'ಚುನಾವಣೆ ಸೋಲಿನಿಂದ ಧೈರ್ಯಗೆಡಬೇಡಿ'
ಕೋಲಾರ: ವಿಧಾನಸಭೆ ಚುನಾವಣೆಯಲ್ಲಿ ಸೋಲು -ಗೆಲುವು ಸಾಮಾನ್ಯ, ಎದುರಾಳಿಗಳು ಖರ್ಚು ಮಾಡಿದ ಕೋಟಿಗಟ್ಟಲೆ ಹಣ ಹಾಗೂ ರಾಜಕೀಯ ತಂತ್ರಗಾರಿಕೆ ರೂಪಿಸುವಾಗ ಆದ ಸಣ್ಣ ಸಣ್ಣ ತಪ್ಪುಗಳಿಂದಾಗಿ ನಾನು ಸೋಲಬೇಕಾಯಿತು. ಇದರಿಂದ ಕಾರ್ಯಕರ್ತರು ಧೈರ್ಯಗೆಡಬೇಕಾದ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರ ಹೊರವಲಯದ ಕೊಂಡರಾಜನಹಳ್ಳಿಯ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯ ಸೋಲಿನಿಂದ ಯಾರೊಬ್ಬರು ಹತಾಶರಾಗುವುದು ಬೇಡ. ಸೋಲು ಸವಾಲಾಗಿ ಸ್ವೀಕಾರ ಮಾಡಿ ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಶಕ್ತಿ ಸಾಬೀತು ಮಾಡೋಣ. ಹಾಗೇ ಮುಂದೆ ಎದುರಾಗಲಿರುವ ಉಳಿದ ಚುನಾವಣೆಗೆ ಸಂಘಟಿತ ಹೋರಾಟ ನಡೆಸೋಣವೆಂದು ಸಾಂತ್ವನ ಹೇಳಿದರು.
ನಾನು ತಾಲೂಕು ಅಭಿವೃದ್ಧಿ ಮಂಡಳಿ, ಜಿಲ್ಲಾ ಪರಿಷತ್ ಹಾಗೂ 5 ಬಾರಿ ವಿಧಾನಸಭೆ ಚುನಾವಣೆ ಸೇರಿದಂತೆ ಒಟ್ಟು 7 ಚುನಾವಣೆ ಎದುರಿಸಿ ಸೋಲು-ಗೆಲುವು ಕಂಡಿದ್ದೇನೆ. 2008 ರವರೆಗೆ ಚುನಾವಣೆಗಳು ಪ್ರಾಮಾಣಿಕವಾಗಿ, ಸ್ವಚ್ಛವಾಗಿ ನಡೆಯುತ್ತಿತ್ತು. ನಂತರ ಜನರ ಚಿಂತನೆ ಬೇರೆಯದಾಗಿರುವುದು ಮತ್ತು ಓಟಿಗಾಗಿ ಜನರನ್ನು ಭ್ರಷ್ಟರನ್ನಾಗಿ ಮಾಡಿರುವುದರಿಂದ ಜಿಲ್ಲಾ ರಾಜಕಾರಣ ಕಲುಷಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋಲಾರ ಸೇರಿದಂತೆ ಬೆಂಗಳೂರು ಸುತ್ತ ಮುತ್ತಲ ಐದಾರು ಜಿಲ್ಲೆಗಳಲ್ಲಿ ರಾಜಕೀಯಕ್ಕೆ ಹಣದ ರೋಗ ಕಾಣಿಸಿಕೊಂಡಿದೆ. ಭ್ರಷ್ಟತೆಯನ್ನು ಮೈಗೂಡಿಸಿಕೊಂಡು ರಾಜಕಾರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಚುನಾವಣೆಯಲ್ಲಿ ಜಾತಿ ಹೆಸರಿನಲ್ಲಿ ಗೆಲ್ಲಲು ಸಾಧ್ಯವಿಲ್ಲ. ಸಾಕಷ್ಟು ಹಳ್ಳಿಗಳಲ್ಲಿ ಒಕ್ಕಲಿಗರೇ ತಮಗೆ ಓಟು ಹಾಕಿಲ್ಲ. ತಾವು ಚುನಾವಣೆಯಲ್ಲಿ ಜಾತಿಗೆ ಒತ್ತು ನೀಡಿ ಕೆಲಸ ಮಾಡಿಲ್ಲ. ಹಿಂದಿನ ವಿಧಾನಸಭೆ ಚುನಾವಣೆಯ ನಂತರ ಹಲವು ಚುನಾವಣೆಗಳನ್ನು ಜೆಡಿಎಸ್ ಗೆದ್ದಿದೆ. ಈ ಬಾರಿಯೂ 50 ಸಾವಿರ ಮತಗಳು ಬಿದ್ದಿದ್ದು ಸೋಲಿಗೆ ನಾನಾಗಲಿ ಅಥವಾ ನೀವಾಗಲಿ ಕಾರಣರಲ್ಲ, ಹಣ ಮತ್ತು ಅಧಿಕಾರ ದುರ್ಬಳಕೆಯಿಂದ ಸೋಲಬೇಕಾಯಿತು ಎಂದರು.
ಮುಳಬಾಗಲು ಮತ್ತು ಬಂಗಾರಪೇಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಆಯ್ಕೆಯಲ್ಲಿ ತಮ್ಮ ಪಾತ್ರವಿಲ್ಲ. ಆದರೆ, ಕೆಲವರು ತಮ್ಮ ತೆವಲಿಗೆ ಇದನ್ನು ಹುಟ್ಟು ಹಾಕಿದರು. ನಾಲಿಗೆಗೆ ಮೂಳೆ ಇಲ್ಲ ಎಂದು ಏನೇನೋ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಾವು ತಮ್ಮ ಕ್ಷೇತ್ರದ ಕಡೆ ಮಾತ್ರ ಗಮನ ಹರಿಸಿದ್ದೆನೇ ವಿನಃ ಬೇರೆ ಕ್ಷೇತ್ರದ ಕಡೆ ಗಮನ ನೀಡಿಲ್ಲ. ಚುನಾವಣೆಯ ಸಂದರ್ಭ ಅನಿವಾರ್ಯವಾಗಿ ನನ್ನಿಂದಲೂ ಕೆಲ ತಪ್ಪುಗಳು ಆಗಿರಬಹುದು, ಇನ್ನು ಮುಂದೆ ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಎಚ್ಚರ ವಹಿಸಿ ನಿಷ್ಟಾವಂತ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆಗೆ ಗಮನ ನೀಡುತ್ತೇನೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

