ಬಾಲ್ಯ ವಿವಾಹಕ್ಕೆ ಬ್ರೇಕ್, ಬಾಲಕಿ ಸೇಫ್
ಚಿಕ್ಕಬಳ್ಳಾಪುರ: ಬಾಲಕಿಗೆ ವಿವಾಹ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸ್ ಅಧಿಕಾರಿಗಳು, ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆಯ ಕೃಷ್ಣಮೂರ್ತಿ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಹಳ್ಳಿಯ ಬಾಲಕಿಗೆ ಶುಕ್ರವಾರ ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಪೋಷಕರ ಸಮೇತ ವಧು ವರರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಗುರುವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ಸಹ ನಡೆದಿದೆ.
ಈ ನಡುವೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬಾಲಕಿಗೆ ವಿವಾಹ ಮಾಡಲಾಗುತ್ತಿದೆ ಎಂದು ಡಿಎಫ್‌ಐ ಸಂಘಟನೆಯ ಕಾರ್ಯಕರ್ತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ದೂರು ಸಲ್ಲಿಸಿದರು. ಮದುವೆ ನಡೆಯಲಿದ್ದ ಕಲ್ಯಾಣ ಮಂಟಪಕ್ಕೆ ಪೊಲೀಸರೊಂದಿಗೆ ಆಗಮಿಸಿದ ಅಧಿಕಾರಿಗಳು ಮಾಹಿತಿ ಕೇಳಿ ದಾಖಲೆಗಳನ್ನು ಪರಿಶೀಲಿಸಿದರು. ಆ ಸಂದರ್ಭದಲ್ಲಿ ಬಾಲಕಿಗೆ ಇನ್ನೂ 16 ವರ್ಷ ಎನ್ನುವುದು ದೃಢಪಟ್ಟಿದೆ. ಕಾನೂನು ಪ್ರಕಾರ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು 18 ವರ್ಷ ತುಂಬಿರಬೇಕು. ಈ ವಯಸ್ಸಿನೊಳಗಿರುವವರಿಗೆ ಮದುವೆ ಮಾಡುವುದು ಅಪರಾಧ. ಮದುವೆಯನ್ನು ನಿಲ್ಲಿಸಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದರಿಂದ ವಧು ವರರ ಪೋಷಕರಿಗೆ ಒಂದು ಕ್ಷಣ ದಂಗು ಬಡಿದಂತಾಗಿ ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಳ್ಳಲು ಅವರು ಯತ್ನಿಸಿದರು. ಬಾಲಕಿಗೆ ಬಲವಂತವಾಗಿ ಮದುವೆ ಮಾಡುತ್ತಿಲ್ಲ. ಬೇಕಾದರೆ ಕೇಳಿ ನೋಡಿ. ಇದ್ದಕ್ಕಿದ್ದಂತೆ ಮದುವೆ ನಿಲ್ಲಿಸಿದರೆ ಮದುವೆಗಾಗಿ ಸಾಲಸೋಲ ಮಾಡಿದ ನಾವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿಕೊಂಡರು.
ಆದರೆ, ಅಧಿಕಾರಿಗಳು ಪೋಷಕರ ಮನವೊಲಿಸುವಲ್ಲಿ ಸಫಲರಾದರಲ್ಲದೆ, ಕದ್ದು ಮುಚ್ಚಿ ಮದುವೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂತಲೂ ಎಚ್ಚರಿಕೆ ಕೊಟ್ಟರು. ಹಾಗೆಯೇ ಬಾಲಕಿಯನ್ನು ನಗರದಲ್ಲಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ತಿಳಿ ಹೇಳಲಾಯಿತು.
ನೀರವ ಮೌನ: ಮತ್ತೊಂದೆಡೆ ಕಲ್ಯಾಣ ಮಂಟಪದಲ್ಲಿ ಸಂಭ್ರಮ ಮಾಯವಾಗಿ ನೀರವ ಮೌನ ಆವರಿಸಿತು. ಅಡುಗೆ ಸೇರಿದಂತೆ ಬೇರೆ ಬೇರೆ ರೀತಿಯ ಮದುವೆ ಕೆಲಸಗಳು ಅರ್ಧದಲ್ಲಿಯೇ ಸ್ಥಗಿತಗೊಂಡವು. ಬಂದಿದ್ದ ಬಂಧು ಬಳಗದವರು ಸಪ್ಪೆ ಮೋರೆ ಹಾಕಿಕೊಂಡು ಹಿಂತಿರುಗಿದರು.
ಮದುವೆಗೆಲ್ಲಾ ಸಿದ್ಧತೆಗಳನ್ನು ಕೈಗೊಂಡು ಹಣ ಖರ್ಚು ಮಾಡಲಾಗಿದೆ. ಹುಡುಗಿಯ ತಂದೆಗೆ ಈಗ ಅದನ್ನು ಯಾರೂ ಕೊಡುತ್ತಾರೆ ಎನ್ನುವುದು ಬಂಧು ಬಳಗದವರ ಅಭಿಪ್ರಾಯವಾಗಿತ್ತು. ಮತ್ತೊಂದೆಡೆ ಎರಡೂ ಕಡೆಯವರು ಒಪ್ಪಿರುವ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಒಟ್ಟಾರೆ, ಸರ್ಕಾರವು ಬಾಲ್ಯ ವಿವಾಹ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಅರಿವು ಮೂಡಿಸುತ್ತಿದ್ದರೂ ನಡೆಯುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಲು ನಿಜವಾಗಲೂ ಪೋಷಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

