ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ
ಕ.ಪ್ರ.ವಾರ್ತೆ , ಚಿಕ್ಕಬಳ್ಳಾಪುರ , ಜು. 6
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಗಮನಕ್ಕೆ ತರುವ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಅಧಿಕಾರಿಗಳು ಬಗೆಹರಿಸಬೇಕೆಂದು ಶಾಸಕ ಸುಧಾಕರ್ ಸೂಚನೆ ನೀಡಿದರು.
ತಾಲೂಕಿನ ಹೊಸಹುಡ್ಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹೊಸಹುಡ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರು ಬಿಪಿಎಲ್ ಕಾರ್ಡ್, ವೃದ್ಧಾಪ್ಯ ವೇತನ ನೀಡುವಿಕೆ, ಕೆರೆ ಒತ್ತುವರಿ, ನೀರು, ರಸ್ತೆ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನರು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ಹೊಸಹುಡ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 1 ಬಿಪಿಎಲ್ ವಿತರಣಾ ಕೇಂದ್ರ ಇದ್ದು, ಈಗ 4 ಕೇಂದ್ರಗಳನ್ನು ತೆರೆಯಲಾಗುವುದು. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಒಂದು ಬಿಪಿಎಲ್ ಕಾರ್ಡ್ಗೆ 1 ರೂ.ಕೆ.ಜಿ.ಯಂತೆ ಒಟ್ಟು 30 ಕೆ.ಜಿ. ಅಕ್ಕಿ ವಿತರಣೆಯನ್ನು ಇದೇ 10 ರಂದು ರಾಜ್ಯಾದ್ಯಂತ ಆರಂಭಿಸಲಾಗುತ್ತಿದೆ. ಅದರಂತೆ ಚಿಕ್ಕಬಳ್ಳಾಪುರದ ದರ್ಗಾ ಮೊಹಲ್ಲಾದಲ್ಲಿ ಜುಲೈ 10 ರಂದು ಈ ಯೋಜನೆಗೆ ಚಾಲನೆ ಸಿಗಲಿದೆದೆ ಎಂದರು.
ನಮ್ಮ ದೇಶವು ಅಭಿವೃದ್ಧಿ ದೃಷ್ಟಿಯಿಂದ ಬೇರೆ ದೇಶಕ್ಕಿಂತ 50 ವರ್ಷ ಹಿಂದೆ ಉಳಿದಿದೆ. ಗ್ರಾಮೀಣ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಯ ಸಮರ್ಪಕವಾಗಿ ಆಗಿಲ್ಲ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕರಿತು ಗಮನ ಹರಿಸಬೇಕು. ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಕೆರೆಗಳ ಒತ್ತುವರಿಯನ್ನು ತಡೆದು ಈ ಕುರಿತು ತಮಗೆ ವರದಿ ನೀಡುವಂತೆ ಅವರು ತಹಶೀಲ್ದಾರ್ಗೆ ಸೂಚಿಸಿದರು.
ಆರೋಗ್ಯ ಮಿತ್ರ ಕಾಂತರಾಜ್ ಮಾತನಾಡಿ, ವಾಜಪೇಯಿಶ್ರೀ ಆರೋಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಸುಟ್ಟಗಾಯ, ಅಪಘಾತ, ನರರೋಗ, ನವಜಾತ ಶಿಶು ಆರೈಕೆ, ಹೃದಯ ಸಂಬಂಧಿ ಕಾಯಿಲೆಗೆ ಒಂದೂವರೆ ಯಿಂದ 2 ಲಕ್ಷ ದವರೆಗೆ ಸುಸಜ್ಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಕೆನರಾ ಬ್ಯಾಂಕ್, ರುಡ್ಸೆಟ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ನಿರುದ್ಯೋಗ ಜನರಿಗೆ ಕುರಿ ಸಾಕಾಣಿಕೆ, ಕಂಪ್ಯೂಟರ್, ಬ್ಯೂಟಿಪಾರ್ಲರ್ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು ಈ ಪ್ರಯೋಜನವನ್ನು ಜನರು ಪಡೆಯಬಹುದಾಗಿದೆ ಎಂದವರು ತಿಳಿಸಿದರು.
ತಹಶೀಲ್ದಾರ್ ನಟೇಶ್ ಮಾತನಾಡಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ತಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದಿಡುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಾಗ ಮಾತ್ರ ಅದಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ನೀರಿನ ಸಮಸ್ಯೆ, ಸ್ಮಶಾನ ನಿರ್ಮಾಣ, ಶೌಚಾಲಯ, ಚರಂಡಿ ವ್ಯವಸ್ಥೆ, ಕೊಳವೆಬಾವಿ ವ್ಯವಸ್ಥೆ ಸೇರಿದಂತೆ ಮುಂತಾದುವುಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಲಾಯಿತು.
ಮಾಜಿ ಸಚಿವೆ ರೇಣುಕಾ ರಾಜೇಂದ್ರ, ತಾಲೂಕು ಪಂಚಾಯ್ತಿ ಅಧ್ಯಕ್ಷ ಓಬಳೇಶಪ್ಪ, ಕಾರ್ಯ ನಿರ್ವಹಣಾಧಿಕಾರಿ ಶಶಿಕುಮಾರ್, ಉಪಾಧ್ಯಕ್ಷ ಭಾರತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ, ಹೊಸಹುಡ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.
ಹೊಸಹುಡ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರು ಬಿಪಿಎಲ್ ಕಾರ್ಡ್, ವೃದ್ಧಾಪ್ಯ ವೇತನ ನೀಡುವಿಕೆ, ಕೆರೆ ಒತ್ತುವರಿ, ನೀರು, ರಸ್ತೆ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನರು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿ ಪರಿಹರಿಸುತ್ತೇವೆ
- ಸುಧಾಕರ್, ಶಾಸಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

