ಯೋಗದಿಂದ ಶಿಸ್ತಿನ ಜೀವನ ಸಾಧ್ಯ: ಗುರೂಜಿ
ಮಾಲೂರು: ನಿತ್ಯ ಜೀವನದ ಜಂಜಾಟದ ಮಧ್ಯೆ ಮನುಷ್ಯ ಮಾನಸಿಕ, ದೈಹಿಕವಾಗಿ ಸದೃಢವಾಗಿ ಇರಬೇಕಾದರೆ ಯೋಗ ಶಿಕ್ಷಣ ಪಡೆಯುವುದು ಅವಶ್ಯ ಎಂದು ಉನ್ನತಿ ಯೋಗ ಶಿಕ್ಷಣ ಕೇಂದ್ರದ ರವಿಗುರೂಜಿ ಹೇಳಿದರು. ಇಲ್ಲಿನ ಉನ್ನತಿ ಯೋಗ ಶಿಕ್ಷಣ ಕೇಂದ್ರದ ಸಾಧನ ಸಮಾಧಿ ಯೋಗದ ವತಿಯಿಂದ ಪಟ್ಟಣದ ಧರ್ಮರಾಯ ಕಲ್ಯಾಣ ಮಂಟಪದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ವೇಗದ ಯುಗದಲ್ಲಿ ಜನಜೀವನ ಯಾಂತ್ರೀಕೃತವಾಗಿದೆ. ಆರೋಗ್ಯದ ಕಡೆ ಹೆಚ್ಚು ಗಮನ ನೀಡಲಾಗುತ್ತಿಲ್ಲ. ಕೆಲಸದ ಒತ್ತಡವು ಮಾನಸಿಕ ಬಳಲಿಕೆಗೆ ಕಾರಣವಾಗಿ, ದೈಹಿಕವಾಗಿ ಕುಸಿಯುವಂತಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್ಎಸ್ವೈ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಶಿಸ್ತಿನ ಜೀವನ ಕಲಿಸಿಕೊಡಲಿದೆ ಎಂದರು. ಗುರು ಪೂರ್ಣಿಮೆ ಆಚರಣೆಯ ಅಂಗವಾಗಿ ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಯಿತು. ನಂತರ ನಡೆದ ಸಾಮೂಹಿಕ ಶ್ರೀಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಪಟ್ಟಣದ ನೂರಕ್ಕೂ ಹೆಚ್ಚು ದಂಪತಿ ಭಾಗವಹಿಸಿದ್ದರು. ಸತ್ಯನಾರಾಯಣಸ್ವಾಮಿ ಪೂಜೆ ನಂತರ ಪ್ರಸಾದ ವಿನಿಯೋಗ ನಡೆಯಿತು. ಉನ್ನತಿ ಯೋಗ ಶಿಕ್ಷಣ ಕೇಂದ್ರದ ಮಾತ ಮಂಗಳ ಗುರೂಜಿ, ಎಂ.ಪಿ. ನಾರಾಯಣಸ್ವಾಮಿ, ಪ್ರಕಾಶ್, ಡೈರಿ ರಮೇಶ್ ಇದ್ದರು.
'ಅನ್ನಭಾಗ್ಯ'ಕ್ಕೆ ಶಾಸಕ ರಾಜಣ್ಣ ಚಾಲನೆ
ಶಿಡ್ಲಘಟ್ಟ: ಪ್ರತಿಯೊಬ್ಬರಿಗೂ ಆಹಾರ ಸಿಗಬೇಕೆಂಬ ದೃಷ್ಟಿಯಿಂದ ಹೊಸ ಸರ್ಕಾರ 'ಅನ್ನಭಾಗ್ಯ' ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ರಾಜಣ್ಣ ಹೇಳಿದರು. ಪಟ್ಟಣದ ಕೆ.ಕೆ.ಪೇಟೆಯ ವೇಣು ಡಿಪೋದಲ್ಲಿ 'ಅನ್ನಭಾಗ್ಯ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಅನ್ನಭಾಗ್ಯ' ಕಾರ್ಯಕ್ರಮ ಬಡತನದ ರೇಖೆಗಿಂತ ಕೆಳಗಿರುವವರಿಗೆ ತುಂಬಾ ಸಹಕಾರಿಯಾಗಿದೆ. ಈ ಯೋಜನೆಯಲ್ಲಿ ಗೊಂದಲಗಳಿದ್ದು, ಅವನ್ನು ನಿವಾಹಿಸಬೇಕಿದೆ ಎಂದರು. ಪಟ್ಣಣದಲ್ಲಿ 85 ವಿತರಣಾ ಕೇಂದ್ರಗಳಿವೆ. ಅವರಿಗೆ ತನ್ನದೇ ಆದ ಸಮಸ್ಯೆಗಳಿವೆ. ಅದನ್ನು ಪರಿಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳಬೇಕಾಗಿದೆ. ಜನರಿಂದ ಅನೇಕ ದೂರುಗಳು ತಮ್ಮಲ್ಲಿಗೆ ಬಂದಿವೆ. ಪಡಿತರ ವಿತರಕರು ಜನರೊಂದಿಗೆ ಮಾನವೀಯ ದೃಷ್ಟಿಯಲ್ಲಿ ವ್ಯವಹರಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಪ್ಸರ್ ಪಾಷಾ, ಲಕ್ಷಣ್, ಶಿರಸ್ತೇದಾರ್ ರಂಗನಾಥ್, ಬಸವರಾಜ್, ಪಡಿತರ ವಿತರಕರು ಮತ್ತಿತರರು ಹಾಜರಿದ್ದರು.
'ಬಜೆಟ್ನಲ್ಲಿ 60
ಭರವಸೆ ಈಡೇರಿಕೆ'
ಬಂಗಾರಪೇಟೆ: ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿರುವ ಅಗ್ಗದ ಬೆಲೆ ಅಕ್ಕಿ ಸೇರಿದಂತೆ 160 ಭರವಸೆಗಳ್ನು ನೀಡಿತ್ತು. ಈ ಪೈಕಿ 60 ಭರವಸೆಗಳನ್ನು ಈಗಾಗಲೇ ಬಜೆಟ್ನಲ್ಲಿ ಪ್ರಕಟಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ. ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ, ಕಾಮಸಮುದ್ರ, ಅಪ್ಪೆನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಅಗ್ಗದ ಬೆಲೆಗೆ ಅಕ್ಕಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ರು. 400 ಕೋಟಿ ಸಾಲ ಮನ್ನಾ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲಾ ವರ್ಗದ ಜನರ ಸುಮಾರು ರು. 400 ಕೋಟಿ ಸಾಲ ಮನ್ನಾ ಮಾಡಿದೆ. ಜನಪರ ಬಜೆಟ್ ಮಂಡಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳು ಬಾಯಿ ತೆರೆಯದಂತೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕಾಮಸಮುದ್ರ ಹೋಬಳಿ ತೀರ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಗುಡಿ ಕೈಗಾರಿಕೆ ಪ್ರಾರಂಭಿಸಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮುಂದಾಗಿದ್ದಾರೆ ಇದು ಪ್ರಾರಂಭವಾದರೆ, ಒಂದು ಸಾವಿರ ಮಂದಿಗೆ ಕೆಲಸ ಸಿಗಲಿದೆ ಎಂದು ಹೇಳಿ ಇನ್ನು 6 ತಿಂಗಳಲ್ಲಿ ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ. ತಾವು ಶಾಸಕರಾದ ಎರಡು ತಿಂಗಳಲ್ಲಿ 100 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಈ ಪೈಕಿ 80ರಲ್ಲಿ ನೀರು ದೊರಕಿದೆ ಎಂದು ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ರೇಣುಕಾ ಬಾಲಚಂದ್ರ, ಜಿಪಂ ಸದಸ್ಯೆ ಸೀಮಾ ಮೋಹನ್, ತಾಪಂ ಮಾಜಿ ಸದಸ್ಯ ಪಿಚ್ಚಹಳ್ಳಿ ಗೋವಿಂದರಾಜು, ಶೋಭಾ ವೆಂಕಟರಾಮರೆಡ್ಡಿ, ಗೌರಮ್ಮ, ಜೆಸಿಬಿ ನಾರಾಯಣಪ್ಪ, ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

