರ ಸಂಕಷ್ಟದಲ್ಲಿರುವಾಗ ರೈತರ ಸಾಲವನ್ನು ಮನ್ನಾ ಮಾಡದೆ ಹಾಗೂ ಬಜೆಟ್‌ನಲ್ಲಿ ರೈತರಿಗಾಗಿ ಯಾವುದೇ ಯೋಜನೆಗಳನ್ನು ಪ್ರಕಟಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನೀವೇ ನೇರ ಕಾರಣರಾಗುವಿರಿ. ಆದ್ದರಿಂದ ಈಗಲಾದರೂ ಎರಡೂ ಜಿಲ್ಲೆಗಳಿದೆ ಶಾಶ್ವತ ನೀರಾವರಿ ಕಲ್ಪಿಸಿ ರೈತರನ್ನು ಉದ್ದಾರ ಮಾಡಬೇಕೆಂದು ಪಟ್ಟು ಹಿಡಿದು ತಾಲೂಕು ಕಚೇರಿ ಮುಂದೆ ಮುಖ್ಯಮಂತ್ರಿ ಶೆಟ್ಟರ್ ಅವರ ಭೂತದಹನ ಮಾಡಿದರು.
ಪ್ರತಿಭಟನೆಯಲ್ಲಿ ತಾಲೂಕು ಅದ್ಯಕ್ಷ ಟಿ.ಎನ್. ರಾಮೇಗೌಡ, ರಾಜ್ಯ ಕಾರ್ಯದರ್ಶಿ ಶಿವಪ್ಪ, ಆಂಜಿ, ಲಕ್ಷ್ಮಣ್,ಶ್ರೀನಿವಾಸಪ್ಪ, ಗಣೇಶಗೌಡ, ವೆಂಕಟೇಶಪ್ಪ, ಚಲಪತಿ, ಸುರೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.