ಪಿಎಸ್ಐ ವಿರುದ್ಧ ಕ್ರಮಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಕೋಲಾರ, ಜು.1
ಜೀತಮುಕ್ತನಾಗಿರುವ ದಲಿತ ಜನಾಂಗಕ್ಕೆ ಸೇರಿದ ಕೃಷ್ಣಪ್ಪ ಎಂಬುವರ ಜಮೀನು ಕಬಳಿಕೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳದೆ ದೂರುದಾರರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ವೇಮಗಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಕೆ.ಕೆ. ರಘು ಅವರ ವಿರುದ್ಧ ಶಿಸ್ತಿನ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ)ಯಿಂದ ವೇಮಗಲ್ ಠಾಣೆ ಮುಂದೆ ನಡೆದ ಪ್ರತಿಭಟನೆಯಲ್ಲಿ ದಲಿತರು ಕುರಿ, ಮೇಕೆ ಹಾಗೂ ಗೃಹೋಪಯೋಗಿ ವಸ್ತುಗಳ ಸಮೇತ ಪ್ರತಿಭಟನೆ ನಡೆಸಿ ತಪ್ಪಿಸ್ಥರನ್ನು ಶಿಕ್ಷಿಸುವಂತೆ ಒತ್ತಾಯಿಸಿದರು.
ಮೂರು ಗಂಟೆಗಳ ಕಾಲ ನಡೆದ ಪ್ರತಿಭಟನೆ ನಡೆಸಿದ ದಲಿತರು ಸ್ಥಳಕ್ಕೆ ಜಿಲ್ಲಾ ಎಸ್ಪಿ ಬರುವವರಗೆ ಹಾಗೂ ಆರೋಪಿಗಳ ವಿರುದ್ಧ ದೂರು ದಾಖಲು ಮಾಡುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಡಿ.ವೈ.ಎಸ್.ಪಿ. ಶ್ರೀ ಹರಿ ಬರಗೂರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿ ಕೃಷ್ಣಪ್ಪನ ಮೇಲೆ ದೌರ್ಜನ್ಯವೆಸಗಿರುವ ಆರೋಪಿಗಳ ವಿರುದ್ಧ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವುದಲ್ಲದೆ, ದಲಿತರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು.
ವೇಮಗಲ್ ಹೋಬಳಿ ಚೋಳಘಟ್ಟ ಗ್ರಾಮದ ವಾಸಿ ಜೀತಮುಕ್ತನಾದ ದಲಿತ ಕೃಷ್ಣಪ್ಪನಿಗೆ ಸೇರಿದ 3.8 ಎಕರೆ ಜಮೀನು ಇದ್ದು, ಇದೇ ಗ್ರಾಮದ ಸಿದ್ದಲಿಂಗಪ್ಪ, ಬಸವರಾಜು, ಚಂದ್ರಪ್ಪ, ಚೆನ್ನಬಸಪ್ಪ, ಮಲ್ಲಿಕಾರ್ಜುನ ಮುಂತಾದವರು ಆಕ್ರಮ ಗುಂಪು ಕಟ್ಟಿಕೊಂಡು ಜಮೀನು ಬಗ್ಗೆ ಯಾವುದೇ ಸಂಬಂಧವಿಲ್ಲದಿದ್ದರೂ ಕೃಷ್ಣಪ್ಪನ ಮೇಲೆ ದೌರ್ಜನ್ಯ ಮಾಡಿರುವ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿಯು ಕೃಷ್ಣಪ್ಪನ ಪರವಾಗಿ ಪ್ರತಿಭಟನೆ ನಡೆಸಿದೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಟಿ. ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಜಿಲ್ಲಾಧ್ಯಕ್ಷ ಕಾರಬೆಲೆ ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಮುನಿ ಆಂಜಿನಯ್ಯ, ಬಂಗಾರಪೇಟೆಯ ಕೆ.ವಿ. ಕೃಷ್ಣ, ಮೇಲೇರಿ ವೆಂಕಟೇಶ್, ಮುನಿಸ್ವಾಮಿ ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

