ಗ್ರಾಮೀಣ ಸಮಸ್ಯೆಅರಿವು ಕಾರ್ಯಕ್ರಮ
ಗುಡಿಬಂಡೆ: ಜೀವಿಕ ಸಂಘಟನೆ ವತಿಯಿಂದ ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ತಟ್ಟಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಸಮಸ್ಯೆಗಳನ್ನು ಅರ್ಥೈಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಸಂಚಾಲಕ ನಾರಾಯಣಸ್ವಾಮಿ ತಾಲೂಕಿನಲ್ಲಿ ಸುಮಾರು 18 ವರ್ಷಗಳಿಂದ ಜೀತದಾಳುಗಳ ಕ್ಷೇಮಾಭಿವೃದ್ಧಿಗಾಗಿ ಸಂಘಟನೆ ಶ್ರಮಿಸುತ್ತಿದೆ. ರಾಜ್ಯದಲ್ಲಿ ಈತನಕ ಸುಮಾರು 60 ಸಾವಿರ ಜೀತದಾಳುಗಳನ್ನು ಗುರುತಿಸಿ ಬಿಡುಗಡೆ ಪತ್ರ ಕೊಡಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿ ಸಾಲಸೌಲಭ್ಯಗಳನ್ನು ಒದಗಸಿಸಿಕೊಟ್ಟು ಪುನರ್ವಸತಿ ಕಲ್ಪಿಸಲಾಗಿದೆ ಎಂದರು. ತಾ. ಸಂಚಾಲಕರಾದ ಚೆನ್ನರಾಯಪ್ಪ, ಅಮರಾವತಿ, ಹೋಬಳಿ ಸಂಚಾಲಕರಾದ ರಾಮಾಂಜನೇಯ, ಸುಜಾತ, ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಆದಿನಾರಾಯಣಸ್ವಾಮಿ, ತಾಪಂ ಸದಸ್ಯ ಮದ್ದಿರೆಡ್ಡಿ, ರಾಜಸ್ವ ನಿರೀಕ್ಷಕ ಅಮರನಾರಾಯಣ ಇದ್ದರು.
ಪೌರಸೇವಾ ನೌಕರರ ಸಂಘಕ್ಕೆ ಆಯ್ಕೆ
ಗುಡಿಬಂಡೆ: ರಾಜ್ಯ ಪೌರ ನೌಕರರ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆಯೆಂದು ಚುನಾವಣಾಧಿಕಾರಿ ಹನುಮಂತರಾಜು ತಿಳಿಸಿದ್ದಾರೆ. ಅಧ್ಯಕ್ಷರು ಎ.ಗಂಗಪ್ಪ, ಉಪಾಧ್ಯಕ್ಷ ಅಶ್ವತ್ಥಪ್ಪ, ಕಾರ್ಯದರ್ಶಿ ಚಿಕ್ಕಮುನಿಶ್ವಾಮಿ, ಖಜಾಂಚಿ ಉಸ್ಮಾನ್ ಬೇಗ್, ಸಂಘಟನಾ ಕಾರ್ಯದರ್ಶಿಯಾಗಿ ಶಂಕರಪ್ಪ, ಕಾನೂನು ಸಲಹೆಗಾರ ಆರ್.ಲೋಕೇಶ್, ಮತ್ತು ಪರಿಷತ್ತಿನ ಸದಸ್ಯರಾಗಿ ಆರ್.ಮುನಿಕೃಷ್ಣ, ಹನುಮಂತರಾಜು, ಚಿಕ್ಕಗಂಗಪ್ಪ ರವರು ಆಯ್ಕೆಯಾಗಿದ್ದಾರೆ.
ಗ್ರಾಪಂನ ತೆರವಾಗಿದ್ದ2 ಕ್ಷೇತ್ರ ಚುನಾವಣೆ
ಟೇಕಲ್: ಕೊಂಡಶೆಟ್ಟಹಳ್ಳಿ ಗ್ರಾಪಂನ ತೆರವಾಗಿದ್ದ 2 ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಕುಂಟನಹಳ್ಳಿ ಕ್ಷೇತ್ರದಲ್ಲಿ ಅರುಣಾ ಮತ್ತು ಗಿರಿಜಾ ಹಾಗೂ ನಕ್ಕನಹಳ್ಳಿ ಕ್ಷೇತ್ರದಲ್ಲಿ ಬಿ. ವೆಂಕಟರಮಣಪ್ಪ ಹಾಗೂ ಶಿವರಾಜ್ರವರು ಅಂತಿಮ ಕಣದಲ್ಲಿದ್ದು ಆ. 4ರ ಬೆ. 7-00 ರಿಂದ ಸಂಜೆ 5-00 ರವರೆಗೂ ಚುನಾವಣೆ ನಡೆಯಲಿದ್ದು ಆ.7ರಂದು ಮಾಲೂರಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಬಿ.ಇ.ಒ. ಸುಬ್ರಮಣ್ಯಂ ತಿಳಿಸಿದ್ದಾರೆ.
ವೃದ್ಧೆಗೆ ಹೊಡೆದು ಚಿನ್ನದ ಸರ ಕಳವು
ಶಿಡ್ಲಘಟ್ಟ: ವ್ಯಾಪಾರ ಮಾಡಲು ಬಂದು ಅಂಗಡಿಯಲ್ಲಿದ್ದ ವೃದ್ಧೆಗೆ ಹೊಡೆದು ಕತ್ತಿನಲ್ಲಿದ್ದ ಚಿನ್ನದ ಚೈನನ್ನು ಕಸಿದು ಪರಾರಿಯಾಗಿರುವ ಘಟನೆ ಮೇಲೂರು ಗ್ರಾಮದಲ್ಲಿ ನಡೆದಿದೆ. ಗೌರಮ್ಮ(80) ಗ್ರಾಮದ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ಮಧ್ಯಾಹ್ನ 3.30 ರ ವೇಳೆಯಲ್ಲಿ ವ್ಯಾಪಾರಕ್ಕೆ ಬಂದ ಇಬ್ಬರು ಅಪರಿಚಿತರು ಗೌರಮ್ಮನಿಗೆ ಒಡೆದು ಕತ್ತಿನಲ್ಲಿದ್ದ 16 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.
ಗೃಹೋಪಯೋಗಿ ವಸ್ತು ದುರಸ್ತಿ ತರಬೇತಿ
ಮಂಡ್ಯ: ವಿಜಯಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆ, ನಬಾರ್ಡ್ ಮಂಡ್ಯ ಇವರ ಸಹಯೋಗದೊಂದಿಗೆ 18 ರಿಂದ 45 ವರ್ಷ ವಯೋವುತಿಯೊಳಗಿನ ನಿರುದ್ಯೋಗಿ ಯುವಕರಿಗೆ ಆ.30 ದಿನಗಳ ಉಚಿತ ಮೋಟಾರ್ ರಿವೈಂಡಿಂಗ್-ಗೃಹೋಪಯೋಗಿ ಉಪಕರಣಗಳ ದುರಸ್ತಿಯ ತರಬೇತಿ ಏರ್ಪಡಿಸಲಾಗಿದೆ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸಲಾಗುವುದು. ಕನ್ನಡ ಓದಲು ಬರೆಯಲು ಬಲ್ಲ, ಸ್ವಉದ್ಯೋಗ ಮಾಡಲು ಆಸಕ್ತಿಯಿರುವ ಯುವಕರು ತಮ್ಮ ವಿಳಾಸ, ವಯಸ್ಸು ವಿದ್ಯಾಭ್ಯಾಸ ಹಾಗೂ ಇನ್ನಿತರ ಅವಶ್ಯ ಮಾಹಿತಿಗಳೊಂದಿಗೆ ಆ.17ರೊಳಗಾಗಿ ಅರ್ಜಿ ಸಲ್ಲಿಸುವುದು. ಮಾಹಿತಿಗಾಗಿ ನಿರ್ದೇಶಕರು, ವಿಬ್ ಸಿಟಿ, ಕಾರಸವಾಡಿ ರಸ್ತೆ, ಕೆ.ಎಚ್.ಬಿ. ಕಾಲೋನಿ, ಆದರ್ಶ ಶಾಲೆ ಹತ್ತಿರ, ಹೊಸಹಳ್ಳಿ, ಮಂಡ್ಯ ಇವರನ್ನು ಖುದ್ದಾಗಿ ಅಥವಾ ದೂ. 08232-231497, 231293 ಮೂಲಕ ಸಂಪರ್ಕಿಸಿ.
4ರಂದು ಆರೋಗ್ಯ ತಪಾಸಣೆ ಶಿಬಿರ
ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ತ್ರಿನೇತ್ರ ಶೀಗಳ 38ನೇ ಹುಟ್ಟುಹಬ್ಬ ಮತ್ತು ಲಿಂಗೈಕ್ಯ ಮರಿದೇವರ 5ನೇ ಪುಣ್ಯಸ್ಮರಣೆ ಅಂಗವಾಗಿ ಆ.4ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಜೈನ್ ಮೆಡಿಕಲ್ ರಿಲೀಫ್ ಸೊಸೈಟಿ ಮೈಸೂರು ಹಾಗೂ ಶ್ರೀಭಗವಾನ್ ಮಹಾವೀರ ದರ್ಶನ್ ಆಸ್ಪತ್ರೆ, ನಾರಾಯಣ ಹೃದಯಾಲಯ ಬೆಂಗಳೂರು, ಸಿಟಿ ಹೆಲ್ತ್ ಸೆಂಟರ್ ಮೈಸೂರು ಆಶ್ರಯದಲ್ಲಿ ಮಠದ ಭಕ್ತರು ಈ ಶಿಬಿರ ಆಯೋಜಿಸಿದೆ ಎಂದು ತಿಳಿಸಲಾಗಿದೆ.
ಕೆಆರ್ಎಸ್ ಶಾಲೆಯಲ್ಲಿ ವನಮಹೋತ್ಸವ
ಶ್ರೀರಂಗಪಟ್ಟಣ: ತಾಲೂಕಿನ ಕೆಆರ್ಎಸ್ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ವನಮಹೋತ್ಸವಕ್ಕೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಗ್ರಾಪಂ ಅಧ್ಯಕ್ಷ ಎಂ.ಬಿ. ಕುಮಾರ್ಗೌಡ ನೆಡುವ ಮೂಲಕ ಚಾಲನೆ ನೀಡಿದರು. ಶಾಲೆಯ ಉಪಪ್ರಾಂಶುಪಾಲ ರಾಮಕೃಷ್ಣೇಗೌಡ, ಶಿಕ್ಷಕರಾದ ನಾಗರಾಜು, ಜಯಲಕ್ಷಿ ಸೇರಿದಂತೆ ಶಾಲೆಯ ಮಕ್ಕಳು ಭಾಗವಹಿಸಿ ಗ್ರಾಮದ ಬೀದಿಗಳಲ್ಲಿ ಗಿಡ ನೆಡುವುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜಾಥಾ ನಡೆಸಿದರು.
ಜೂಡೋ, ಕರಾಟೆ: ರಾಜ್ಯಮಟ್ಟಕ್ಕೆ ಆಯ್ಕೆ
ಭಾರತೀನಗರ: ಇಲ್ಲಿನ ಚಾಂಷುಗರ್ ಶಾಲೆ ವಿದ್ಯಾರ್ಥಿಗಳು ಮಂಡ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗುರುಭವನದಲ್ಲಿ ನಡೆದ ಜಿಲ್ಲಾಮಟ್ಟದ ಜೂಡೋ ಮತ್ತು ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯಶಿಕ್ಷಕ ಪ್ರಕಾಶ್, ಕ್ರೀಟಾಪಟುಗಳು ಮತ್ತು ಕರಾಟೆ ತರಬೇತಿದಾರರನ್ನು ಅಭಿನಂದಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ನಮ್ಮ ಶಾಲೆ ಮಕ್ಕಳು ಜಪಾನಿನ ಪರಂಪರಾಗತ ಜೂಡೋ ಕಲೆ ಮೈಗೂಡಿಸಿಕೊಂಡು ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು. ಕರಾಟೆ ತರಬೇತಿದಾರರಾದ ಡಿ.ಅರುಣ್, ಮನು, ಕ್ರೀಡಾಪಟುಗಳಾದ ಸುಮಂತ್, ಸಂಜಯ್, ಎನ್.ಎಸ್. ರಘು, ಗೌತಮ್, ಭುವನ್ ಸೇರಿದಂತೆ ಇತರೆ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಇಂದು ಉದ್ಘಾಟನೆ
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾ ಭವನದಲ್ಲಿ ಆ.1ರಂದು 2013- 14ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.ಕಾರ್ಯಕ್ರಮದಲ್ಲಿ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿ ಆಶೀರ್ವಚನ ನೀಡುವರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಕೆ.ಇ. ರಾಧಾಕೃಷ್ಣ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅಧ್ಯಕ್ಷೀಯ ಭಾಷಣ ಮಾಡುವರು.
ಮಾರಾಟವಾಗದ ಬಿತ್ತನೆ ಬೀಜ
ಶ್ರೀನಿವಾಸಪುರ: ಈ ಬಾರಿ ಇದುವರೆಗೂ ಕೋಲಾರ ಜಿಲ್ಲೆಯಲ್ಲಿ ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಮುಂಗಾರು ಮಳೆಯಾಗದಿರುವುದರಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಕೃಷಿ ಇಲಾಖೆ ದಾಸ್ತಾನು ಮಾಡಿದ್ದ ಕೃಷಿ ಸಲಕರಣೆಗಳು ಹಾಗೂ ಬಿತ್ತನೆ ಬೀಜಗಳು ಮಾರಾಟವಾಗದೆ ಸರ್ಕಾದ ಬೊಕ್ಕಸಕ್ಕೆ ಲಕ್ಷಾಂತರ ರು. ನಷ್ಟ ಉಂಟಾಗುವ ಸಂಭವ ಕಾಣುತ್ತಿದೆ. ತಾಲೂಕಿನಲ್ಲಿ ಇದುವರೆಗೂ ಮುಂಗಾರು ಮಳೆ ಇಲ್ಲದೆ ಕೃಷಿ ಕ್ಷೇತ್ರಕ್ಕಲ್ಲದೆ ಜಾನುವಾರುಗಳಿಗೂ ಹನಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಮನೆ ಬೀಗ ಮುರಿದು ಕಳವು
ಕೆಜಿಎಫ್: ಮನೆ ಬೀಗ ಮುರಿದ ಕಳ್ಳರು ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಮಾರುಕಟ್ಟೆ ರಸ್ತೆ ನಿವಾಸಿ ಯಮುನಾದೇವಿ ಅವರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಗೌತಂನಗರದಲ್ಲಿರುವ ಹೊಸ ಮನೆಗೆ ಹೋಗಿದ್ದರು. ಮಾರನೇ ದಿನ ಬೆಳಗ್ಗೆ 10 ಗಂಟೆಗೆ ಬಂದು ನೋಡಿದಾಗ ಮನೆಯ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಕಬೋರ್ಡ್ನಲ್ಲಿಟ್ಟಿದ್ದ ಚಿನ್ನದ ಒಡವೆಗಳು ಸೇರಿದಂತೆ ಮನೆಯಲ್ಲಿದ್ದ ಸುಮಾರು 15 ಸಾವಿರ ಬೆಲೆ ಬಾಳುವ ಹಿತ್ತಾಳೆ ಪಾತ್ರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಯಮುನಾದೇವಿ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

