ಅಕ್ರಮ ಬಿಪಿಎಲ್ ಕಾರ್ಡ್ಗೆ ಸೌಲಭ್ಯ ಕಟ್
ಕ.ಪ್ರ.ವಾರ್ತೆ ಕೋಲಾರ ಜು. 10
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಟ್ಟಕಡೆಯ ಜನರ ಸಂಕಟಕ್ಕೆ ಸ್ಪಂದಿಸಬೇಕೆಂಬ ಸದುದ್ದೇಶ ಇರುವುದರಿಂದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 1 ರು.ಗೆ 1 ಕೆಜಿಯಂತೆ ರಿಯಾಯಿತಿ ದರದಲ್ಲಿ ಅಕ್ಕಿ ವಿತರಿಸುವ ಐತಿಹಾಸಿಕ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಬಿಪಿಎಲ್ ಕಾರ್ಡುದಾರರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಕರೆ ನೀಡಿದ ರು.
ಅವರು ಕೋಲಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅನ್ನ ಭಾಗ್ಯ ಯೋಜನೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ 1 ರುಪಾಯಿಗೆ 1 ಕೆಜಿಯಂತೆ 30 ಕೆಜಿ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡುವುದಾಗಿ ತಿಳಿಸಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಡವರ ಬಗ್ಗೆ ಕಾಳಜಿ ಇರುವುದರಿಂದ ಅಧಿಕಾರಿ ವಹಿಸಿಕೊಂಡ ದಿನವೇ ಅನ್ನ ಭಾಗ್ಯ ಯೋಜನೆ ಪ್ರಕಟಿಸಿದ್ದು ಇಂದು ಈ ಯೋಜನೆ ರಾಜ್ಯಾದ್ಯಂತ ಚಾಲ್ತಿಗೆ ಬಂದಿದೆ ಎಂದರು.
ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಕೆಲವರು ಅಕ್ರಮವಾಗಿ ಬಿಪಿಎಲ್ ಕಾರ್ಡುಗಳನ್ನು ಪಡೆದಿರುವುದು ತಮ್ಮ ಗಮನಕ್ಕೆ ಬಂದಿದೆ. ಇದು ಬಡವರಿಗೆ ಮಾಡಿರುವ ವಂಚನೆಯಾಗಿದೆ. ಎಬಿಎಲ್ನವರು ಬಿಪಿಎಲ್ ಕಾರ್ಡುಗಳನ್ನು ಪಡೆದಿದ್ದಲ್ಲಿ ಅದನ್ನು ಕೂಡಲೇ ವಾಪಸ್ ಮಾಡಬೇಕು, ಒಂದು ವೇಳೆ ಬಡವರ ಸವಲತ್ತುಗಳನ್ನು ಕಸೆದುಕೊಳ್ಳುವುದಕ್ಕೆ ಪ್ರಯತ್ನಿಸಿದಲ್ಲಿ ಅಂತಹವರಿಗೆ ಸರ್ಕಾರದ ಎಲ್ಲ ಸವಲತ್ತುಗಳನ್ನು ರದ್ದು ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಆಹಾರ ಇಲಾಖೆಯ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಅರ್ಹ ಬಿಪಿಎಲ್ ಕಾರ್ಡುದಾರರ ಹಿತ ಕಾಪಾಡಬೇಕು, ದೇವರು ಬಡವರ ಸೇವೆ ಮಾಡಲು ಸಿಕ್ಕಿರುವ ಅವಕಾಶವನ್ನು ಅಧಿಕಾರಿಗಳು ಸದ್ಬಳಕೆ ಮಾಡಿಕೊಂಡು ಜನ ಸಾಮಾನ್ಯರಿಗೆ ಸಹಾಯ ಮಾಡಿ, ಕಾನೂನು ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯಲೆತ್ನಿಸಿದರೆ ದೇವರು ಕ್ಷೇಮಿಸುವುದಿಲ್ಲ ಎಂದರು.
ಅನ್ನ ಭಾಗ್ಯ ಯೋಜನೆ ಜಾರಿಯ ಬಗ್ಗೆ ಕೆಲ ಬುದ್ಧಿ ಜೀವಿಗಳು ಸೇರಿದಂತೆ ಅನಗತ್ಯವಾದ ಟೀಕೆ ಮಾಡಿದ್ದರು, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಇದು ಸಾಧ್ಯವಾಗುವುದಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ್ದರು, ಬಡವರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡುವುದರಿಂದ ಸೋಮಾರಿಗಳಾಗುತ್ತಾರೆ, ಆಲಸ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಿಸಿದ್ದರು. ಬಹುಶಃ ಬಡವರ ಬಗ್ಗೆ ಕಾಳಜಿ ಇಲ್ಲದವರಿಗೆ ಈ ರೀತಿಯ ಅಲೋಚನೆಗಳು ಬರುವುದು ಸಹಜ, ಕಾಂಗ್ರೆಸ್ಪ್ಕ್ಷ ಯಾವಾಗಲೂ ಕಟ್ಟ ಕಡೆಯ ಜನರ ಬಗ್ಗೆ ಚಿಂತನೆ ಮಾಡುವುದರಿಂದ ಬಡವರು ಸ್ವಾಭಿಮಾನದಿಂದ ಬದುಕಲಿ, ಅನ್ನಕ್ಕಾಗಿ ಬೇರೆಯವರ ಬಳಿ ಕೈಚಾಚದಿರಲಿ ಎಂಬ ಉದ್ದೇಶದಿಂದ ಅನ್ನ ಭಾಗ್ಯ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಬಿಪಿಎಲಲ್ಕಾರ್ಡುದಾರರು ಈ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ತಮ್ಮ ಮಕ್ಕಳಿಗೆ ಉನ್ನತ ಹಾಗೂ ಗುಣ ಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಎಲ್ಲರಂತೆ ಅಭಿವೃದ್ಧಿ ಸಾಧಿಸಲು ಸಹಕಾರ ನೀಡಬೇಕೆಂದು ತಿಳಿಸಿದರು.
ದೇಶದಲ್ಲಿ ಅನೇಕರು ಎಲ್ಲ ರೀತಿಯ ಸೌಲಭ್ಯಗಳು ಇದ್ದರೂ ಬಡವರ ಬಗ್ಗೆ ಚಿಂತನೆ ಮಾಡುವುದಿಲ್ಲ, ಬಾರು, ಕ್ಲಬ್ಗಳಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ, ಇವರ ಬಗ್ಗೆ ಮಾತನಾಡುವ ಬದಲು ಬಡವರಿಗೆ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿವ ಯು.ಟಿ. ಖಾದರ್, ಅನಗತ್ಯ ಟೀಕೆಗಳನ್ನು ನಿಲ್ಲಿಸಿ ರಚನಾತ್ಮಕ ಕಾರ್ಯಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಬಡವರಿಗಾಗಿ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಿದರು ಇದರಿಂದ ಇಂದು ಕೋಟ್ಯಾಂತರ ಬಡವರಿಗೆ ಅನುಕೂಲವಾಗಿದೆ, ಬ್ಯಾಂಕುಗಳು, ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡಿದಾಗ ಹಾಗೂ ಭೂ ಸುಧಾರಣೆ ಕಾಯಿದೆ ಜಾರಿಗೆ ತಂದಾಗಲೂ ವಿರೋಧಿಗಳು ಟೀಕೆ ಮಾಡಿದ್ದರು.
ಆದರೀಗ ಈ ಯೋಜನೆಗಳಿಂದ ಬಡವರಿಗೆ ನೆಮ್ಮದಿಯ ಜೀವನಕ್ಕೆ ಅವಕಾಶವಾಗಿದೆ, ರಾಜೀವ್ ಗಾಂಧಿಯವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ಜಾರಿಗೆ ತಂದ ನಂತರ ಯುವಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿದೆ, ಇದೆಲ್ಲಾ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಂದ ಮಾತ್ರವೇ ಸಾಧ್ಯವೆಂದು ಹೇಳಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ಹಾಲಿಗೆ ನೀಡುತ್ತಿದ್ದ 2 ರು. ಪ್ರೋತ್ಸಾಹ ಧನವನ್ನು 4 ರು.ಗಳಿಗೆ ಹೆಚ್ಚಿಸಲಾಗಿದೆ, ಕೋಲಾರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು,ಈ ಸಂಬಂಧ ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗಳ ಬಳಿ ಮಂಡಿಸಿರುವ ಬೇಡಿಕೆ ಈಡೇರುವ ಭರವಸೆ ವ್ಯಕ್ತವಾಗಿದೆ, ಜಿಲ್ಲೆಯ ಎಲ್ಲ ಶಾಸಕರು ಮತ್ತು ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮಾದರಿ ಜಿಲ್ಲೆಯನ್ನಾಗಿ ಮಾಡೋಣವೆಂದು ತಿಳಿಸಿದರು.
ಬಿಜಿಎಂಎಲ್ ಪುನರಾರಂಭಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಜಿಲ್ಲೆಗೆ ಹೊಸ ಬೆಳಕು ಚೆಲ್ಲಿದಂತಾಗಿದೆ, ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಪಣತೊಡುವ ಮೂಲಕ ಜಿಲ್ಲೆಯ ಚಿತ್ರಣ ಬದಲಾಯಿಸೋಣವೆಂದರು.
ಶಾಸಕ ಆರ್. ವರ್ತೂರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಎಂ. ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಕೋಡಿಹಳ್ಳಿ ಮಂಜುನಾಥಗೌಡ, ವೈ.ರಾಮಕ್ಕ, ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ, ಉಪಾಧ್ಯಕ್ಷೆ ರತ್ನಮ್ಮ, ತಾ.ಪಂ ಅಧ್ಯಕ್ಷೆ ಬಾಗ್ಯಮ್ಮ, ಉಪಾಧ್ಯಕ್ಷೆ ಸರಸ್ವತಿ, ಜಿ.ಪಂ ಸದಸ್ಯರಾದ ನಾರಾಯಣರೆಡ್ಡಿ, ಮಂಗಮ್ಮ ಮುನಿಸ್ವಾಮಿ, ಮಂಜುಳಾ, ಯಶೋಧಮ್ಮ, ಸಿಮೋಲ್ ಮೋಹನ್, ಎಂ.ಎಸ್. ಆನಂದ್, ಲಕ್ಷ್ಮೀನಾರಾಯಣ, ವಡಗೂರು ಹರೀಶ್, ಕಾಂಗ್ರೆಸ್ ಮುಖಂಡ ಕುಮಾರ್, ಜಯದೇವ್, ಜಿ.ಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ಕೋಲಾರ ಎಸಿ ಆಯುಷಾ ಫರ್ವೀನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ, ಆಹಾರ ಇಲಾಖೆಯ ಉಪ ನಿರ್ದೇಶಕ ಚನ್ನಪ್ಪ ಕೊಡ್ಲಿ ಇದ್ದರು. ಜಿ.ಪಂ ಸಿಇಒ ಝುಲ್ಫಿಖಾರ್ ಉಲ್ಲಾ ಸ್ವಾಗತಿಸಿ, ಗೋವಿಂದಪ್ಪ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

