ಕೋಲಾರ

ಅಧಿಕ ದಂಡ: ಪೊಲೀಸರ ವಿರುದ್ಧ ಪ್ರತಿಭಟನೆ

Published On :

ಕೆಜಿಎಫ್:  ನಗರದ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಟಿ.ಸಿ. ವೆಂಕಟೇಶ್ 10 ದಿನಗಳಿಂದ ವಿನಾಕಾರಣ ಆಟೋ ಚಾಲಕರಿಗೆ ತೊಂದರೆ ನೀಡುತ್ತಿದ್ದಾರೆ. ಅವರಿಂದ 3000 ದಿಂದ 5000 ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಚಾಲಕರು ದಿನನಿತ್ಯ ಆಟೋ ಓಡಿಸಿಯೇ ತಮ್ಮ ಕುಟುಂಬವನ್ನು ಪೋಷಿಸಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು 5000 ದಂಡ ಹಾಕಿದರೆ ಬದುಕುವುದು ಹೇಗೆ? ಆದ್ದರಿಂದ ತಮಗೆ ನ್ಯಾಯ ಒದಗಿಸಿಕೊಡುವಂತೆ ಆಟೋ ಚಾಲಕರ ಸಂಘದ ಮುಖಂಡರು ಮತ್ತು ಚಾಲಕರು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪರಕ್ಷಣಾಧಿಕಾರಿ ಗುರುಸ್ವಾಮಿ ಅವರು ಆಟೋ ಚಾಲಕರ ಸಂಘದ ಮುಖಂಡರಾದ ಏಕಾಂಬರಂ ಮತ್ತು ದೊರೈಸುಬ್ಬರಾಯನ್ ಅವರೊಂದಿಗೆ ಮಾತನಾಡಿದರು. ಪೊಲೀಸರು ವಿನಾಕಾರಣ ಯಾರಿಗೂ ದಂಡ ಹಾಕುವುದಿಲ್ಲ ನಗರದಲ್ಲಿ ಚಲಾಯಿಸುವ ಆಟೋ ಚಾಲಕರು ಸಂಚಾರ ನಿಯಮ ಪಾಲಿಸುವುದಿಲ್ಲ. ಸಮವಸ್ತ್ರ ಧರಿಸುವುದಿಲ್ಲ. ಅಗತ್ಯ ದಾಖಲಾತಿ ಹೊಂದಿರದ ಕಾರಣ ಪೊಲೀಸರು ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗುತ್ತದೆ.  ಪರವಾನಿಗೆ ಇಲ್ಲದೆ ಆಟೋಗಳನ್ನು ಚಲಾಯಿಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಅನಂತರ ಆಟೋ ಚಾಲಕರ ಸಂಘದ ಮುಖಂಡರು ತಮಗೆ ಕಾಲವಕಾಶ ಕೊಡಬೇಕು. ಮುಂದಿನ ದಿನಗಳಲ್ಲಿ ಅಗತ್ಯ ದಾಖಲೆ ಹೊಂದುವುದಾಗಿ ತಿಳಿಸಿದರು. ವೃತ್ತ ನಿರೀಕ್ಷಕ ಟಿ.ಸಿ. ವೆಂಕಟೇಶ್ ಮಾತನಾಡಿ, ನಗರದಲ್ಲಿ 2500 ಆಟೋಗಳು ಸಂಚರಿಸುತ್ತಿವೆ.  ಅದರಲ್ಲಿ ಸುಮಾರು 500 ಆಟೋಗಳಿಗೆ ಮಾತ್ರ ಸೂಕ್ತ ದಾಖಲೆಗಳಿವೆ. ಉಳಿದ ಆಟೋ ಚಾಲಕರ ಬಳಿ ಯಾವುದೇ ಸಂಬಂಧಪಟ್ಟ ದಾಖಲಾತಿಗಳಿಲ್ಲ. ನಗರದಲ್ಲಿ ಎಲ್ಲೆಂದರಲ್ಲಿ ಆಟೋಗಳನ್ನು ನಿಲ್ಲಿಸಿ, ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮಲೆಕ್ಕಿಗರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ತಾಲೂಕಿನ ಅಜ್ಜವಾರದ ಗ್ರಾಮಲೆಕ್ಕಿಗ ಎಂ. ಕಿರಣ್‌ಕುಮಾರ್ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ನಗರದ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕೂಡಲೇ ಕಿರಣ್‌ಕುಮಾರ್ ಅವರ ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಕೇಂದ್ರದಲ್ಲಿ ಒಂದೇ ಕಡೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ 15 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ.ಜನರ ಕೆಲಸಗಳನ್ನು ಮಾಡಿಕೊಡಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ವರ್ಗಾವಣೆ ಮಾಡಿದಾಗ ತಮ್ಮ ಪ್ರಭಾವವನ್ನು ಬಳಸಿಕೊಂಡು ಅದೇ ಸ್ಥಳದಲ್ಲಿ ಮತ್ತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹವರ ನಡುವೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಕಿರಣ್‌ಕುಮಾರ್ ಅವರನ್ನು ಸಹ ಏಕಾಏಕಿ ವರ್ಗಾವಣೆ ಮಾಡಲಾಗಿದೆ. 15 ವರ್ಷಗಳಿಂದಲೂ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿ ವರ್ಗಾವಣೆ ಮಾಡಲು ನಿರ್ಲಲಕ್ಷ್ಯ ವಹಿಸಿ, ಉತ್ತಮವಾಗಿ ಕಾರ್ಯ ನಿರ್ವಹಿಸುವಂತಹವರನ್ನು ಪದೇ ಪದೇ ವರ್ಗಾವಣೆ ಮಾಡುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ತಹಸೀಲ್ದಾರ್ ನಟೇಶ್ ಪ್ರತಿಭಟನಾಕಾರರಿಂದ ಮನವಿ ಪತ್ರವನ್ನು ಸ್ವೀಕರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಸುಷ್ಮಾ ಶ್ರೀನಿವಾಸ್, ರವಿಕುಮಾರ್, ವಿ.ಮಂಜುನಾಥ, ಮುದ್ದುಕೃಷ್ಣ, ಕೆ.ಬೈರೇಗೌಡ ,ಮುನಿರಾಜು, ಮುನಿಕೃಷ್ಣಪ್ಪ, ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.