ಆ.9-11ರವರೆಗೆ ವೆಂಕಟರಮಣಸ್ವಾಮಿಕುಂಭಾಭಿಷೇಕ ಮಹೋತ್ಸವ ಆಚರಣೆ
ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರದ ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಈ ದೇವಾಲಯದ ಕುಂಭಾಭಿಷೇಕ ಮಹೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಎಂ. ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ತೆರಳುವ ಮಾರ್ಗದಲ್ಲಿ ಬರುವ (ಶ್ರೀನಿವಾಸ ಸಾಗರ ಸಮೀಪ) ಪ್ರಾಕೃತಿಕ ಸೊಬಗಿನ ನಡುವೆ ಸುಮಾರು 800 ವರ್ಷಗಳ ಹಿಂದೆ ಪಲ್ಲವರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಪೂರ್ಣವಾಗಿ ಶಿಥಿಲವಾಗಿತ್ತು.
ಇದನ್ನು ಮೊದಲಿನ ವಿನ್ಯಾಸದಲ್ಲಿ ಪುನರ್ನಿರ್ಮಾಣ ಮಾಡಲು ಟ್ರಸ್ಟ್ ಉದ್ದೇಶಿಸಿ 2010 ರಲ್ಲಿ ಕಾಮಗಾರಿ ಕೈಗೊಂಡು ಕುಪ್ಪಂ ಮತ್ತು ಕುಂಭಕೋನಂನ ಖ್ಯಾತ ಶಿಲ್ಪಿಗಳಿಂದ ಕೋಟ್ಯಂತರ ರು. ವೆಚ್ಚ ಮಾಡಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಸಾರ್ವಜನಿಕರ ಸಹಕಾರೊಂದಿಗೆ ನೆರವೇರಿಸಿದ್ದು ಈ ಹಿಂದಿನ ಪುರಾತನ ದೇವಾಲಯದ ವಾಸ್ತು ವಿನ್ಯಾಸದ ಪ್ರಕಾರವೇ ಶ್ರೀವೆಂಕಟರಮಣಸ್ವಾಮಿ ದೇವಾಲಯವನ್ನು ಆಕರ್ಷಕವಾಗಿ ಪುನರ್ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಗತಕಾಲದ ವೈಭವವನ್ನು ಮರುಕಳಿಸುವ ರೀತಿಯಲ್ಲಿಯೇ ದೇವಾಲಯವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು ದೇವಾಲಯದ ಸಮೀಪದಲ್ಲಿಯೇ ಸುಂದರವಾದ ಉದ್ಯಾನವನ, ನವಗ್ರಹವನ, ಎಕೋ ಪಾರ್ಕ್ ನಿರ್ಮಿಸಲಾಗುವುದು. ಈಗಾಗಲೇ ಫಿಶ್ಪಾಂಡ್ ನಿರ್ಮಾಣ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಧಾರ್ಮಿಕ ಮತ್ತು ಪ್ರಾಕೃತಿಕ ಮಹತ್ವದ ಸ್ಥಳದಲ್ಲಿರುವ ಈ ದೇವಾಲಯದ ಕುಂಭಾಭಿಷೇಕ ಮಹೋತ್ಸವವನ್ನು ತಿರುಪತಿ ತಿರುಮಲ ದೇವಾಲಯದ (ಟಿಟಿಡಿ) ಪ್ರಧಾನ ಅರ್ಚಕರ ನೇತೃತ್ವದಲ್ಲಿ 120 ಆಗಮಿಕರ ತಂಡ ನಡೆಸಿಕೊಡಲಿದ್ದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಈ ಧಾರ್ಮಿಕ ಕಾರ್ಯಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು ಆಗಸ್ಟ್ 9, 10 ಮತ್ತು 11 ರಂದು ಪೂಜಾ ಕಾರ್ಯಗಳು ನಡೆಯಲಿವೆ. ಗಣ್ಯಾತಿ ಗಣ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ.
ಧಾರ್ಮಿಕ ಕಾರ್ಯಕ್ರಮಗಳು: ಟಿಟಿಡಿ ವತಿಯಿಂದಲೇ ಆಗಸ್ಟ್ 11 ರಂದು ಅತ್ಯಂತ ವೈಭವಯುತವಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು ತಿರುಪತಿಯಿಂದ ಉತ್ಸವ ಮೂರ್ತಿಗಳನ್ನು ತಂದು ಆಕರ್ಷಕ ಮಂಟಪದಲ್ಲಿರಿಸಿ ಕಲ್ಯಾಣೋತ್ಸವವನ್ನು ನಡೆಸಲಾಗುತ್ತದೆ. ಟಿಟಿಡಿಯಿಂದಲೇ ಮಂಗಳವಾದ್ಯ ತಂಡ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಗಮಿಕರ ಪಂಡಿತರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಆಗಸ್ಟ್ 11 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು ವಿವಾಹವಾಗಲು ಇಚ್ಛಿಸುವ 18 ವರ್ಷ ಮೇಲ್ಪಟ್ಟ ವಧು ಮತ್ತು 22 ವರ್ಷ ಮೇಲ್ಪಟ್ಟ ವರರು ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಜು.30 ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಟ್ರಸ್ಟ್ನ ಸಂಚಾಲಕರಾದ ಎಂ. ಜಯರಾಮ್ 9845428472, ಕಾರ್ಯದರ್ಶಿ, ಉಮೇಶ್ರೆಡ್ಡಿ 9535070739, ಟ್ರಸ್ಟಿಗಳಾದ ವೈ.ಎನ್. ನಾರಾಯಣಮೂರ್ತಿ 9343601218 ಸಂಪರ್ಕಿಸಬೇಕೆಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

