6 ತಿಂಗಳಾದರೂ ಉದ್ಘಾಟನೆಯಾಗದ ಆಸ್ಪತ್ರೆ
ಕೆ.ರಮೇಶ್
ಬಂಗಾರಪೇಟೆ: ಗ್ರಾಮೀಣ ಪ್ರದೇಶಗಳಲ್ಲಿರುವ ಜನರಿಗೂ ಪಟ್ಟಣ ಪ್ರದೇಶಗಳಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವಂತಹ ಆರೋಗ್ಯ ಲಭಿಸಲೆಂದು ನಿರ್ಮಾಣ ಮಾಡಿರುವ ನೂತನ ಆಸ್ಪತ್ರೆ ಕಟ್ಟಡಗಳು ಪೂರ್ಣಗೊಂಡು ಆರು ತಿಂಗಳುಗಳೇ ಕಳೆದರೂ ಉದ್ಘಾಟನೆಯ ಭಾಗ್ಯ ಕಾಣದಿರುವುದು ಜನರ ಕೆಂಗಣ್ಣಿಗೆ ತುತ್ತಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಂದಿನ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಕಾಮಸಮುದ್ರ,ಬೂದಿಕೋಟೆ, ದೊಡ್ಡಚಿನ್ನಹಳ್ಳಿ ಮತ್ತಿತರೆಡೆ ಸರ್ಕಾರಿ ಆಸ್ಪತ್ರೆಗಳಿದ್ದರೂ ಸೂಕ್ತವಾದ ಕಟ್ಟಡದ ವ್ಯವಸ್ಥೆಯಿಲ್ಲದೆ ಅಲ್ಲಿನ ಆರೋಗ್ಯ ಕೇಂದ್ರಗಳೇ ಅನಾರೋಗ್ಯಕ್ಕೆ ತುತ್ತಾಗಿದ್ದವು. ಇದನ್ನು ಮನಗಂಡ ನಾರಾಯಣಸ್ವಾಮಿ ಈ ಮೂರು ಕಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿಸಿದ್ದರು. ಈಗ ಕಟ್ಟಡಗಳು ಪೂರ್ಣಗೊಂಡು ಬರೋಬ್ಬರಿ ಆರು ತಿಂಗಳುಗಳೇ ಕಳೆದರೂ ಉದ್ಘಾಟನೆಯ ಭಾಗ್ಯ ಮಾತ್ರ ಕಂಡಿಲ್ಲ. ಇದರಿಂದ ಈ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಆರೋಗ್ಯ ಹದಗೆಟ್ಟರೆ ಪಟ್ಟಣ ಪ್ರದೇಶಕ್ಕೆ ದೌಡಾಯಿಸಬೇಕು ಇಲ್ಲವೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಬಿಲ್ ಪಾವತಿ ಆಗದಿರುವುದೇ ಕಾರಣ: ಕಾಮಸಮುದ್ರ, ಬೂದಿಕೋಟೆ ಹಾಗೂ ದೊಡ್ಡಚಿನ್ನಹಳ್ಳಿಯಲ್ಲಿ ನಿರ್ಮಾಣವಾಗಿರುವ ಹೊಸ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳನ್ನು ಒಬ್ಬರೇ ಗುತ್ತಿಗೆ ಪಡೆದಿದ್ದು, ಕಾಮಗಾರಿ ಪೂರ್ಣಗೊಂಡಿದ್ದರೂ ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆದಾರರು ಕಟ್ಟಡಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಹಿಂದೇಟು ಹಾಕಿರುವುದರಿಂದ ಮೂರು ಕಡೆ ಕಟ್ಟಡಗಳು ಉದ್ಘಾಟನೆಯಾಗದೆ ನೆನೆಗುದಿಗೆ ಬಿದ್ದಿದೆ.
ಕಾಮಸಮುದ್ರದಲ್ಲಿ ಕೊರತೆ ಪೂರ: ಕಾಮಸಮುದ್ರ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇಲ್ಲದೆ ಬಡ ಜನರು ಆರೋಗ್ಯ ರಕ್ಷಣೆಗಾಗಿ ಹೆಣಗಾಡುವಂತಾಗಿದೆ. ಇರುವ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ. ಮಳೆ ಬಂದರೆ ಮೇಲ್ಚಾವಣಿಯಿಂದ ನೀರು ಸೋರುತ್ತದೆ.
ವೈದ್ಯರ ಕೊರತೆ, ದಾದಿಯರು ಇಲ್ಲ. ರಾತ್ರಿ ಪಾಳಿಯಲ್ಲಿ ರೋಗಿಗಳು ಬಂದರೆ ವಿಚಾರಿಸುವವರೇ ದಿಕ್ಕಿಲ್ಲ. ಇನ್ನು ವೈದ್ಯರಿಗಾಗಿ ಮೀಸಲಿಟ್ಟಿರುವ ವಸತಿ ಗೃಹಗಳು ಪಾಳು ಬಿದ್ದಿರುವುದರಿಂದ ಯಾವ ವೈದ್ಯರು ಇಲ್ಲಿ ತಂಗುವುದಿಲ್ಲ. ಹೀಗೆ ಇಲ್ಲಗಳ ನಡುವೆ ಆಸ್ಪತ್ರೆ ನಡೆಯುತ್ತಿದೆ.
ಸಣ್ಣ ಪುಟ್ಟ ಅಪಘಾತಗಳಿಗೂ ವೈದ್ಯರು ಕೋಲಾರಕ್ಕೆ ಶಿಫಾರಸು ಮಾಡುತ್ತಾರೆ. ಈ ಹೋಬಳಿ ಜನರು ತುರ್ತು ಪರಿಸ್ಥಿತಿಯಲ್ಲಿ ಕೋಲಾರ ಅಥವಾ ಕೆಜಿಎಫ್ಗೆ ಹೋಗಬೇಕಾಗಿದೆ. ದೊಡ್ಡ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ ಆರೋಗ್ಯ ಉಪ ಕೇಂದ್ರಗಳನ್ನು ಶಾಸ್ತ್ರಕ್ಕೆ ಪ್ರಾರಂಭಿಸಲಾಗಿದೆ ವಿನಃ ಒಮ್ಮೆಯೂ ಬಾಗಿಲು ತೆರೆದಿಲ್ಲದ ಕಾರಣ ಅವು ಹಾಳು ಕೊಂಪೆಗಳಾಗಿವೆ.
ಯಾವುದೇ ಸರ್ಕಾರ ಬಂದರೂ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಮಾತನಾಡಿ ಅಷ್ಟು ಲಕ್ಷ ಇಷ್ಟು ಲಕ್ಷ ಹಣ ಮೀಸಲಿಡಲಾಗಿದೆ, ಸರ್ಕಾರಿ ವೈದ್ಯರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ತಂಗಬೇಕು ಎಂದೆಲ್ಲ ಹೇಳುವರು. ಆದರೆ ವಾಸ್ತವಾಂಶ ನೋಡಿದರೆ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡಲು ಯಾವ ವೈದ್ಯರು ಮುಂದೆ ಬರುತ್ತಿಲ್ಲ. ಬಂದರೂ ಎರಡು ತಿಂಗಳು ಮೇಲಿರುವುದಿಲ್ಲ. ಇನ್ನು ಇಲ್ಲಿನ ಜನರ ಆರೋಗ್ಯ ಹೇಗೆ ತಾನೆ ಸುಧಾರಿಸಲು ಸಾಧ್ಯ. ಇಲಾಖೆ ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಆಸೆ ಆಕಾಂಕ್ಷೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಸಚಿವರ ಮೇಲೆ ನಿರೀಕ್ಷೆಯ ಮಹಾಪೂರ: ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ರವರೇ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿರುವುದರಿಂದ ದಪ್ಪ ಚರ್ಮದ ಅಧಿಕಾರಿಗಳಿಗೆ ಲಗಾಮು ಹಾಕಿ ಗ್ರಾಮೀಣ ಪ್ರದೇಶಗಳಲ್ಲಿ ನೆನೆಗುದಿಗೆ ಬಿದ್ದಿರುವ ಹೊಸ ಕಟ್ಟಡಗಳಿಗೆ ಉದ್ಘಾಟನೆಯ ಮೋಕ್ಷ ಕಲ್ಪಿಸಿ ವೈದ್ಯರು ಗ್ರಾಮಗಳಲ್ಲೇ ಇರುವಂತೆ ಮಾಡುವ ಮೂಲಕ ಬಡ ಜನರಿಗೂ ಉತ್ತಮ ಆರೋಗ್ಯ ಗ್ರಾಮೀಣ ಭಾಗದಲ್ಲೆ ದೊರೆಯುವಂತೆ ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

