ವಸತಿ ನಿಲಯ ಪರಿಸ್ಥಿತಿಗೆ ಮರುಗಿದ ಶಾಸಕ
ಕ.ಪ್ರ.ವಾರ್ತೆ ಬಂಗಾರಪೇಟೆ ಜು. 21
ಕುಡಿಯುವ ನೀರಿಲ್ಲ, ಶೌಚಾಲಯ ಮೊದಲೇ ಇಲ್ಲ. ಇಲ್ಲಿ ದಿನ ನಿತ್ಯ ಕರ್ಮಗಳಿಗೆ ಬಯಲೇ ಆಶ್ರಯ.
ಮಾತ್ರವಲ್ಲ, ಮಲಗಲು ಸೂಕ್ತವಾದ ಹಾಸಿಗೆಗಳು ಇಲ್ಲ. ರುಚಿಯಾದ ಊಟವೂ ಇಲ್ಲ. ಮುಗ್ಗಲು ಅಕ್ಕಿ ಅನ್ನ ತಿನ್ನಬೇಕು ಹೀಗೆ ಇಲ್ಲಗಳ ನಡುವೆ ಬಡ ಮಕ್ಕಳು ತಮ್ಮ ವಿದ್ಯಾ ಜೀವನ ಸಾಗಿಸುವಂತಾಗಿದೆ.
ಇದು ಗಡಿ ಭಾಗದ ತೊಪ್ಪನಹಳ್ಳಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಬಾಲಕರ ಹಾಸ್ಟೆಲ್ ಅವ್ಯವಸ್ಥೆಯ ಪ್ರತಿರೂಪ.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇಲ್ಲಿನ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದಾಗ ಅವ್ಯವಸ್ಥೆಯ ಆಗರ ಕಂಡು ಹೌಹಾರಿದರು.
ಈ ವಸತಿ ನಿಲಯದಲ್ಲಿ ಸುಮಾರು 77 ಮಕ್ಕಳಿದ್ದಾರೆ. ಆದರೆ, ಶಾಸಕರು ಭೇಟಿ ನೀಡಿದಾಗ, ಕೇವಲ 27 ಮಕ್ಕಳು ಮಾತ್ರ ಹಾಜರಿದ್ದರು. ವಸತಿ ನಿಲಯದೊಳಗೆ ಕಾಲಿಡುತ್ತಿದ್ದಂತೆ ಮೂಗಿಗೆ ದುರ್ವಾಸನೆ ಬಡಿಯಿತು. ಯಾವುದೇ ಅಗತ್ಯ ಸೌಲಭ್ಯಗಳಿಲ್ಲದ ಕಿಷ್ಕಿಂದೆಯಂತಿರುವ ಕಟ್ಟಡದಲ್ಲಿ ಹಾಸ್ಟೆಲ್ ನಡೆಯುತ್ತಿರುವುದು ಕಂಡು ಸಾಕ್ಷಾತ್ ಶಾಸಕರೇ ದಂಗಾದರು.
ಪ್ರತಿದಿನ ಸರ್ಕಾರದ ಆದೇಶದಂತೆ ಮಕ್ಕಳಿಗೆ ಊಟ ನೀಡುವುದಿಲ್ಲ, ರಾತ್ರಿ ಉಳಿಯುವ ರಾಗಿ ಮುದ್ದೆಯನ್ನು ಬೆಳಗಿನ ಜಾವದ ತಿಂಡಿಗೆ ಬಳಸುವರು. ಸ್ನಾನ ಮಾಡಲು, ಕುಡಿಯಲು ನೀರಿಲ್ಲದೆ ಇನ್ನಿಲ್ಲದ ಅವ್ಯವಸ್ಥೆ ನಿರ್ಮಾಣವಾಗಿದೆ. ಬೆಳಗ್ಗೆ ಎದ್ದರೆ ಬೆಳಗಿನ ಕಾರ್ಯಗಳಿಗೆ ಬಯಲು ಪ್ರದೇಶಕ್ಕೆ ಹೋಗಬೇಕು
ಎಂದು ಮಕ್ಕಳು ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡರು. ಈ ವೇಳೆಯಲ್ಲೇ 27 ಮಕ್ಕಳಿಗೆ ಮೂವರು ಅಡುಗೆ ತಯಾರಕರಿರುವುದು ಬೆಳಕಿಗೆ ಬಂದಿತು.
ಆದರೆ, ರಾತ್ರಿ ವೇಳೆ ಯಾರೂ ಇಲ್ಲಿ ಇರುವುದಿಲ್ಲ ಎಂಬ ಸತ್ಯವನ್ನೂ ಶಾಸಕರಿಗೆ ತಿಳಿಸಿದರು.
ವಸತಿ ನಿಲಯದ ಮಾಲೀಕರನ್ನು ಕರೆಸಿ ಮೂಲಭೂತ ಅನುಕೂಲಗಳನ್ನು ಒದಗಿಸದಿರುವುದಕ್ಕೆ ತರಾತೆಗೆ ತೆಗೆದುಕೊಂಡರು. ಕಳೆದ ಆರು ವರ್ಷಗಳಿಂದ ಬಾಡಿಗೆ ಹಣ ನೀಡಿಲ್ಲ ನಾವು ಹೇಗೆ ನಿಭಾಯಿಸುವುದು ನೀವೇ ಹೇಳಿ ಸ್ವಾಮಿ ಎಂದು ಶಾಸಕರಿಗೆ ಮರು ಪ್ರಶ್ನೆ ಹಾಕಿದರು.
ಶಾಸಕರ ಭರವಸೆ: ಗಡಿ ಭಾಗದ ಬಡ ಮಕ್ಕಳಿಗೆ ನಾಗರಿಕ ಅನುಕೂಲ ಕಲ್ಪಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವ ಸಲುವಾಗಿ ಸರ್ಕಾರ ವಸತಿ ನಿಲಯ ಆರಂಭಿಸಿದೆ. ಆದರೆ, ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ ಪ್ರತಿದಿನ ಮಕ್ಕಳು ನರಕ ಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವೆ ಹಾಗೂ ಸದರಿ ಹಾಸ್ಟೆಲ್ಗೆ ಸ್ವಂತ ಕಟ್ಟಡದ ಭಾಗ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ತಾಪಂ ಮಾಜಿ ಸದಸ್ಯ ಪಿಚ್ಚಹಳ್ಳಿ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ, ಗ್ರಾಪಂ ಸದಸ್ಯರಾದ ಶ್ರೀನಿವಾಸರೆಡ್ಡಿ, ಎಸ್.ಕೆ.ಜಯಣ್ಣ, ವರದರಾಜು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

