ಕೋಲಾರ

ಕೆಜಿಎಫ್ ನಗರಸಭೆಗೆ ಭಕ್ತವತ್ಸಲಂ ಮತ್ತೆ ಸ್ಪರ್ಧೆ

Published On :

-ಪಾ.ಶ್ರೀ.ಅನಂತರಾಮ್
ಕೋಲಾರ: ಕೆಜಿಎಫ್ ನಗರಸಭೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಮಾಜಿ ಶಾಸಕ ಭಕ್ತವತ್ಸಲಂ ಮತ್ತೊಮ್ಮೆ ಸ್ಪರ್ಧೆ ಮಾಡಿದ್ದಾರೆ.
ಭಕ್ತವತ್ಸಲಂ ಕೆಜಿಎಫ್ ನಗರಸಭೆಗೆ ಸ್ಪರ್ಧಿಸುತ್ತಿರುವುದು ಇದೇನು ಮೊದಲ ಬಾರಿಯಲ್ಲ, ಈ ಹಿಂದೆ ಅವರು ಅಣ್ಣಾಡಿಎಂಕೆ ವತಿಯಿಂದ ನಾಲ್ಕು ಸಾರಿ ಸ್ಪರ್ಧಿಸಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಭಕ್ತವತ್ಸಲಂ 1993-94ನೇ ಸಾಲಿನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದುಕೊಂಡೇ ಸ್ಪರ್ಧಿಸಿ ಗೆದ್ದು ಎಲ್ಲರ ಗಮನ ಸೆಳೆದಿದ್ದರಲ್ಲದೆ ವಿರೋಧಿಗಳಿಂದ ಟೀಕೆಗೂ ಗುರಿಯಾಗಿದ್ದರು.
ಈ ಬಾರಿ ಅವರು ವಾರ್ಡ್ ನಂ.29 ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿಯಲು ನಿಶ್ಚಯಿಸಿದ್ದಾರೆ, ನಗರಸಭೆಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಭಕ್ತವತ್ಸಂ ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನಿಂದ ಅಭ್ಯರ್ಥಿಯಾಗುವುದಕ್ಕೂ ಕಸರತ್ತು ನಡೆಸಿರುವುದಲ್ಲದೆ ಕೆಜಿಎಫ್ ನಗರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ನಗರಸಭೆಗೆ ಮತ್ತೊಮ್ಮೆ ಪ್ರವೇಶ ಮಾಡಲು ನಿರ್ಧರಿಸಿದ್ದಾರೆ.
ಮಾಜಿ ಶಾಸಕ ಭಕ್ತವತ್ಸಲಂ ಅವರು ಈ ಬಾರಿ ತಾವು ಸ್ಪರ್ಧಿಸುವುದರ ಜತೆಗೆ ತಮ್ಮ ಪತ್ನಿ ಚಿತ್ರ ಅವರನ್ನು ವಾರ್ಡ್ ನಂ.18 ಹಾಗೂ ಸಹೋದರ ಕುಲಶೇಖರನ್ ಅವರನ್ನು ವಾರ್ಡ್ 16 ರಿಂದ ಕಣಕ್ಕೆ ಇಳಿಸಲು ನಿರ್ಧರಿಸಿ ಪತ್ನಿ ಮತ್ತು ಸಹೋದರನಿಂದ ನಾಮಪತ್ರ ಸಲ್ಲಿಕೆ ಮಾಡಿಸುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ಹಾಲಿ ಅಧ್ಯಕ್ಷ ಹಾಗೂ ಮಾಜಿ ಶಾಸಕರ ಬಲಗೈ ಭಂಟರಾದ ದಯಾನಂದ್ ಅವರು ಸಹ ಮತ್ತೆ ವಾರ್ಡ್ ನಂ.18ರಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಶಾಸಕ ವೈ. ಸಂಪಂಗಿ ಅವರು ಸಹ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಜಿಎಫ್ ನಗರಸಭೆಯ ಎಲ್ಲಾ 35 ವಾರ್ಡುಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ, ಶಾಸಕರ ಮೇಲೆ ಮುನಿಸಿಕೊಂಡಿದ್ದ ಹಳೇ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಿನ್ನಾಬಿಪ್ರಾಯ ಬದಿಗಿಟ್ಟು ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಒಮ್ಮತಕ್ಕೆ ಬಂದು ಸೌಹಾರ್ದತೆಯಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಸಿರುವುದು ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಶಾಸಕ ಸಂಪಂಗಿ ಅವರಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಚುನಾವಣೆಯಲ್ಲಿ ಕೋಲಾರದಲ್ಲಿ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿಗಳು ಸಿಗದೆ ಐದಾರು ವಾರ್ಡುಗಳಿಗೆ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿತ್ತು. ಆದರೆ ಇವರ್ಯಾರು ಗೆಲ್ಲುವುದಕ್ಕೆ ಆಗಿರಲಿಲ್ಲ. ಈ ಬಾರಿ 28ಕ್ಕೂ ಹೆಚ್ಚು ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಹುಡುಕಿ ನಾಮಪತ್ರ ಸಲ್ಲಿಸಲಾಗಿದೆ.
ಅಲ್ಪಸಂಖ್ಯಾತರು ಸ್ಪರ್ಧಿಸಲು ಅವಕಾಶವಿರುವ 13 ವಾರ್ಡುಗಳಿಗೆ ಬಿಜೆಪಿಯಿಂದ ಸ್ಪರ್ಧಿಸಲು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಯಾವುದೇ ಕಾರ್ಯಕರ್ತ ಸಿಗಲಾರ ಎಂದು ಸ್ವತಃ ಬಿಜೆಪಿ ಮುಖಂಡರೇ ಬಾವಿಸಿದ್ದರಾದರೂ ಈ ಬಾರಿ 3ರಿಂದ 4 ವಾರ್ಡುಗಳಲ್ಲಿ ಅಭ್ಯರ್ಥಿಗಳು ಸಿಕ್ಕಿರುವುದರಿಂದ ಮುಖಂಡರು ಸಂತಸ ವ್ಯಕ್ತವಡಿಸಿದ್ದಾರಲ್ಲದೆ, ಬಿ.ಫಾರಂ ನೀಡುವ ಮೂಲಕ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲವೆಂಬುದನ್ನು ತೋರ್ಪಡಿಸಲು ಮುಂದಾಗಿದ್ದಾರೆ.
ಬಂಗಾರಪೇಟೆ ಪುರಸಭೆಗೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಕೆಲವರು ಈ ಬಾರಿ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪನವರು ಜೆಡಿಎಸ್ ಸೇರಿರುವುದರಿಂದ ಇವರುಗಳು ಸಹ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧೆಗಳಿದಿದ್ದಾರೆ. ಕೆಜೆಪಿ ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೊಲಿಕೆ ಮಾಡಿದಲ್ಲಿ ಕೆಜಿಎಫ್‌ನಲ್ಲಿ ಹೆಚ್ಚು ಬಲಿಷ್ಟವಾಗಿದ್ದು 15ಕ್ಕೊ ಹೆಚ್ಚು ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ.

ಕೆಜಿಎಫ್: 50 ಅಭ್ಯರ್ಥಿಗಳ ನಾಮಪತ್ರ
ಕೆಜಿಎಫ್: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಜಿ ಶಾಸಕರು ಸೇರಿದಂತೆ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದರು.   ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಂ. ಭಕ್ತವತ್ಸಲಂ ಅವರ ಪತ್ನಿ ಚಿತ್ರಾ ಭಕ್ತವತ್ಸಲಂ ಹಾಗೂ ಸಹೋದರ ಕುಲಶೇಖರ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಆಯಾ ವಾರ್ಡ್‌ಗಳ ಅಭ್ಯರ್ಥಿಗಳು ನಗರಸಭೆಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು. ಈ ವೇಳೇ ನಗದರ ಮುಖ್ಯ ರಸ್ತೆಯಲ್ಲಿ  ಪಟಾಕಿಗಳನ್ನು ಸಿಡಿಸಿ ವಾದ್ಯಗೋಷ್ಠಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ  ಬೆಂಬಲಿಗರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮಾಡಿದರು. ಇದೇ ವೇಳೆ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಅದೇ ರೀತಿ ನಗರಸಭಾ ಮಾಜಿ ಅಧ್ಯಕ್ಷ ದಾಸ್ ಚಿನ್ನಸವರಿ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಯ್ಯ, ಕೊದಂಡನ್, ಅಶೋಕ್, ರಾಜ, ಜಿ.ಕುಮಾರ್, ಕೆ.ಸಿ.ಮುರಳಿ ಸೇರಿದಂತೆ ಇತರೇ ವಾರ್ಡ್‌ಗಳ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಭೇಟಿ: ಕೆಜಿಎಫ್‌ನ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳು ಹಾಗೂ ಬಂದೋಬಸ್ತ್ ವ್ಯವಸ್ಥೆ ವೀಕ್ಷಿಸಲು ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಅವರು ನಗರಸಭೆಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಪೌರಾಯುಕ್ತ ವಿ. ಬಾಲಚಂದರ್, ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗಳ ಬಳಿ ಕೆಜಿಎಫ್ ನಗರಸಭೆ ವ್ಯಾಪ್ತಿಗೆ ಬರುವ ಎಲ್ಲಾ 35 ವಾರ್ಡ್‌ಗಳಲ್ಲಿ  112 ಬೂತ್‌ಗಳಲ್ಲಿ 15 ಸೂಕ್ಷ್ಮದ ಬಗ್ಗೆ ಹಾಗೂ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ವಿವರಣೆ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.