ಕೋಲಾರ

ಬಜೆಟ್ನಲ್ಲಿ ಅಸಂಘಟಿತ ಕಾರ್ಮಿಕರಿಗೆ ಅನ್ಯಾಯ

Published On :

ಕೋಲಾರ: ರಾಜ್ಯದಲ್ಲಿ ಲಕ್ಷಾಂತರ ಅಸಂಘಟಿತ ಕಾರ್ಮಿಕರಿದ್ದು ಇವರ ಕಲ್ಯಾಣಕ್ಕಾಗಿ 1 ಸಾವಿರ ಕೋಟಿ ರು. ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡುವಂತೆ ಸಿಐಟಿಯು ಸರ್ಕಾರನ್ನು ಅನೇಕ ಬಾರಿ ಒತ್ತಾಯಿಸುತ್ತಾ ಬಂದಿದ್ದರೂ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಕೇವಲ 300 ಕೋಟಿ ರು. ಒದಗಿಸಿ ಸಂಘಟಿತ ಕಾರ್ಮಿಕರನ್ನು ನಿರ್ಲಕ್ಷಿಸಿದ್ದಾರೆಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನ ಕುಮಾರ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರಿಗೆ ಕಡಿಮೆ ಆದಾಯದಲ್ಲಿ ಬಡವರು ಜೀವನ ಮಾಡುವುದು ಕಷ್ಟವೆಂದು ಗೊತ್ತಿದ್ದರೂ ಅಸಂಘಟಿತ ಕಾರ್ಮಿಕರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿಲ್ಲ, ಮುಖ್ಯಮಂತ್ರಿಗಳ ಬಜೆಟ್ ಕಾರ್ಮಿಕ ವಿರೋಧಿ ಹಾಗೂ ನಿರಾಶದಾಯಕವಾಗಿದೆ ಎಂದು ಟೀಕಿಸಿದರು.
ಪ್ರಸಕ್ತ ಬಜೆಟ್ನಲ್ಲಿ ಅನ್ಯಭಾಗ್ಯ ಯೋಜನೆ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಗೂ ಅನುದಾನ ಕಡಿತ ಮಾಡಲಾಗಿದೆ, ಮೂಲಭೂತ ಸೌಕರ್ಯ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಕಾಳಜಿ ತೋರಿಲ್ಲ, ಬಡವರಿಗೆ ಮಂಕುಬೂದಿ ಎರೆಚುವ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆಂದು ದೂರಿದರು.
ರಸ್ತೆ ಅಭಿವೃದ್ಧಿಗೆ ಸರ್ಕಾರವು ಸೂಚಿಸಿರುವ ಖಾಸಗೀ ಸಹಭಾಗಿತ್ವ ಮಾರ್ಗವು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುವ ವೆಚ್ಚಗಳನ್ನು ಕ್ರಮೇಣ ಕಡಿಮೆ ಮಾಡುವುದಾಗಿದೆ ಎಂದ ಅವರು,ಗುತ್ತಿಗೆ ಪೌರಕಾರ್ಮಿಕ ವೃತ್ತಿಯಲ್ಲಿರುವವರ ಬಗ್ಗೆ ಬರೀ ಅನುಕಂಪದ ಮಾತುಗಳು ಮಾತ್ರ ಕೇಳಿ ಬಂದಿದೆಯೇ ಹೊರತು ಅಗತ್ಯವಾದ ಹಣಕಾಸಿನ ನೆರವು ಒದಗಿಸಿಲ್ಲ ಎಂದು ವಿಷಾಧಿಸಿದರು.
ಮುಖ್ಯಮಂತ್ರಿಗಳ ಬಜೆಟ್ ಭಾಷಣಕ್ಕೂ ಮತ್ತು ಹಣದ ಹಂಚಿಕೆಗೆ ಹೊಂದಾಣಿಕೆಯೇ ಇಲ್ಲ, ಈ ಹಿಂದಿನ ಸರ್ಕಾರಗಳು ಹೆಚ್ಚು ಸಾಲ ಮಾಡಿವೆ ಎಂದಿರುವ ಮುಖ್ಯಮಂತ್ರಿಗಳು ಸಾಲ ತೀರಿಸುವುದಕ್ಕೆ ಮಾರ್ಗಗಳನ್ನು ಕಂಡುಕೊಳ್ಳುವ ಬದಲು ತೆರೆ ಮರೆಯಲ್ಲಿ ವಿಶ್ವಬ್ಯಾಂಕ್ ಹಾಗೂ ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನಿಂದ ಸಾಲ ಪಡೆಯುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದರು.          
ಗ್ಲೋಬಲ್ ಟೆಂಡರ್ ಸರಿಯಲ್ಲ: ಕಳೆದ 13 ವರ್ಷಗಳಿಂದ ಬಂದ್ ಆಗಿರುವ ಕೆಜಿಎಫ್ ಚಿನ್ನದ ಗಣಿಯನ್ನು ಜಾಗತಿಕ ಟೆಂಡರ್ಮೂಲಕ ಮತ್ತೆ ಆರಂಭಿಸಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿಂದೆ ಕೇಂದ್ರ ಸರ್ಕಾರ ಕೈವಾಡವಿದೆ ಎಂದು ಪ್ರಸನ್ನ ಕುಮಾರ್ ಅನುಮಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಉದ್ದಿಮೆಯೊಂದನ್ನು ಜಾಗತಿಕ ಹರಾಜಿನ ಮೂಲಕ ಬಂಡವಾಳಶಾಯಿಗಳಿಗೆ ಒಪ್ಪಿಸಿದರೆ ಬೆಲೆಬಾಳುವ ಚಿನ್ನದ ಅದಿರನ್ನು ವಿದೇಶಿಯರು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಚಿನ್ನದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಅದನ್ನು ಕೇಂದ್ರ ಸರ್ಕಾರವೇ ಮುನ್ನಡೆಸುವುದರಿಂದ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಹಾಗೂ ಜಾಗತಿಕವಾಗಿ ಮಟ್ಟದಲ್ಲಿ ಡಾಲರ್ ಬೆಲೆಯ ಮುಂದೆ ರೂಪಾಯಿ ಮೌಲ್ಯ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ. ಅರ್ಜುನನ್, ಪ್ರಧಾನ ಕಾರ್ಯದರ್ಶಿನಾಗರತ್ನಮ್ಮ, ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.