ಕೋಲಾರ

ಚಿಕ್ಕಬಳ್ಳಾಪುರ ಮಿನಿ ವಿಧಾನಸೌಧದಲ್ಲಿ ಶಾಸಕ ಸುಧಾಕರ್ ಕಚೇರಿ ಕಾರ್ಯಾರಂಭ

Published On :

ಚಿಕ್ಕಬಳ್ಳಾಪುರ: ಕ್ಷೇತ್ರದ ಜನರಿಂದ ಅಹವಾಲುಗಳನ್ನು ಸ್ವೀಕರಿಸುವ ಸಲುವಾಗಿ ನಗರದ ಮಿನಿ ವಿಧಾನಸೌಧದಲ್ಲಿ (ತಹಸೀಲ್ದಾರ್ ಕಚೇರಿ) ಶಾಸಕ ಕೆ.ಸುಧಾಕರ್ ಅವರ ಕಚೇರಿ ಕಾರ್ಯಾರಂಭಿಸಿದೆ. ಈ ಹಿಂದಿನ ಶಾಸಕರು ಉಪ ವಿಭಾಗಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಶಾಸಕರ ಭವನದಲ್ಲಿ ಕಚೇರಿಯನ್ನು ಪ್ರಾರಂಭಿಸಿದ್ದರು. ಆದರೆ, ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಕಚೇರಿಗೆ ಹೆಚ್ಚಿಗೆ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸುಲಭವಾಗಿ ಜನರೊಂದಿಗೆ ಬೆರೆಯಬಹುದೆಂಬ ಉದ್ದೇಶದಿಂದ ಶಾಸಕ ಕೆ.ಸುಧಾಕರ್ ತಮ್ಮ ಕಚೇರಿಯು ಮಿನಿ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಶುಕ್ರವಾರ ತಮ್ಮ ಕಚೇರಿಯಲ್ಲಿ ಸಾಂಕೇತಿಕವಾಗಿ ಅಹವಾಲುಗಳನ್ನು ಆಲಿಸಿದ ಶಾಸಕ ಸುಧಾಕರ್, ಇನ್ನು ಮುಂದೆ ಜನರು ಸಮಸ್ಯೆಗಳು ಎದುರಾದಾಗ ನೇರವಾಗಿ ತಮ್ಮನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳಬಹುದು. ಒಂದು ವೇಳೆ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಿಕೊಡಲು, ಸೌಲಭ್ಯಗಳನ್ನು ಒದಗಿಸದೇ ನಿರ್ಲಕ್ಷ್ಯ ವಹಿಸಿದ ಸಂದರ್ಭದಲ್ಲಿ ತಮಗೆ ದೂರು ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಬುಧವಾರ ಅಹವಾಲು: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುಧಾಕರ್, ಕ್ಷೇತ್ರದ ಜನರಿಗೆ ಸುಲಭವಾಗಿ ಶಾಸಕರು ದೊರೆಯುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ತಾವು ಯಾವುದೇ ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತವಾದ ಶಾಸಕರಲ್ಲ. ಕ್ಷೇತ್ರದ ಎಲ್ಲಾ ಜನರಿಗೂ ಶಾಸಕನಾಗಿದ್ದೇನೆ. ಎಂದಿಗೂ ಭೇದಭಾವ ತೋರುವುದಿಲ್ಲ. ಯಾರೇ ಆಗಲಿ ತಮ್ಮ ಗಮನಕ್ಕೆ ಸಮಸ್ಯೆಗಳನ್ನು ತಂದರೆ ಪ್ರಾಮಾಣಿಕವಾಗಿ ಬಗೆಹರಿಸಲು ಶ್ರಮಿಸುತ್ತೇನೆ ಎಂದರು. ವಾರದಲ್ಲಿ ಪ್ರತಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಕಚೇರಿಯಲ್ಲಿದ್ದು ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸುತ್ತೇನೆ. ಹಾಗೆಯೇ ಜನಪ್ರತಿನಿಧಿಗಳು ಮತ್ತು ಜನಸಂಪರ್ಕ ಸಭೆಯನ್ನು ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಚರ್ಚಿಸುತ್ತೇನೆ. ಇನ್ನು ಎರಡು ದಿನ ಬೆಂಗಳೂರಿಗೆ ತೆರಳಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ಅಗತ್ಯವಿರುವ ಯೋಜನೆಗಳ ಮೂಲಕ ಅನುದಾನವನ್ನು ತಂದು ಕ್ಷೇತ್ರ ಸರ್ವಾಂಗೀಣ ಪ್ರಗತಿಯನ್ನು ಕಾಣುವಂತೆ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎನ್.ಕೇಶವವರೆಡ್ಡಿ, ರವೀಂದ್ರ ರೆಡ್ಡಿ, ನಗರಸಭಾ ಸದಸ್ಯ ಗಜೇಂದ್ರ ಮುಂತಾದವರು ಉಪಸ್ಥಿತರಿದ್ದರು. ಬಜೆಟ್ ನಂತರ ನೀವೇ ನೋಡಿ: ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 6 ವರ್ಷ ಕಳೆದರೂ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಅಭಿವೃದ್ಧಿಯನ್ನು ನಿಧಾನಗತಿಯಲ್ಲಿ ಸಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ವಿವಿಧ ಯೋಜನೆಗಳ ಮೂಲಕ ಕ್ಷೇತ್ರಕ್ಕೆ ಎಷ್ಟು ಅನುದಾನ ಹರಿದು ಬರುತ್ತದೆ ಎನ್ನುವುದನ್ನು ನೀವೇ ನೋಡಿ. ಅದು ಬಜೆಟ್ ನಂತರ ತಿಳಿಯುತ್ತದೆ ಎಂದು ಶಾಸಕ ಸುಧಾಕರ್ ಹೇಳಿದರು.ಈಗಾಗಲೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಡೆಗೆ ಗಮನ ಸೆಳೆದಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.

ಸರ್ ಎಂವಿ ಜಿಲ್ಲಾ ಕ್ರೀಡಾಂಗಣ ಪರಿಶೀಲನೆ
ಚಿಕ್ಕಬಳ್ಳಾಪುರ:
ನಗರದ ಸರ್ ಎಂವಿ ಜಿಲ್ಲಾ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಿಸಲಾಗಿರುವ ಅಂಡರ್ ಪಾಸ್ ಒಳಗೆಲ್ಲಾ ಮಳೆ ಬಂದು ನೀರು ನಿಂತಿದ್ದು ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಶಾಸಕ ಡಾ. ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಕ್ರೀಡಾಂಗಣಕ್ಕೆ ಹಾಗೂ ಎಚ್.ಎಸ್. ಗಾರ್ಡನ್‌ಗೆ ತೆರಳುವ ರಸ್ತೆಯಲ್ಲಿ ರೇಲ್ವೆ ಹಳಿಯಿದ್ದು, ಇತ್ತೀಚೆಗೆ ಅಂಡರ್ ಪಾಸ್ ನಿರ್ಮಿಸಲಾಗಿದೆ. ಆದರೆ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡಿಲ್ಲ. ಮಳೆ ಬಂದ ಸಂದರ್ಭದಲ್ಲಿ ಅಂಡರ್‌ಪಾಸ್ ಮೇಲ್ಚಾವಣಿಯಿಂದ ನೀರು ಸೋರುತ್ತದೆ. ಅಲ್ಲದೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಸರಾಗವಾಗಿ ಹರಿಯುವುದಿಲ್ಲ. ಇದರಿಂದ ರಸ್ತೆಯಲ್ಲಿ 2 ಅಡಿ ನೀರು ನಿಲ್ಲುತ್ತಿದ್ದ, ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ ಎಂದು ಶಾಸಕ ಡಾ. ಕೆ. ಸುಧಾಕರ್‌ಗೆ ಸಾರ್ವಜನಿಕರು ದೂರು ನೀಡಿದರು.ಶಾಸಕರು, ಇನ್ನು ಹತ್ತು ದಿನಗಳೊಳಗೆ ರಿಪೇರಿ ಮಾಡಿಸಿ, ಇಲ್ಲವಾದರೆ ಸಂಬಂಧಪಟ್ಟ ಮಂತ್ರಿಗಳಿಗೆ ಕಾಮಗಾರಿ ನಿರ್ವಹಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ದೂರು ನೀಡುತ್ತೇನೆ ಎಂದು ದೂರವಾಣಿ ಮೂಲಕ ಅಧಿಕಾರಿಯನ್ನು ಸಂಪರ್ಕಿಸಿ ಎಚ್ಚರಿಸಿದರು.ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಶಾಸಕರು ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈಜುಕೊಳಕ್ಕೆ ಭೇಟಿ ನೀಡಿದರು. ಈಜುಕೊಳದಲ್ಲಿದ್ದ ಪಾಚಿ ಹಾಗೂ ಕಸವನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಇಂತಹ ಈಜುಕೊಳ ಬೆಂಗಳೂರಿನಲೂ ಇಲ್ಲ. ಕಳೆದ ಒಂದು ವರ್ಷದಿಂದ ಯಾರು ಉಪಯೋಗಿಸುತ್ತಿಲ್ಲ ಎಂದರೆ ನೀವು ಏನು ಮಾಡುತ್ತಿದ್ದೀರಾ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಜಯಲಕ್ಷ್ಮೀರವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಶಾಸಕ ಡಾ. ಕೆ. ಸುಧಾಕರ್ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಈಜುಕೊಳದ ಅವ್ಯವಸ್ಥೆಯ ಬಗ್ಗೆ ತಿಳಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.