ಆಹಾರ ಇಲಾಖೆ ವಿರುದ್ಧ ದೂರುಗಳ ಸುರಿಮಳೆ
ಕ.ಪ್ರ.ವಾರ್ತೆ ಮುಳಬಾಗಲು ಜು. 21
ತಾಲೂಕಿನ ತಾಯಲೂರು ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ಕೋಲಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಮತ್ತು ಅಹವಾಲು ಸಭೆ ನಡೆಯಿತು. ಪಂಚಾಯತಿಗೆ ಸಂಬಂಧಿಸಿದಂತೆ 3, ಡಿಟಿಒ 3, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 1 ದೂರು ದಾಖಲಾಯಿತು.
ಸಭೆಯಲ್ಲಿ ಮಾತನಾಡಿದ ಕೋಲಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಅಶ್ವತ್ಥನಾರಾಯಣ ಅವರು ಹೆಚ್ಚಿನ ಸಂಖ್ಯೆಯ ಜನ ಕಂದಾಯ ಇಲಾಖೆಯ ಮೇಲೆ ಅವಲಂಭಿತರಾಗಿರುತ್ತಾರೆ. ಮುಖ್ಯವಾಗಿ ಗ್ರಾಮ ಲೆಕ್ಕಿಗರ ಮೇಲೆ ಸಾವಿನಿಂದ ಬದುಕಿನವರೆವಿಗೂ ದಾಖಲೆಗಳಿಗೆ ಎಡತಾಕುತ್ತಾರೆ. ಹಾಗಾಗಿ, ಗ್ರಾಮ ಲೆಕ್ಕಿಗರು ಜನರ ಕೆಲಸಗಳನ್ನು ಆದಷ್ಟು ಶೀಘ್ರ ನೆರವೇರಿಸಲು ಮುಂದಾಗಬೇಕು. ಜನರಿಗೆ ಸಿಗುವಂತಿರಬೇಕು ಎಂದರು.
ಆಹಾರ ಮತ್ತ್ತು ನಾಗರಿಕ ಸೌಲಭ್ಯ ಪೂರೈಕೆ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಾಯಿತು. ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ತೂಕ ಹಾಕುವುದಿಲ್ಲ. ಒಂದು ಕೆಜಿಗೆ 1ರ ದರದ ಅಕ್ಕಿ ನೀಡುವಲ್ಲೂ ನ್ಯಾಯಬೆಲೆ ಅಂಗಡಿಗಳವರು ಸತಾಯಿಸುತ್ತಿದ್ದಾರೆ. ಪಡಿತರ ಚೀಟಿ ಪಡೆಯುವುದು ತುಂಬಾ ತ್ರಾಸವಾಗಿದೆ ಎಂದು ದೂರಿದರು.
ತಾಯಲೂರು ಅಮಾನಿಕೆರೆಯಲ್ಲಿ ನಿರ್ವಹಿಸಿದ ಕಾಮಗಾರಿಗೆ 3 ವರ್ಷವಾದರೂ ಹಣ ನೀಡಿಲ್ಲ ಎಂದು ರೈತರೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಲೋಕಾಯುಕ್ತರು ತಕ್ಷಣ ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ವಿನಾಕಾರಣ ಸೇವೆಯಲ್ಲಿ ವಿಳಂಬ ಮಾಡಿದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಸಿಬ್ಬಂದಿ ಪ್ರಸಾದ್, ಸುನೀಲ್, ಸುಧೀರ್, ಗ್ರಾಮ ಪಂಚಾಯತಿ ಅಧ್ಯಕ್ಷ ಎಟೆಎಂ ಗೌಡ, ಉಪಾಧ್ಯಕ್ಷ ಚಂದ್ರ, ಡೆಪ್ಯೂಟಿ ತಹಸೀಲ್ದಾರ್ ಆನಂದ್, ಕಂದಾಯ ನಿರೀಕ್ಷಕ ಬಿ.ವಿ.ರೆಡ್ಡಪ್ಪ ಗುಪ್ತ, ಸುಧಾಕರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ತೇಜೋಮೂರ್ತಿ, ಆರ್.ನಾರೆಪ್ಪ, ಜಿ.ನಾರಾಯಣ್, ಎಚ್.ವೆಂಕಟರೆಡ್ಜಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

