ಕೋಲಾರ

'ಮಕ್ಕಳ ಅನ್ನಗಳ್ಳರನ್ನು ಮಟ್ಟ ಹಾಕಿ'

Published On :

ಬಂಗಾರಪೇಟೆ: ಬಡ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಸರ್ಕಾರಿಗೆ ಶಾಲೆಗಳಿಗೆ ಪೂರೈಸುವ ಬಿಸಿಯೂಟ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಸರ್ಕಾರ ಈ ನಿಟ್ಟಿನಲ್ಲಿ  ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಬಡ ಮಕ್ಕಳು ಬಿಸಿಯೂಟದಿಂದ ವಂಚಿತರಾಗುವರು ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ವರ್ಷದ ಬಳಿಕ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ವೈ.ಎ.ನಾರಾಯಣಸ್ವಾಮಿ ಬುಧವಾರ ಪಟ್ಟಣದ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ, ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವ್ಯಾಪಕ ದೂರು: ಗ್ರಾಮೀಣ ಭಾಗದ ಬಡ ಮಕ್ಕಳು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ನೆರವಾಗಲೆಂದು ಆರಂಭಿಸಿರುವ ಬಿಸಿಯೂಟ ಯೋಜನೆಯಲ್ಲಿ ಶಾಲೆಗಳಿಗೆ ಅಕ್ಕಿ ಪೂರೈಸುವ ಗುತ್ತಿಗೆದಾರರು ತೂಕದಲ್ಲಿ ಮೋಸ ಮಾಡುತ್ತಾ 50 ಕೆಜಿಗೆ 45 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಇದರಿಂದ ಮಕ್ಕಳಿಗೆ ಹೊಟ್ಟೆ ತುಂಬ ಅನ್ನ ಸಿಗದೆ ವಂಚಿತರಾಗಿದ್ದಾರೆ ಈ ಬಗ್ಗೆ ತುಮಕೂರು,ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕ ದೂರುಗಳು ಬಂದಿವೆ ಈ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಅನ್ನದಲ್ಲಿ ಕನ್ನ ಹಾಕುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರೌಢ ಶಾಲಾ ಮಕ್ಕಳಿಗೂ ಅನ್ಯಾಯ: ಪ್ರೌಢ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿಯೂ ಅಗತ್ಯ ಬಟ್ಟೆ ಪೂರೈಸದೆ ಕಡಿಮೆ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ಎಲ್ಲೆಡೆ ಕೊರತೆ ಇರುವ ಉಪನ್ಯಾಸಕರನ್ನು ತ್ವರಿತವಾಗಿ ನೀಗಿಸಬೇಕೆಂದು ಆಗ್ರಹಿಸಿದರು.  
ಅಧಿಕಾರಿಗಳ ವೈಫಲ್ಯ: ಶಾಲೆಗಳು ಪ್ರಾರಂಭವಾಗಿ ತಿಂಗಳಾಗುತ್ತಿದ್ದರೂ 9ನೇ ಮತ್ತು 10ನೇ ತರಗತಿಗೆ ಕೆಲವು ಪಠ್ಯ ಪುಸ್ತಕಗಳನ್ನು ಸರ್ಕಾರ ಇನ್ನೂ ಪೂರೈಸಿಲ್ಲ ಇದಕ್ಕೆ ನೇರ ಹೊಣೆ ಶಿಕ್ಷಣ ಇಲಾಖೆ ಅಧಿಕಾರಿಗಳ ವೈಫಲ್ಯವೇ ಕಾರಣವೆಂದು ಟೀಕಿಸಿದರು. ಅತಿಥಿ ಉಪನ್ಯಾಸಕರಿಗೆ ನೀಡುವ ವೇತನವನ್ನು ಕನಿಷ್ಟ ಪಕ್ಷ 10 ಸಾವಿರಕ್ಕೆ ಏರಿಸಬೇಕು ಎಂದು ಹೇಳಿ ಪಟ್ಟಣದಲ್ಲಿರುವ ಬಾಲಕರ ಕಾಲೇಜು ಕಟ್ಟಡ ಶಿಥಿಲವಾಗಿದ್ದು ಸರ್ಕಾರ ಕೂಡಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಇದಕ್ಕೆ ಸ್ಥಳೀಯ ಶಾಸಕರೊಂದಿಗೆ ತಾವು ಕೈ ಜೋಡಿಸುವುದಾಗಿ ತಿಳಿಸಿದರು.
ಶಾಶ್ವತ ನೀರಾವರಿಗೆ ಆದ್ಯತೆ ನೀಡಿ: ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ದಿನ ಡಾ-ಪರಮಶಿವಯ್ಯ ಶಿಪಾರಸಿನಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಬೇಕು ಮತ್ತು ಈ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಸದನ ಮತ್ತು ಹೊರಗೆ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ, ಶಂಕರಪ್ಪ,ನಟರಾಜ್, ಎಲ್.ರಾಮಕೃಷ್ಣಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.