ಶಿಕ್ಷಕರ ಕೊರತೆ: ಬೀದಿಗಿಳಿದ ಗುಡಿಬಂಡೆ ವಿದ್ಯಾರ್ಥಿಗಳು
ಗುಡಿಬಂಡೆ: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದು, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳ ಪೋಷಕರು ಶಾಲೆಯಲ್ಲಿ 6 ರಿಂದ 9ನೇ ತರಗತಿಯವರೆಗೆ ಸುಮಾರು 320 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇಲಾಖೆ ಹಲವಾರು ತಿಂಗಳುಗಳಿಂದ ಅವಶ್ಯವಿರುವ ಶಿಕ್ಷಕರನ್ನು ಒದಗಿಸದೆ ಕಾಲಹರಣ ಮಾಡುತ್ತಿದೆ. ಈ ಬಗ್ಗೆ ತಾವು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ತಮ್ಮ ಮಕ್ಕಳ ವ್ಯಾಸಂಗಕ್ಕೆ ಹಿನ್ನಡೆಯಾಗಿದ್ದು, ಶಾಲೆಯಲ್ಲಿ ಪಾಠ ಪ್ರವಚನಗಳು ಕುಂಠಿತಗೊಂಡಿವೆ ಎಂದು ದೂರಿದರು.
ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ಮೆರವಣಿಗೆಯಲ್ಲಿ ಸಾಗಿ ಬಂದ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಶಾಲೆಗ ಶಿಕ್ಷಕರನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬಿ.ಇ.ಒ ರವಿಕುಮಾರ್ ಶಾಲೆಯಲ್ಲಿ ಶಿಕ್ಷಕರ ಕೊರತೆಯಿರುವುದು ನಿಜ, ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಪರಿಸ್ಥಿತಿ ನಿಭಾಯಿಸಲು ಮೂರು ಜನ ಶಿಕ್ಷಕರನ್ನು ಬೇರೆ ಶಾಲೆಗಳಿಂದ ನಿಯೋಜಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 72ಮಂದಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇತ್ತೀಚಿಗೆ ನಡೆದ ವರ್ಗಾವಣೆಯಿಂದಾಗಿ ಇನ್ನೂ ಹಲವು ಸ್ಥಾನಗಳು ಖಾಲಿಯಾಗಲಿವೆ.
ಈ ಎಲ್ಲಾ ವಿಷಯಗಳನ್ನು ತಾವು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿದ್ದು, ಸಮಸ್ಯೆ ನಿವಾರಿಸುವಂತೆ ಕೋರಲಾಗಿದೆ ಎಂದರು. ಆದರೆ ಅಧಿಕಾರಿಯ ಉತ್ತರದಿಂದ ಸಮಾಧಾನಗೊಳ್ಳದ ಪೋಷಕರು ಮೂರು ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಹೇಳಿದ್ದಾರೆ.
ಪೋಷಕರಾದ ಧರಣಿ ಸ್ಟೋರ್ ವೆಂಕಟೇಶ್, ಅಲ್ತಾಫ್, ಎ.ನಾಗರಾಜು, ವೀಣಾರಾಣಿ, ಪ.ಪಂ. ಸದಸ್ಯರಾದ ಲಕ್ಷ್ಮೀಕಾಂತಮ್ಮ, ರಾಜಣ್ಣ, ಅಪ್ಸರ್ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

