ಶಿಕ್ಷಣವನ್ನು ಅಸ್ತ್ರ ಮಾಡಿಕೊಳ್ಳಲು ತಿಗಳರಿಗೆ ಕಿವಿಮಾತು
ಕ.ಪ್ರ.ವಾರ್ತೆ ಕೋಲಾರ ಜು. 24
ಹಿಂದುಳಿದ ವರ್ಗಕ್ಕೆ ಸೇರಿರುವ ತಿಗಳ ಜನಾಂಗಕ್ಕೆ ಸೇರಿದವರು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕಾದರೆ ಶಿಕ್ಷಣವನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅಬಕಾರಿ ಡಿವೈಎಸ್ಪಿ ಎಲ್.ಎ. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜಿಲ್ಲಾ ತಿಗಳ ಜನಾಂಗ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ತಿಗಳರು ಇದ್ದರೂ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಇನ್ನು ಪ್ರಗತಿ ಸಾಧಿಸಿಲ್ಲವೆಂದು ವಿಷಾದಿಸಿದರು. ರಾಜ್ಯವನ್ನು ಆಳಿರುವಂತಹವರು ಸಹ ಇದುವರೆಗೂ ತಿಗಳ ಜನಾಂಗವನ್ನು ರಾಜಕೀಯವಾಗಿ ಗುರ್ತಿಸಿ ಸ್ಥಾನ ಮಾನವನ್ನು ನೀಡಿಲ್ಲ ಎಂದ ಅವರು, ನಾವೆಲ್ಲಾ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು. ಪ್ರತಿಭಾ ಪುರಸ್ಕಾರಗಳ ಮೂಲಕ ತಿಗಳ ಸಮುದಾಯದ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಜನಾಂಗದ ಮಕ್ಕಳು ಚನ್ನಾಗಿ ಓದಿ ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ಪ್ರದರ್ಶಿಸಬೇಕೆಂದರು. ರಾಜಕೀಯವನ್ನು ಬದಿಗೋತ್ತಿ ಸಮುದಾಯದ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದ ಅವರು, ಯಾವುದೇ ಕಾರಣಕ್ಕೂ ಸಂಘಗಳಿಗೆ ರಾಜಕೀಯ ಲೇಪನವನ್ನು ಅಂಟಿಸಿಕೊಳ್ಳಬಾರದು ಎಂದು ಮಾರ್ಮಿಕವಾಗಿ ನುಡಿದರು. ರಾಜ್ಯ ವಹ್ನಿಕುಲ ತಿಗಳ ಸಂಘದ ಕಾರ್ಯದರ್ಶಿ ಕೆ. ಲಕ್ಷ್ಮಣ್ ಮಾತನಾಡಿ, ಜನಾಂಗ ಆರ್ಥಿಕ, ಸಾಮಾಜಿಕ ಮತ್ತು ಬಲಿಷ್ಟವಾಗಿ ಸಂಘಟನೆಗೊಂಡರೆ ರಾಜಕೀಯವಾಗಿ ಮೂಲೆಗುಂಪು ಮಾಡಿರುವ ರಾಜಕೀಯ ಪಕ್ಷಗಳೇ ನಮ್ಮನ್ನು ಹುಡಕಿಕೊಂಡು ಬರುತ್ತವೆ ಎಂದು ಹೇಳಿದರು. ತಿಗಳ ಜನಾಂಗದಲ್ಲಿ ಸಿಕ್ಕಿರುವಂತಹ ಅವಕಾಶಗಳನ್ನ ಸದ್ಬಳಕೆ ಮಾಡಿಕೊಂಡು ಸಾಕಷ್ಟು ಮಂದಿ ಈ ರಾಜ್ಯದ ಅಭಿವೃದ್ಧಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ ಎಂದ ಅವರು, ಸಮುದಾಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂದರು.
ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ಅಧ್ಯಕ್ಷ ಎಂ. ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ತಿಗಳ ನೌಕರರ, ವೃತಿಪರರ ಸಂಘದ ಅಧ್ಯಕ್ಷ ಸಿ. ಕೃಷ್ಣಪ್ಪ, ರಾಜ್ಯ ತಿಗಳರ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ಈ. ಕೃಷ್ಣನಾರಾಯಣ್, ಜಿಲ್ಲಾ ತಿಗಳ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ವೆಂಕಟೇಶ್, ಮಾಲೂರು ಚಂದ್ರಪ್ಪ, ಜಿಲ್ಲಾ ಯುವ ತಿಗಳ ಸಂಘದ ಅಧ್ಯಕ್ಷ ರಾಜಣ್ಣ ಇದ್ದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾ ತಿಗಳ ಜನಾಂಗ ಸಮನ್ವಯ ಸಮಿತಿ ಕಾರ್ಯದರ್ಶಿ ಎನ್. ಪಲ್ಗುಣ ನಿರೂಪಿಸಿ, ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

