ಕೋಲಾರ

ಹೂ ಮಾರುಕಟ್ಟೆಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಕೋಲಾರ   ಜು. 15
ಹೂವು ಮಾರಾಟಕ್ಕೆ ನಗರದ ಹಳೇ ಬಸ್ ನಿಲ್ದಾಣದ ಬಳಿ ಸೂಕ್ತವಾದ ಮಾರುಕಟ್ಟೆ ನಿರ್ಮಿಸಬೇಕೆಂದು ಒತ್ತಾಯಿಸಿ ಹೂವು ಮಾರಾಟಗಾರರು ಮತ್ತು ಹೂವು ಕಟ್ಟುವವರು ಸೋಮವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಆಯುಕ್ತ ಮಹೇಂದ್ರ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಸುಮಾರು 40 ವರ್ಷಗಳಿಂದ ಪೆಟ್ಟಿಗೆ ಅಂಗಡಿಗಳಲ್ಲಿ ಹೂವಿನ ಸಗಟು ವ್ಯಾಪಾರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈಗ ದಿಢೀರನೇ ತೆರವುಗೊಳಿಸಿದರೆ ಅನಾನುಕೂಲವಾಗುತ್ತದೆ. ಹೂವಿನ ವ್ಯಾಪಾರಿಗಳ ಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಡಬೇಕೆಂದು ತಿಳಿಸಿದ್ದಾರೆ. ನಗರಸ ಹಳೇ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಜಾಗದಲ್ಲಿ ಅಂಡಿಗಳನ್ನು ನಿರ್ಮಿಸಿ ನಂತರ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ವ್ಯಾಪಾರಿಗಳು ನಗರಸಭೆ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಕೋಲಾರ ಸುತ್ತಮುತ್ತಲಿನ ರೈತರು ಬೆಳೆದು ತರುವ ಹೂಗಳನ್ನು ಮಾರಾಟ ಮಾಡಲು ವ್ಯವಸ್ಥಿತವಾದ ಮಾರುಕಟ್ಟೆ ಇಲ್ಲದಿರುವುದನ್ನು ಅರಿತ ನಗರಸಭೆ ಸದಸ್ಯರು 2006ರ ಫೆ.14ರಂದು ನಡೆದ ಸಾಮಾನ್ಯ ಸಭೆಯಲ್ಲಿ ಹೂವಿನ ವ್ಯಾಪಾರಿಗಳ ವಿಷಯ ಪ್ರಸ್ತಾಪಿಸಿ, ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಹೋಟೆಲಿನ ಹಿಂಭಾಗದಲ್ಲಿರುವ ನಗರಸಭೆ ಜಾಗದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸಿ ಇದಕ್ಕೆ ಸಿ. ಬೈರೇಗೌಡರ ಹೆಸರನ್ನು ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಿದ್ದು, ಅದರಂತೆ ಕ್ರಮ ಜರುಗಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ನಗರಸಭೆಯಲ್ಲಿ ಕೈಗೊಂಡ ತೀರ್ಮಾನ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಹೂವಿನ ಅಂಗಡಿಗಳನ್ನು ಎಪಿಎಂಸಿ ಮಾರುಕಟ್ಟೆ ಯಾರ್ಡಿನಲ್ಲಿ ನಿರ್ಮಾಣ ಮಾಡಿರುವ ಅಂಗಡಿಗಳಿಗೆ ಸ್ಥಳಾಂತರ ಮಾಡಲು ಯತ್ನಿಸಲಾಗಿತ್ತು. ಆದರೆ, ಗ್ರಾಹಕರು ಹೂವಿನ ಮಾರುಕಟ್ಟೆ ದೂರವಿದೆ ಎಂಬ ಕಾರಣಕ್ಕೆ ಅಲ್ಲಿಗೆ ಬರದೆ ಅಂಗಡಿಗಳು ಇಂದಿಗೂ ಬಂದ್ ಆಗಿವೆ. 100 ಗ್ರಾಂ ಹೂ ಖರೀದಿ ಮಾಡಲು ನಗರದಿಂದ ಯಾವುದೇ ಒಬ್ಬ ಗ್ರಾಹಕರ 5 ಕಿ.ಮೀ. ದೂರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಬರಲು ಸಿದ್ಧನಿಲ್ಲ. ಹಾಗಾಗಿ ನಗರದಲ್ಲೇ ಹೂವಿನ ಮಾರುಕಟ್ಟೆ ನಿರ್ಮಾಣವಾಗಬೇಕೆಂದು ತಿಳಿಸಿದ್ದಾರೆ. ಮನವಿ ಪತ್ರ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಮಹೇಂದ್ರ ಕುಮಾರ್ ಹೂವಿನ ಅಂಗಡಿಗಳನ್ನು ಸದ್ಯಕ್ಕೆ ತೆರವುಗೊಳಿಸುವುದಿಲ್ಲ. ಆದರೆ ಇತರೆ ಅಂಗಡಿಗಳನ್ನು ತೆರವುಗೊಳಿಸುವುದಾಗಿ ಹೇಳಿದರು. ಸಂಘದ ಅಧ್ಯಕ್ಷ ಕೆ. ನಾರಾಯಣಸ್ವಾಮಿ, ಉಪಾಧ್ಯಕ್ಷ ಮಹಮ್ಮದ್ ಖಾಜಾ, ಕಾರ್ಯದರ್ಶಿ ಸೈಯದ್ ನೂರ್ ಪಾಷ, ಖಜಾಂಚಿ ನಂಜುಂಡಪ್ಪ, ಸದಸ್ಯರಾದ ಕೆ. ಗೋಪಾಕೃಷ್ಣ, ಆರ್. ವೆಂಕಟೇಶಪ್ಪ, ಎಸ್.ಕೆ. ಆಕ್ರಂಪಾಷ, ಆರ್. ನಾರಾಯಣಸ್ವಾಮಿ, ನಾಗರಾಜಪ್ಪ, ಕಾನೂನು ಸಲಹೆಗಾರ ವಕೀಲ ಸಾ.ಮಾ. ಆರ್. ಸತೀಶ್ ಹಾಗೂ ನಗರಸಭೆ ಸದಸ್ಯ ಸಲ್ಲಾವುದ್ದೀನ್ ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.