ಕೋಲಾರ

ಅಭ್ಯರ್ಥಿಗಳ ಸೋಲಿಗೆ ಮುಖಂಡರ ಭಿನ್ನಮತ ಕಾರಣ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಜು.8
ವಿಧಾನಸಭಾ ಚುನಾವಣೆ ಮುಗಿದ ಎರಡು ತಿಂಗಳ ನಂತರ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರು ಮನಬಿಚ್ಚಿ ಮಾತನಾಡಿ, ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರ್ಯಕರ್ತರು ಹೊಣೆಗಾರರಲ್ಲ, ಮುಖಂಡರಲ್ಲಿನ ಭಿನ್ನಮತ, ನಿಷ್ಠಾವಂತರ ಕಡೆಗಣನೆಯೇ ಪ್ರಮುಖ ಕಾರಣವೆಂದು ದೂರಿದರು.
ಕೋಲಾರ-ಬೆಂಗಳೂರು ಮಾರ್ಗದ ಕೊಂಡರಾಜನಹಳ್ಳಿ ಸಮೀಪದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ವಯಂಕೃತ ಲೋಪಗಳಿಂದ ಸೋತು, ಕಾರ್ಯಕರ್ತರು ಮೂಲೆ ಗುಂಪಾಗುವಂತೆ ಮಾಡಿದ್ದಾರೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಜಿ. ರಾಮರಾಜು, ಅಭ್ಯರ್ಥಿಗಳ ಸೋಲಿಗೆ ಕಾರ್ಯಕರ್ತರು ಕಾರಣರಲ್ಲ, ಮುಖಂಡರಲ್ಲಿನ ಹೊಂದಾಣಿಕೆಯ ಕೊರತೆ, ಎದುರಾಳಿಗಳನ್ನು ಮಣಿಸಲು ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಎಡವಿರುವುದು ಕಾರಣವೆಂದು ಅಭಿಪ್ರಾಯಪಟ್ಟರು.
ಕಾರ್ಯಕರ್ತರೇ ಜೀವಾಳ: ಜೆಡಿಎಸ್‌ಗೆ ಕಾರ್ಯಕರ್ತರೇ ಜೀವಾಳ, ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ನಾನೇ ಅಭ್ಯರ್ಥಿ ಎಂದು ಭಾವಿಸಿ ಹಾಗೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಬೇಕೆಂಬ ಆಸೆಯಿಂದ ಮನೆ ಮಠ ಬಿಟ್ಟು ಕೆಲಸ ಮಾಡಿದ್ದಾನೆ. ಆದರೆ, ಮುಖಂಡರಾದ ನಾವುಗಳು ಸರಿಯಾಗಿ ಕೆಲಸ ಮಾಡಲಿಲ್ಲ, ಹಾಗಾಗಿ ಕಾರ್ಯಕರ್ತರಿಗೆ ನಿರಾಸೆ ಮೂಡಿಸಿದ್ದೇವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಲಿನಿಂದ ಕಾರ್ಯಕರ್ತರು ಬೇಸತ್ತಿರುವುದು ನಿಜ. ಇದನ್ನು ನಿವಾರಣೆ ಮಾಡಬೇಕಾದರೆ ಮುಖಂಡರು ಇನ್ನಾದರೂ ಭಿನ್ನಮತ ಬಿಟ್ಟು ಕಾರ್ಯಕರ್ತರ ಹಿತ ಕಾಪಾಡಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಜಯ ಸಿಗುವಂತೆ ಸಂಘಟನೆ ಬಲಪಡಿಸಬೇಕಾಗಿದೆ, ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗದ ರೀತಿಯಲ್ಲಿ ಎಚ್ಚರವಹಿಸಿ ಕೆಲಸ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದು ಹೇಳಿದರು.
ಜೆಡಿಎಸ್ ಯುವ ಮುಖಂಡ ಸುರೇಶ್‌ಗೌಡ, ವೇದಿಕೆಯಲ್ಲಿದ್ದ ಮುಖಂಡರ ಮುಖದಲ್ಲಿ ಬೆವರು ಇಳಿಯುವ ರೀತಿಯಲ್ಲಿ ಪಕ್ಷದ ಸೋಲಿನ ಬಗ್ಗೆ ಸತ್ಯದರ್ಶನ ಮಾಡಿಸಲು ಪ್ರಯತ್ನಿಸಿದರು.
ಸೂಕ್ತ ಮಾರ್ಗದರ್ಶನ ಇಲ್ಲ: ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ಈ ಬಾರಿ ಕೋಲಾರ ಕ್ಷೇತ್ರದಿಂದ ಖಚಿತವಾಗಿ ಆಯ್ಕೆಯಾಗುವುದಕ್ಕೆ ಎಲ್ಲ ರೀತಿಯ ಅವಕಾಶಗಳಿತ್ತು. ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಆದರೆ, ಮುಖಂಡರು ನಮಗೆ ಸೂಕ್ತ ಮಾರ್ಗದರ್ಶನ ಹಾಗೂ ಎದುರಾಳಿಗಳ ಸವಾಲುಗಳನ್ನು ಎದುರಿಸಲು ಬೇಕಾದ ಸಹಕಾರ ನೀಡಲಿಲ್ಲವೆಂದು ಆರೋಪಿಸಿದರು.
ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರೀನಿವಾಸಗೌಡರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ, ಮನೆ ಮನೆಗೆ ಅಲೆದು ಮತ ಭಿಕ್ಷೆಯಾಚಿಸಿದ್ದಾರೆ. ಆದರೆ, ಕೆಲ ಸದಸ್ಯರು ವಿಧಾನಸಭಾ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲವೆಂಬ ಮಾತುಗಳು ಕೇಳಿ ಬಂದಿದ್ದು ಈ ರೀತಿಯ ತಪ್ಪುಗಳಿಂದಾಗಿ ಶ್ರೀನಿವಾಸಗೌಡರು ಸೋತರು. ಇದರಿಂದಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈಗ ಬೀದಿಯಲ್ಲಿ ತಲೆ ಎತ್ತಿ ತಿರುಗದಂತಾಗಿದೆ ಎಂದು ನೊಂದು ನುಡಿದರು.
ಶ್ರೀನಿವಾಸಗೌಡರ ಮಗನಿಗೆ ಚುನಾವಣೆಯ ಹಣಕಾಸಿನ ಜವಾಬ್ದಾರಿ ವಹಿಸಲಾಗಿತ್ತು. ರಾಜಕೀಯದ ಅನುಭವ ಇಲ್ಲದ ಅವರು, ಮೂರು ಗುಂಪು ಇರುವ ಕಡೆ ಕೇವಲ ಒಂದು ಗುಂಪನ್ನು ಚೆನ್ನಾಗಿ ನೋಡಿಕೊಂಡಿದ್ದು ಸಹ ಮತ್ತೆರಡು ಗುಂಪಿನ ಅಸಮಾಧಾನಕ್ಕೆ ಕಾರಣವಾಯಿತು. ಗೌಡರು ಸಹ ತಮ್ಮ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ಪರಿಗಣಿಸದೆ, ಬೆನ್ನಿಗೆ ಚೂರಿ ಹಾಕುವಂತಹವರಿಗೆ ಮಣೆ ಹಾಕಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳಿದಾಗ ವೇದಿಕೆಯ ಮೇಲಿದ್ದ ಮುಖಂಡರು ಸರಿ ಎಂದು ತಲೆಯಾಡಿಸುವ ಮೂಲಕ ತಪ್ಪು ಒಪ್ಪಿಕೊಂಡರು.
ಅವರು 10 ಇವರು 20: ಕ್ಯಾಲನೂರಿನ ರಾಮಣ್ಣ ಮಾತನಾಡಿ, ಇತ್ತೀಚಿನ ಚುನಾವಣೆಗಳು ಹಣ ಇಲ್ಲದೆ ನಡೆಯದಂತಾಗಿದೆ, ಶ್ರೀನಿವಾಸಗೌಡರಿಗೂ ಇದು ಗೊತ್ತು, ಈ ಬಾರಿ ವರ್ತೂರ್ ಪ್ರಕಾಶ್ ಅವರನ್ನು ಸೋಲಿಸಲು ನನ್ನ ಬಳಿ ಸಾಕಷ್ಟು ಅಸ್ತ್ರಗಳಿವೆ, ರಾಜಕೀಯ ನನಗೂ ಗೊತ್ತಿದೆ, ವರ್ತೂರ್ ಪ್ರಕಾಶ್ ಹತ್ತು ಕೊಟ್ಟರೆ ನಾನು 20 ಕೊಡ್ತೀನಿ ಅಂತ ಹೇಳಿದ್ರಿ. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಕಣ್ಣಿಗೆ ಕಾಣಿಸಲಿಲ್ಲವೆಂದು ಹೇಳಿದರು.
ನಗರಸಭೆ ಸದಸ್ಯ ಅಪ್ರೋಜ್ ಪಾಷಾ ಮಾತನಾಡಿ, ಈ ಬಾರಿ ಅಲ್ಪಸಂಖ್ಯಾತರು ಜೆಡಿಎಸ್ ಪರವಾಗಿ ಕೆಲಸ ಮಾಡಿದ್ದಾರೆ, ಕೆಲವರು ಹಣಕ್ಕಾಗಿ ಬೇರೆಯವರಿಗೆ ಓಟು ಹಾಕಿರಬಹುದು, ಅಲ್ಪಸಂಖ್ಯಾತರು ಜೆಡಿಎಸ್‌ಗೆ ಓಟು ಹಾಕಿಲ್ಲವೆಂದು ಸರಾಸಗಟಾಗಿ ದೂರುವುದು ಸರಿಯಲ್ಲವೆಂದು ಹೇಳಿದಾಗ ಕಾರ್ಯಕರ್ತರು ಅಕ್ಷೇಪ ವ್ಯಕ್ತಪಡಿಸಿದಾಗ ಪರಿಸ್ಥಿತಿ ಅರಿತ ಮುಖಂಡರು ಇದು ಪರಸ್ವರ ಆರೋಪ-ಪ್ರತ್ಯಾರೋಪ ಮಾಡಲು ಕರೆದಿರುವ ಸಭೆಯಲ್ಲ, ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದೆ ಪಕ್ಷವನ್ನು ಸರಿಯಾಗಿ ಕಟ್ಟೋಣವೆಂದು ಹೇಳಿ ಸಮಾಧಾನಪಡಿಸಿದರು.
ವೇದಿಕೆಯಲ್ಲಿ ಸೋತ ಅಭ್ಯರ್ಥಿ ಕೆ.ಶ್ರೀನಿವಾಸಗೌಡ, ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ, ಎಪಿಎಂಸಿ ಅಧ್ಯಕ್ಷೆ ರಾಜರಾಜೇಶ್ವರಿ, ಜಿ.ಪಂ ಸದಸ್ಯರಾದ ಎಂ.ಬಿ. ಮುನಿವೆಂಕಟಪ್ಪ, ಮಂಗಮ್ಮ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಮುಬಾರಕ್, ಮುರಳಿಗೌಡ, ಕೋಮುಲ್ ನಿರ್ದೇಶಕ ಮದ್ದೇರಿ ರಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷ ರವೀಂದ್ರ, ವಕ್ಕಲೇರಿ ರಾಮಚಂದ್ರ, ಗೋಪಾಲಕೃಷ್ಣ, ದಯಾನಂದ್, ನಾಗನಾಳ ಸೋಮಣ್ಣ, ಜಿಪಂ ಸದಸ್ಯೆ ಆಶಾ ಲೋಕೇಶ್ ಮುಂತಾದವರು ಇದ್ದರು, ತಾಲೂಕು ಜೆಡಿಎಸ್ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.