ನಾಳೆ ಮಲೇರಿಯಾ ವಿರೋಧಿ ಮಾಸಾಚರಣೆ
ಕೋಲಾರ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧ ಮಾಸಾಚರಣೆಯನ್ನು ಜು.5ರಂದು ಬೆಳಿಗ್ಗೆ 10.30 ಗಂಟೆಗೆ ಕೋಲಾರ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ಜಾಥಾಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ತಾ.ಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಉಪಾಧ್ಯಕ್ಷೆ ಎಂ. ಸರಸ್ವತಿ ಭಾಗವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಟಿ. ಗಣೇಶ್ ಕರಪತ್ರಗಳ ಬಿಡುಗಡೆ ಮಾಡಲಿದ್ದಾರೆ. ಮಲೇರಿಯಾ ವಿರೋಧ ಮಾಸಾಚರಣೆ ಜಾಥವನ್ನು ಅಂದು ಬೆಳಿಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ಎಂ.ಜಿ.ರಸ್ತೆ, ಅಮ್ಮವಾರಿಪೇಟೆ ಸರ್ಕಲ್, ಎಂ.ಬಿ.ರಸ್ತೆ, ಮೆಕ್ಕೆ ವೃತ್ತ, ಹಳೆ ಬಸ್ನಿಲ್ದಾಣ ಮೂಲಕ ಸಾಗಿ ನಚಿಕೇತನ ನಿಲಯದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ
ಗೌರಿಬಿದನೂರು: ಪಟ್ಟಣದ ಟಿಪ್ಪುನಗರದಲ್ಲಿರುವ ಶಾರದ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯ ವಿಧ್ಯಾರ್ಥಿಗಳಿಗೆ ಪಟ್ಟಣದ ಶ್ರೀನಿವಾಸ ಅಯ್ಯಂಗಾರ್ ಬೇಕರಿ ಮಾಲೀಕ ಹರೀಶ್ಕುಮಾರ್ ಉಚಿತವಾಗಿ ಲೇಖನ ಸಾಮಗ್ರಿ ವಿತರಣೆ ಮಾಡಿದರು. ಪಠಾಣ್ ಸೈಫುಲ್ಲಾ ಹಾಜರಿದ್ದರು.
'ಹಳ್ಳಿಗಳಲ್ಲೂ ರಕ್ತದಾನ ಹೆಚ್ಚಾಗಲಿ'
ಬಾಗೇಪಲ್ಲಿ: ರಕ್ತದಾನ ಶಿಬಿರಗಳು ಕೇವಲ ನಗರ ಮತ್ತು ಪಟ್ಟಣಗಳಿಗೆ ಮಾತ್ರ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ಹೆಚ್ಚು ನಡೆಯಬೇಕು ಎಂದು ನ್ಯಾಯಾಧೀಶ ಎಂ.ಎನ್.ರಮೇಶ್ ಸಲಹೆ ನೀಡಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಟಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರಲ್ಲಿ ಇಂದಿಗೂ ರಕ್ತದಾನ ಮಾಡಿದರೆ, ತೊಂದರೆಗಳು ಆಗುತ್ತವೆ ಎಂಬ ತಪ್ಪು ಕಲ್ಪನೆ ಇದ್ದು ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಈ ರೀತಿಯ ರಕ್ತದಾನ ಶಿಬಿರಗಳನ್ನು ನಡೆಸುವುದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ರೆಡ್ಕ್ರಾಸ್ ಸಂಸ್ಥೆಯ ಡಾ. ಬಾಬುರೆಡ್ಡಿ ಮಾತನಾಡಿ, ರು. 1 ಕೋಟಿ ವೆಚ್ಚದಲ್ಲಿ ರಕ್ತ ಶೇಖರಣಾ ಘಟಕ ನಿರ್ಮಾಣ ಮಾಡಲು ಯೋಜನೆ ಸಿದ್ದಪಡಿಸಲಾಗಿದೆ. ಶೀಘ್ರದಲ್ಲೇ ಅಧುನಿಕ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದರು. ತಹಸೀಲ್ದಾರ್ ಎಂ.ಎ.ಪದ್ಮ, ತಾಲೂಕು ರೆಡ್ಕ್ರಾಸ್ ಕಾರ್ಯದರ್ಶಿ ಎ.ಜಿ. ಸುಧಾಕರ್ ಮತ್ತಿತರರು ಮಾತನಾಡಿದರು. ವಕೀಲ ಸಂಘದ ಅಧ್ಯಕ್ಷ ಎ.ನಂಜುಂಡ, ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಹೇಮಂತ್ ಸಾವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಬೈಕ್, ಮನೆಗೆ ಬೆಂಕಿ
ಕೋಲಾರ: ಮನೆ ಮುಂದೆ ನಿಲ್ಲಿಸಿದ್ದ ಮೋಟಾರ್ ಬೈಕನ್ನು ದುಷ್ಕರ್ಮಿಗಳು ಸುಟ್ಟಿರುವ ಘಟನೆ ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿನಅಂಬೇಡ್ಕರ್ ನಗರದಲ್ಲಿ ಸಂಭವಿಸಿದೆ. ಅಂಬೇಡ್ಕರ್ ನಗರದ ಮೂರನೇ ಕ್ರಾಸ್ನಲ್ಲಿರುವ ನಿವೃತ್ತ ನೌಕರ ಕೃಷ್ಣಪ್ಪರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಬೈಕ್ ಮಾತ್ರವಲ್ಲದೆ, ಮನೆಗೂ ಬೆಂಕಿ ಹರಡಿ ಸಾವಿರಾರು ರುಪಾಯಿ ನಷ್ಟ ಉಂಟಾಗಿದೆ. ಕೃಷ್ಣಪ್ಪರ ಅಳಿಯ ವೆಂಕಟೇಶ್ ಪಲ್ಸರ್ ಬೈಕನ್ನು ಮನೆಯ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದರು. ಮಂಗಳವಾರ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಬೈಕ್ಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ
ಕೋಲಾರ: ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ರು. 7 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಒವರ್ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶಾಸಕ ವರ್ತೂರು ಪ್ರಕಾಶ್ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಗ್ರಾಮದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಗಾಗಿ ಒವರ್ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದು, ಗ್ರಾಮಸ್ಥರು ಒಗ್ಗಟ್ಟಿನಿಂದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದರು. ಬೆಗ್ಲಿ ಪ್ರಕಾಶ್, ರಘುರಾಂ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೇಗೌಡ, ಮಾಜಿ ಸೆನೆಟ್ ಸದಸ್ಯ ಪಿಳ್ಳಪ್ಪ, ನಂಜುಂಡಪ್ಪ, ನಂಜುಂಡಗೌಡ, ವೆಂಕಟಾಚಲಯ್ಯ, ಮಂಜುನಾಥ್, ಶ್ರೀನಿವಾಸ್, ಬಾಬು, ಉದ್ದಂಡಪ್ಪ ಉಪಸ್ಥಿತರಿದ್ದರು.
ಈದ್ಗಾ ಕಟ್ಟಡಕ್ಕೆ ಗುದ್ದಲಿ ಪೂಜೆ
ಗೌರಿಬಿದನೂರು: ಪಟ್ಟಣದ ಹೊರವಲಯದ ಉಡುಮಲೋಡು ರಸ್ತೆಯಲ್ಲಿ ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವಈದ್ಗಾ ಕಟ್ಟಡಕ್ಕೆ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮುಸ್ಲಿಂ ಜನಾಂಗದ ಸಣ್ಣ ರೈತರಿಗೆ ಉಚಿತವಾಗಿ ಬೋರ್ವೆಲ್ಗಳನ್ನು ಕೊರೆಯಲು ಸಹಾಯ ಮಾಡುವುದಾಗಿ ತಿಳಿಸಿದರು. ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ನೀಡಲು ಖಾಸಗಿ ಸಂಸ್ಥೆ ವತಿಯಿಂದ ದಾಖಲೆ ಸಂಗ್ರಹಣ ಕಾರ್ಯವನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಹಾಯಹಸ್ತ ನೀಡುವುದಾಗಿ ತಿಳಿಸಿದರು. ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎನ್. ಶಿವಶಂಕರರೆಡ್ಡಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹನುಮಂತರೆಡ್ಡಿ, ಜಮಾತಿ ಅಧ್ಯಕ್ಷ ಪಠಾಣ್ ರಹಮತ್ತುಲ್ಲಾ, ಕಾರ್ಯದರ್ಶಿ ದಸ್ತಗೀರ್ಸಾಬ್, ಮತ್ತು ಸದಸ್ಯರು, ಪುರಸಭ ಸದಸ್ಯರಾದ ಕಲೀಂ ಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಕೇಬಲ್ ವೈರು ಕಳವು
ಚಿಕ್ಕಬಳ್ಳಾಪುರ: ರೈತರ ಜಮೀನುಗಳಲ್ಲಿ ಪಂಪ್ಸೆಟ್ಗೆ ಅಳವಡಿಸಿದ್ದ ಕೇಬಲ್ ವೈರುಗಳನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಮೈಲಪನಹಳ್ಳಿಯಲ್ಲಿ ನಡೆದಿದೆ. ರೈತರು ಸಾಲಸೋಲ ಮಾಡಿ ಬೆಳೆಗಳನ್ನಿಡುತ್ತಿದ್ದು ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಹಾಯಿಸಲು ಪಂಪ್ಸೆಟ್ಗಳಿಗೆ ಕೇಬಲ್ ವೈರು ಅಳವಡಿಸಿರುವುದನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗುತ್ತಿದ್ದಾರೆ. ತಾಲೂಕಿನ ಮೈಲಪನಹಳ್ಳಿಯ ರೈತರಾದ ನಾರಾಯಣಪ್ಪ, ನಾರಾಯಣಸ್ವಾಮಿ, ನಾಸೀರ್, ಬಾಬಾಜಾನ್, ಸುರೇಶ್, ಮುನಿರಾಜು ಸೇರಿದಂತೆ ಅನೇಕರ ತೋಟಗಳಲ್ಲಿ ಹಾಕಿದ್ದ ವೈರುಗಳು ಕಳವಾಗಿದ್ದು, ರೈತರು ಕಷ್ಟಕ್ಕೆ ಗುರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

