ಐಟಿ ದಾಳಿಗೆ ಜಾತಿ ಲೇಪನ ಸಲ್ಲದು
ಕ.ಪ್ರ.ವಾರ್ತೆ ಮಂಡ್ಯ ಜು. 25
ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಗೆ ಜಾತಿಯ ಲೇಪನ ಮಾಡುವುದು ಸರಿಯಲ್ಲ. ಹೀಗಾಗಿ ಸ್ವಾಭಿಮಾನಿ ಒಕ್ಕಲಿಗರ ಒಕ್ಕೂಟ ಕರೆ ನೀಡಿರುವ ಮಂಡ್ಯ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ರೈತ ಸಂಘ ಮುಖಂಡ ಕೆ.ಎಸ್.ನಂಜುಂಡೇಗೌಡ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ದೇಶದಲ್ಲಿ ಸಂವಿಧಾನ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿಗೆ ತಲೆಬಾಗಿ ನಡೆಯುವುದು ಎಲ್ಲರ ಕರ್ತವ್ಯ ಎಂದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ. ಕಾನೂನು ರೀತಿಯಲ್ಲಿ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ. ಅದನ್ನು ವಿರೋಧಿಸುವುದು ತಪ್ಪಾಗುತ್ತದೆ ಎಂದು ಹೇಳಿದರು.
ಬಂದ್ಗೆ ಬೆಂಬಲ ಇಲ್ಲ: ಆದಿಚುಂಚನಗಿರಿ ಶಾಖಾ ಮಠದ ಮೇಲೆ ನಡೆಸಿದ ದಾಳಿ ಖಂಡಿಸಿ ಜಿಲ್ಲಾ ಸ್ವಾಭಿಮಾನಿ ಒಕ್ಕಲಿಗರ ಒಕ್ಕೂಟ ಮಂಡ್ಯ ಬಂದ್ಗೆ ಕರೆ ನೀಡಿದೆ. ಆದರೆ, ಈ ಬಂದ್ನ್ನು ರೈತಸಂಘ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದರು.
ಅತಂತ್ರ ಸ್ಥಿತಿಯಲ್ಲಿ ರೈತರು: ವರುಣನ ಕೃಪೆಯಿಂದ ಈ ವರ್ಷ ಅವಧಿಗೂ ಮುನ್ನವೇ ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ. ಆದರೆ, ಈ ನೀರನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜ್ಞಾನ ಇದ್ದಂತಿಲ್ಲ ಎಂದು ಟೀಕಿಸಿದರು.
ರೈತರು ಈಗ ಯಾವ ಬೆಳೆ ಬೆಳೆಯಬೇಕು, ಎಷ್ಟು ಪ್ರಮಾಣದಲ್ಲಿ ನಾಲೆಗಳಿಗೆ ನೀರು ಹರಿಸಲಾಗುವುದು, ನಾಲೆಗಳನ್ನು ಆಧುನೀಕರಣ ಮಾಡುತ್ತಾರೋ, ಇಲ್ಲವೋ ಅಥವಾ ಮುಂದಿನ ಬೇಸಿಗೆಯಲ್ಲಿ ಆಧುನೀಕರಣ ಕಾಮಗಾರಿಯನ್ನು ನಡೆಸುವರೋ ಎಂಬ ಬಗ್ಗೆ ರೈತರಿಗೆ ಮಾಹಿತಿಯನ್ನೇ ನೀಡುತ್ತಿಲ್ಲ. ಇದರಿಂದ ರೈತರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು.
ಕೆಆರ್ಎಸ್ ಭರ್ತಿ ಆಗಿರುವುದರಿಂದ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಕೆರೆ-ಕಟ್ಟೆಗಳನ್ನು ತುಂಬಿಸಿ ಅಂತರ್ಜಲವೃದ್ಧಿಗೆ ವಿಶೇಷ ಗಮನಹರಿಸಬೇಕು. ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಕೊನೆಯ ಭಾಗಕ್ಕೂ ನೀರು ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಸಿಬಿಐಗೆ ವಹಿಸಲಿ: ಕೇಂದ್ರ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಬ್ಯಾಂಕುಗಳು ಹಾಗೂ ಮುಡಾ, ರಾ-ಚ.ದಲ್ಲಿ ಕೋಟ್ಯಂತರ ರು.ಗಳ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಂಜುಂಡೇಗೌಡ ಆಗ್ರಹಿಸಿದರು.
ಜು.27ರಂದು ನಿರ್ಧಾರ: ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಕಣಕ್ಕೆ ಯಾರನ್ನು ಇಳಿಸಬೇಕೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಜು.27 ರಂದು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ರೈತ ಸಂಘ ಮುಖಂಡರಾದ ಅಶೋಕ್, ಕೋಣಸಾಲೆ ನರಸರಾಜು, ಶಂಭೂನಹಳ್ಳಿ ಸುರೇಶ್, ಹನಿಯಂಬಾಡಿ ನಾಗರಾಜು, ರಾಮಕೃಷ್ಣ, ರೇವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

