ಕೋಲಾರ

ರೋಗ ರುಜಿನಗಳ ಭೀತಿಯಲ್ಲಿ ಸಾರ್ವಜನಿಕರು

Published On :

ಕ.ಪ್ರ. ವಾರ್ತೆ ,  ಬಾಗೇಪಲ್ಲಿ ,  ಜು.2
ಸ್ವಚ್ಛತೆ ಕಾಪಾಡಬೇಕಾದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪಟ್ಟಣದಲ್ಲಿ ನಾನಾ ರೋಗರುಜಿನಗಳಿಗೆ ಬಲಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿನ ಚರಂಡಿಗಳಲ್ಲಿ ತುಂಬಿ ತುಳುಕಾಡುತ್ತಿರುವ ಕಸ ಕಡ್ಡಿ, ಹೂಳಿನಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿದ್ದು ದುರ್ನಾತಕ್ಕೆ ಕಾರಣವಾಗಿದೆ.  ಅನೈರ್ಮಲ್ಯದಿಂದ ಚರಂಡಿಗಳು ಸೊಳ್ಳೆ ಮತ್ತು ನೊಣಗಳ ಉಗಮ ಸ್ಥಾನವಾಗಿ ಪರಿವರ್ತನೆಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಲೇರಿಯಾ, ಚಿಕುನ್‌ಗುನ್ಯ, ಡೆಂಘೀ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬಲಿಯಾಗುವಂತಹ ಭೀತಿಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಡೆಂಘೀ ಜ್ವರ ಕಾಣಿಸಿಕೊಂಡಿದ್ದು ಪುರಸಭೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸುವ ಮೂಲಕ ಜನರ ಭೀತಿಯನ್ನು ಹೋಗಲಾಡಿಸುತ್ತಾರೆ ಎಂದುಕೊಂಡಿದ್ದ ಸಾರ್ವಜನಿಕರು, ಇದೀಗ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಪಟ್ಟಣದ 16 ನೇ ವಾರ್ಡಿನ ವಾಸಿ ರವಿ ಎಂಬುವರ ಪುತ್ರ ರಾಜು(10), ಗಂಗಾಧರ ಎಂಬುವರ ಮಗ ನರೇಶ್(11)ಅವರು ಕಳೆದ 10 ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದು ಈ ಇಬ್ಬರು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಷಯ ಬೆಳಕಿಗೆ ಬಂದ ನಂತರ ಸಾರ್ವಜನಿಕರು ಇನ್ನೂ ಜಾಸ್ತಿ ಭಯಭೀತರಾಗಿದ್ದಾರೆ. ಪುರಸಭೆಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಸೊಳ್ಳೆಗಳಿಂದ ಬರಬಹುದಾದಂತಹ ಮಲೇರಿಯಾ, ಚಿಕುನ್‌ಗುನ್ಯಾ, ಡೆಂಘೀಯಂತಹ ಮಾರಕ ರೋಗಗಳಿಂದ ಮುಕ್ತಗೊಳಿಸುವ ನಿಟ್ಟೆನಲ್ಲಿ ಮುಂಜಾತಾ ಕ್ರಮವಾಗಿ ಪಟ್ಟಣದ ಎಲ್ಲಾ ಚರಂಡಿಗಳಲ್ಲಿ ತುಂಬಿಕೊಂಡಿರುವ ಕಸಕಡ್ಡಿ ಹಾಗೂ ಹೂಳನ್ನು ತೆಗೆದು ಚರಂಡಿಗಳಲ್ಲಿನ ಕೊಳಚೆಯ ನೀರು ಸರಾಗವಾಗಿ ಹರಿಯುವಂತೆ ಮಾಡುವುದರ ಜೊತೆಗೆ ಸೊಳ್ಳೆಗಳನ್ನು ನಿಯಂತ್ರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಳೆದ ಸುಮಾರು ದಿನಗಳಿಂದ ಪುರಸಭೆಯವರು ಈ ಭಾಗದಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಈ ಭಾಗದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದು ಅನೇಕ ಕಾಯಿಲೆಗಳು ಹರಡಲು ಕಾರಣವಾಗಿದೆ. ಪುರಸಭೆಯವರು ಮಾತ್ರವೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದುಕೊಳ್ಳದೇ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಬಳಿ ಸ್ವಚ್ಛತೆ ಕಾಪಾಡಿಕೊಂಡಾಗ ಸಾಂಕ್ರಾಮಿಕ ಕಾಯಿಲೆಗಳಿಂದ ಕಾಪಾಡಿಕೊಳ್ಳಬಹುದು ಎಂದು ಪುರಸಭೆಯ ಸದಸ್ಯ ಮಹಮ್ಮದ್ ಆಕ್ರಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಪುರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳವುದರ ಜತೆಗೆ ಸಾರ್ವಜನಿಕರಲ್ಲೂ ಜಾಗೃತಿ ಮೂಢಿಸಬೇಕು. ಸಾಂಕ್ರಾಮಿಕ ರೋಗಗಳು ಹರಡಿ ಜನರು ತೊಂದರೆ ಅನುಭವಿಸದಂತೆ ನೋಡಿಕೊಳ್ಳಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.