ವೈಭವದ ಚಿತ್ರಾವತಿ ಜಾತ್ರೆ, ಬ್ರಹ್ಮರಥೋತ್ಸವ
ಚಿಕ್ಕಬಳ್ಳಾಪುರ: ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಚಿತ್ರಾವತಿ ಜಾತ್ರೆ ಮತ್ತು ಬ್ರಹ್ಮರಥೋತ್ಸವ ಶನಿವಾರ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಜಿಲ್ಲೆ ಮಾತ್ರವಲ್ಲದೆ, ಆಂಧ್ರ ಸೇರಿದಂತೆ ಬೇರೆ ಬೇರೆ ಕಡೆಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿದ್ದರು.
ಮಾಘ ಮಾಸದ ಷಷ್ಠಿ ದಿನದಂದು ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯ, ಈಶ್ವರಸ್ವಾಮಿ ದೇವಾಲಯ ಮತ್ತು ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸಾಲು ಸಾಲಾಗಿ ಬಂದ ಭಕ್ತಾದಿಗಳು ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಆಲಯದ ದೇವರುಗಳ ದರ್ಶ ನ ಪಡೆದರು.
ಮಹಿಳೆಯರು ಮತ್ತು ಯುವತಿಯರು ಸೇರಿದಂತೆ ಅನೇಕರು ಹರಕೆ ಹೊತ್ತುಕೊಂಡು ಬಂದು ಆಲಯದ ಸಮೀಪವಿರುವ ಹುತ್ತಕ್ಕೆ ಹಾಲೆರದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರೆ, ಕೆಲ ಭಕ್ತಾದಿಗಳು ದೇವರಿಗೆ ಮುಡಿ ಕೊಟ್ಟರು. ಬೆಳಿಗ್ಗೆ ಸುಮುಹೂರ್ತದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಸುಬ್ರಮಣ್ಯೇಶ್ವರ ಸ್ವಾಮಿ ತೇರಿಗೆ ಗಣ್ಯರು ಚಾಲನೆ ನೀಡಿದರು.
ಬಾಳೆಹಣ್ಣು ಸುರಿಮಳೆ: ನಂತರ ಸುಬ್ರಮಣ್ಯೇಶ್ವರ ಸ್ವಾಮಿ ಮೂರ್ತಿಯನ್ನು ಹೊತ್ತ ತೇರು ಆಲಯದ ಸುತ್ತಲೂ ಸಂಚರಿಸಿತು. ಮನಸ್ಸಿನಲ್ಲಿನ ಹರಕೆಯನ್ನು ನೆನಪಿಸಿಕೊಂಡು ದೇವರ ನಾಮಸ್ಮರಣೆಯೊಂದಿಗೆ ಬಾಳೆಹಣ್ಣನ್ನು ತೇರಿನ ಮೇಲೆ ಎಸೆದರೆ ಫಲಿಸುತ್ತದೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಭಕ್ತಾದಿಗಳಿಂದ ತೇರಿನ ಮೇಲೆ ಬಾಳೆಹಣ್ಣುಗಳ ಸುರಿಮಳೆಯಾಯಿತು.
ಭರ್ಜರಿ ವ್ಯಾಪಾರ: ಜಾತ್ರೆ ಹಿನ್ನೆಲೆಯಲ್ಲಿ ತಲೆ ಎತ್ತಿದ್ದ ಅಂಗಡಿ ಮುಂಗಟ್ಟುಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಜಾತ್ರೆಗೆ ಬಂದವರು ಸಾಮಾನ್ಯವಾಗಿ ಬರುಗು ಬಟಾಸು, ಸಿಹಿ ತಿಂಡಿ ತಿನಿಸು ಖರೀದಿಸಲು ಮುಗಿಬಿದ್ದರು. ಬಿಸಿಲಿನ ಧಗೆಯಲ್ಲಿ ಬೆಂದು ಬಂದವರು ಐಸ್ ಕ್ಯಾಂಡಿ, ಜ್ಯೂಸ್ ಅಂಗಡಿ, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಅಂಗಡಿಗೆ ಮೊರೆ ಹೋಗಿ ಬಾಯಾರಿಕೆ ನೀಗಿಸಿಕೊಂಡರು.
ಪೋಷಕರೊಂದಿಗೆ ಆಗಮಿಸಿದ್ದ ಪುಟಾಣಿಗಳು ತಮಗೆ ಇಷ್ಟ ಬಂದ ಆಟಿಕೆ ಪರಿಕರ ಕೊಡಿಸುವಂತೆ ಪಟ್ಟು ಹಿಡಿದು ತೆಗೆದುಕೊಳ್ಳುತ್ತಿದ್ದರು. ಬೋಂಡಾ, ಸೌತೆಕಾಯಿ ಸೇರಿದಂತೆ ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರವೂ ನಡೆಯಿತು.
ಮಕ್ಕಳ ಮನರಂಜನೆ: ಮನರಂಜನೆ ನೀಡುವ ಜಾಯಿಂಟ್ ವ್ಹೀಲ್ ರೈಲು ಸವಾರಿಯಲ್ಲಿ ಚಿಕ್ಕವರು, ಸಣ್ಣವರು ಎಂಬ ಭೇದಭಾವವಿಲ್ಲದೇ ಹಲವರು ಭಾಗವಹಿಸಿ ಸಂಸತಪಟ್ಟರು.
ವಿಶೇಷ ಬಸ್ ಸೌಕರ್ಯ: ನಗರದಿಂದ ಮೂರು ನಾಲ್ಕು ಕಿ.ಮೀ ದೂರದಲ್ಲಿರುವ ಚಿತ್ರಾವತಿಗೆ ಭಕ್ತಾದಿಗಳು ಕರೆದುಕೊಂಡು ಹೋಗಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಇದರ ಜೊತೆಗೆ, ಆಟೋ, ಕಾರು, ಮ್ಯಾಕ್ಸಿಕ್ಯಾಬ್ ಮತ್ತು ಟೆಂಪೋಗಳು ತಮ್ಮ ಸೇವೆಯಲ್ಲಿ ನಿರತವಾಗಿದ್ದವು. ಕೆಲವರು ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರಿಸುತ್ತಿದ್ದರು.
ಅಲ್ಲಲ್ಲಿ ಅನ್ನಸಂತರ್ಪಣೆ: ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗಾಗಿ ದಾನಿಗಳು ಅಲ್ಲಲ್ಲಿ ಅನ್ನ ಸಂತರ್ಪಣೆ ಕೈಗೊಂಡಿದ್ದರು. ದಣಿವು ದೂರ ಮಾಡಲು ಪಾನಕ, ಮೊಸರು, ಹೆಸರು ಬೇಳೆ ವಿತರಣೆಯೂ ನಡೆಯುತ್ತಿತ್ತು.
ಅಲ್ಲದೆ, ತಮ್ಮ ಮನೆಗಳಿಂದ ತಂದಿದ್ದ ತಿಂಡಿ ತಿನಿಸುಗಳನ್ನು ಚಿತ್ರಾವತಿ ಆಲಯದ ಸಮೀಪದ ತೋಟಗಳಲ್ಲಿ ಭಕ್ತಾದಿಗಳು ಉಣ್ಣುವುದರ ವಾಡಿಕೆಯಿದ್ದು, ಪದ್ಧತಿಯಂತೆ ಹಲವರು ದೇವರಿಗೆ ಪೂಜೆ ಮಾಡಿ ವನಭೋಜನ ಸವಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

