ಕಾಂಪೌಂಡ್ ಕುಸಿದು ವ್ಯಕ್ತಿಗೆ ಗಾಯ
ಚಿಕ್ಕಬಳ್ಳಾಪುರ: ಶಿಥಿಲಾವಸ್ಥೆಯಲ್ಲಿದ್ದ ಬೆಸ್ಕಾಂ ವಸತಿ ಗೃಹದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ, ಕಾಲು ಮುರಿದು ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ಶನಿವಾರ ನಡೆದಿದೆ.
ನಗರದ ಚಾಮರಾಜಪೇಟೆಗೆ ಹೊಂದಿಕೊಂಡಂತಿರುವ ಬೆಸ್ಕಾಂ ಕಚೇರಿ ವಸತಿ ವಸತಿ ಗೃಹದ ಕಾಂಪೌಂಡ್ ಶಿಥಿಲಾವಸ್ಥೆಯಲ್ಲಿದ್ದು, ತಳಭಾಗ ಸೇರಿದಂತೆ ಅಲ್ಲಲ್ಲಿ ಇಟ್ಟಿಗೆಗಳು ಮುರಿದಿದ್ದರೆ, ಅನೇಕ ಕಡೆ ಗೋಡೆಗಳು ಬಿರುಕು ಬಿಟ್ಟಿವೆ. ಈ ನಡುವೆ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ತೋಯ್ದ ಗೋಡೆ ಬಿರುಕು ಬಿಟ್ಟಿತ್ತು.
ಬೆಳಿಗ್ಗೆ ಇದ್ದಕ್ಕಿದ್ದಂತೆ ರಸ್ತೆಗೆ ಕುಸಿದು ಬಿದ್ದಿದ್ದ ಕಾರಣ, ಆ ಸಮಯದಲ್ಲಿ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಸುಭಾನ್ ಸಿಕ್ಕಿ ಹಾಕಿಕೊಂಡಿದ್ದಾನೆ. ಗೋಡೆ ಕುಸಿತದಿಂದ ಬಂದ ಶಬ್ದಕ್ಕೆ ಸ್ಥಳೀಯರು ಆಗಮಿಸಿ ಸುಭಾನನ್ನು ರಕ್ಷಿಸಿ, ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಗಾಯಾಳುವಿಗೆ ಕಾಲು ಮುರಿದಿದೆ, ಬೆನ್ನಿಗೆ ಗಾಯವಾಗಿದೆ. ಇನ್ನೂ ಕೌಂಪೌಂಡ್ಕುಸಿತಕ್ಕೆ ಸಮೀಪದಲ್ಲಿದ್ದ ಹಂದಿಯೂ ಸಹ ಸಿಕ್ಕಿ ಸಾವನ್ನಪ್ಪಿದೆ.
ಜನರ ಪ್ರತಿಭಟನೆ: ಘಟನೆಯ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಬೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಘೋಷಣೆ ಕೂಗಿದರು. ಸುಭಾನ್ ಎಂಬ ಯುವಕನಿಗೆ ಕಾಲು ಮುರಿದಿದ್ದು ಗಾಯಾಳುವಿನ ಚಿಕಿತ್ಸೆಯ ವೆಚ್ಚವನ್ನು ಇಲಾಖೆಯೇ ಭರಿಸಬೇಕು. ಹಾಗೆಯೇ ಪರಿಹಾರ ನೀಡಬೇಕು. ಜತೆಗೆ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡನ್ನು ಕೆಡುಗುವ ಭರವಸೆ ನೀಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಗಾಯಾಳುವಿನ ಚಿಕಿತ್ಸೆ ಭರಿಸುವ ಮೌಖಿಕ ಭರವಸೆ ನೀಡಿದ್ದನ್ನು ಒಪ್ಪದೇ ಲಿಖಿತ ಭರವಸೆಗೆ ಆಗ್ರಹಿಸಿದರು.
ತಪ್ಪಿದ ಅನಾಹುತ: ಪ್ರಮುಖ ರಸ್ತೆಯಾದ ಬಿ.ಬಿ.ರಸ್ತೆಯಲ್ಲಿ ಸದಾ ಟ್ರಾಫಿಕ್ ಇರುವ ಕಾರಣದಿಂದ ನಗರದ ಸರ್ ಎಂ.ವಿ.ಪ್ರೌಢಶಾಲೆ ಹಾಗೂ ಸೆಂಟ್ ಜೋಸೆಫ್ ಶಾಲೆಯ ಮಕ್ಕಳು ಈ ರಸ್ತೆಯ ಮೂಲಕವೇ ತಮ್ಮ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾದು ಹೋಗುವುದು. ಆದರೆ, ಶನಿವಾರ ಷಷ್ಠಿಹಬ್ಬದ ಪ್ರಯುಕ್ತ ನಡೆಯುತ್ತಿರುವ ಚಿತ್ರಾವತಿ ಜಾತ್ರೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇದ್ದ ಕಾರಣ, ಮಕ್ಕಳ ಓಡಾಟ ಇರಲಿಲ್ಲ. ಪ್ರತಿ ಶನಿವಾರ ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ ಕಾಂಪೌಂಡ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ರಜೆ ಇದ್ದ ಕಾರಣ, ಅಪಾಯ ತಪ್ಪಿದಂತಾಗಿದೆ.
ಈ ನಿಟ್ಟಿನಲ್ಲಿ ಮುಂದಾದರೂ, ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಅನಾಹುತ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

