ಕಾಯಕ ಬಂಧುಗಳ ಸಹಕಾರ; ನರೇಗಾ ವೇಗ ಹೆಚ್ಚಳ
ಕ.ಪ್ರ.ವಾರ್ತೆ , ಕೋಲಾರ , ಜು.30
ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಾಯಕ ಬಂಧುಗಳ ಸಹಕಾರದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಓಂಕಾರಯ್ಯ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿ.ಪಂ. ಮತ್ತು ತಾ.ಪಂ. ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಯಕ ಸಂಘ ರಚನೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ನರೇಗಾದ ನಿರ್ದೇಶಕರು ಇತ್ತೀಚೆಗೆ ಸಭೆ ನಡೆಸಿ ನರೇಗಾ ಯೋಜನೆ ಕೋಲಾರ, ಚಿತ್ರದುರ್ಗ, ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ನಡೆಯದೆ ಇರುವುದರಿಂದ ಕಾಯಕ ಸಂಘಗಳ ರಚನೆ ಮೂಲಕ ನರೇಗಾ ಕೆಲಸದ ವೇಗವನ್ನು ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ ಎಂದರು.
ನರೇಗಾ ಯೋಜನೆಯ ಅನುಷ್ಠಾನದಲ್ಲಿ ಕೆಲವು ಮಾರ್ಪಾಟು ಮಾಡಿ ಕಾಯಕ ಬಂಧುಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಕೆಲಸ ನೀಡಲು ಅಧಿಕಾರಿಗಳು ಸೂಚಿಸಿದ್ದಾರೆಂದ ಅವರು ಒಂದೇ ಗ್ರಾಮದ ನಿವಾಸಿಗಳು ಹಾಗೂ ಅರ್ಹ ಉದ್ಯೋಗ ಚೀಟಿ ಹೊಂದಿರುವ 20 ರಿಂದ 25 ಜನರನ್ನು ಒಳಗೊಂಡ ಒಂದು ಕಾಯಕ ಸಂಘವನ್ನು ಸಂಘಟಿಸಲಾಗುವುದು ಎಂದರು. ಈ ಸಂಘವು ಒಂದು ಸಮ್ಮಿಶ್ರಿತ ಗುಂಪಾಗಿದ್ದು, ಕೂಲಿಕಾರರಿಗೆ ನೀಡುವ ಚೀಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತಮ್ಮ ಗ್ರಾಮದ ಯಾವುದೇ ಕಾಯಕ ಸಂಘದಲ್ಲಿ ಸದಸ್ಯರಾಗಬಹುದು ಎಂದು ತಿಳಿಸಿದರು.
ಸಂಘದ ಸದಸ್ಯರಿಂದ ಆಯ್ಕೆಯಾಗುವ ನಾಯಕ ಕಾಯಕ ಬಂಧುವಾಗಿರುತ್ತಾರೆ, ಸಂಘದ ಪರವಾಗಿ ಗ್ರಾ.ಪಂ, ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಸಂಪರ್ಕವಿಟ್ಟುಕೊಂಡು ಯೋಜನೆ ಪರಿಣಾಮಕಾರಿಯಾಗಿ ನಡೆಸಲು ಸಹಕಾರ ನೀಡಬೇಕಾಗಿರುವುದರಿಂದ ಈ ಹೆಚ್ಚಿನ ಕೆಲಸಕ್ಕಾಗಿ ಅವರಿಗೆ ಹೆಚ್ಚಿನ ಮೊಬಲಗನ್ನು ಪಾವತಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಹೋಬಳಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವುದು, ನೋಡಲ್ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿ ಪ್ರತಿ ಗ್ರಾಮ ಪಂಚಾಯಿತಿಗೆ 5 ರಿಂದ 6 ಜನ ನೌಕರರನ್ನು ಗುರುತಿಸಿ ಅವರುಗಳಿಗೆ ಗ್ರಾಮವಾರು ಕಾಯಕ ಸಂಘ ಸಂಘಟಿಸುವ ಜವಾಬ್ದಾರಿ ವಹಿಸಲಾಗುವುದು ಎಂದು ವಿವರಿಸಿದರು. ಕಾಯಕ ಸಂಘದ ಸದಸ್ಯರ ಹೆಸರುಗಳನ್ನು ಆ.16ರೊಳಗೆ ನಮೂದಿಸಿ ನೀಡಬೇಕು ಎಂದ ಅವರು, ಪ್ರತಿ ದಿನ ಕೂಲಿ ಮಾಡುವಂತಹ ಸದಸ್ಯರಿಗೆ 175 ರು.ಗಳನ್ನು ನೀಡಲಾಗುವುದು ಎಂದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಭಟ್ ಮಾತನಾಡಿ, ರಾಜ್ಯದಲ್ಲಿ ಸ್ತ್ರೀ ಶಕ್ತಿಗಳನ್ನು ರಚಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದರಿಂದ ಕೇಂದ್ರ ಸರ್ಕಾರ ಕಾಯಕ ಸಂಘ ರಚನೆಯ ಜವಾಬ್ದಾರಿಯನ್ನು ಸಹ ಅಂಗನವಾಡಿ ಕಾರ್ಯಕರ್ತರಿಗೆ ನೀಡಲು ಚಿಂತನೆ ನಡೆದಿದೆ ಎಂದರು. ಅಧಿಕಾರಿ ಮಾತು ಮುಗಿಯುವ ಮುನ್ನವೇ ಸಭೆಯಲ್ಲಿದ್ದ ಕೆಲ ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ತಮಗೆ ಸಾಕಷ್ಟು ಕೆಲಸಗಳನ್ನು ವಹಿಸಲಾಗಿದ್ದು ಇದರ ಜೊತೆಗೆ ನರೇಗಾ ಕೆಲಸ ನೀಡುವುದರಿಂದ ಕಷ್ಟವಾಗುತ್ತದೆ, ನಮಗೆ ಈ ಕೆಲಸ ಬೇಡ ಎಂದು ಆಗ್ರಹಿಸಿದರು.
ಕಾಯಕ ಸಂಘ ರಚನೆ ಮಾಡಿದ್ದಲ್ಲಿ ಸರ್ಕಾರ ನಿಮಗೆ ಪ್ರೋತ್ಸಾಹ ಧನ ನೀಡುತ್ತದೆ ಎಂದು ತಾ.ಪಂ ಇಓ ಹೇಳಿದಾಗ, ಈಗಾಗಲೇ ಶೌಚಾಲಯ ಸರ್ವೆ ಕಾರ್ಯ ಮಾಡಿದ ನಮಗೆ ಹಣ ಬಂದಿಲ್ಲ, ಇನ್ನು ಕಾಯಕ ಸಂಘದ ಬಗ್ಗೆ ಹೇಗೆ ನಂಬಿಕೆ ಇಡಲು ಸಾಧ್ಯವೆಂದಾಗ ವಾರದೊಳಗೆ ಎಲ್ಲಾ ಹಣವನ್ನು ಬಿಡುಗಡೆ ಮಾಡುವುದಾಗಿ ಇಓ ಭರವಸೆ ನೀಡಿದ್ದ ನಂತರ ಅಂಗನವಾಡಿ ಕಾರ್ಯಕರ್ತರು ಮೌನ ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

