ಕೋಲಾರ

ದೇಗುಲ ಅಭಿವೃದ್ಧಿಗಾಗಿ ಪೂರ್ವಭಾವಿ ಸಭೆ

Published On :

ಬಂಗಾರಪೇಟೆ: ಪಟ್ಟಣದ ಪುರಾಣ ಪ್ರಸಿದ್ಧ ಕೋದಂಡರಾಮಸ್ವಾಮಿ ದೇವಾಲಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಾಸಕರ ಮುಂದಾಳತ್ವದಲ್ಲಿ ದೇವಾಲಯ ಆವರಣದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವರ್ತಕರು, ಪತ್ರಕರ್ತರು ಹಾಗೂ ಸಾರ್ವಜನಿಕರು, ಮೊದಲು ದೇವಾಲಯದ ಒಟ್ಟು ಆಸ್ತಿಗಳು ಎಷ್ಟಿವೆ ಎಂಬುದನ್ನು ಬಹಿರಂಗಪಡಿಸಿ. ಈಗಾಗಲೇ ದೇವಾಲಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅವರನ್ನು ಬಿಡಿಸಿ ನಂತರ ಯಾವ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎಂಬುದನ್ನು ಚರ್ಚಿಸಬೇಕು ಎಂದು ಸಲಹೆ ನೀಡಿದರು.
ದೇವಾಲಯದ ಆಸ್ತಿಯನ್ನು ಯಾರೂ ಸಂರಕ್ಷಿಸದೆ ನಿರ್ಲಕ್ಷ್ಯ ಮಾಡಿರುವುದರಿಂದ ದೇವಾಲಯ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ 20 ಲಕ್ಷ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಶಾಸಕರು ಮುಂದಾಗಿರುವುದನ್ನು ಶ್ಲಾಘಿಸಿದರು.
ನಂತರ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಈ ಹಿಂದೆ ನಿರ್ಲಕ್ಷ್ಯದಿಂದ ದೇವಾಲಯ ಮೂಲೆಗುಂಪಾಗಿತ್ತು. ಈಗ ಅಭಿವೃದ್ಧಿಗೆ ಕಾಲ ಕೂಡಿಬಂದಿದೆ. ಎಲ್ಲರ ಸಹಕಾರದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ಭಕ್ತಾದಿಗಳಿಗೆ ತೊಂದರೆಯಾಗದಂತೆ ಮಾಡಬೇಕು ಎಂದರಲ್ಲದೆ ದೇವಾಲಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕಲ್ಯಾಣ ಮಂಟಪ, ವಾಣಿಜ್ಯ ಮಳಿಗೆಗಳು, ಬ್ಯಾಂಕ್ ಕಟ್ಟಡ ಮತ್ತು ಇಲ್ಲಿಗೆ ಬರುವ ಜನರಿಗೆ ಸುಲಭ ಶೌಚಾಲಯ ಮತ್ತು ವಾಹನಗಳ ನಿಲುಗಡೆಗೆ ಸುಸಜ್ಜಿತ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಭರವಸೆ: ಮೊದಲು ಇದಕ್ಕೆಲ್ಲ ಕ್ರಿಯಾ ಯೋಜನೆ ರೂಪಿಸಿ ಅಂದಾಜು ವೆಚ್ಚವನ್ನು ತಯಾರಿಸಿ ನಂತರ ನಾನು ಮುಜರಾಯಿ ಸಚಿವರೊಂದಿಗೆ ಚರ್ಚಿಸಿ ಅಗತ್ಯವಾಗಿ ಬೇಕಾಗಿರುವ ಹಣವನ್ನು ಮಂಜೂರು ಮಾಡಿಸುವೆ ಎಂದು ಭರವಸೆ ನೀಡಿದರು.
ಒತ್ತುವರಿ ಜಾಗವನ್ನು ತೆರವುಗೊಳಿಸಲು ಹಾಗೂ ಅಭಿವೃದ್ಧಿಗೆ ರೂಪರೇಷಗಳನ್ನು ತಯಾರಿಸಲು ಸಮಿತಿಯೊಂದನ್ನು ಇದೇ ವೇಳೆ ರಚಿಸಲಾಯಿತು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕನ್ನಡ ಸಂಘದ ಅಧ್ಯಕ್ಷರಾದ ಪಲ್ಲವಿಮಣಿ, ಪಾರ್ಥಸಾರಥಿ,ನಾಗಪ್ರಕಾಶ್, ಪುರಸಭೆ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ, ದೇವಾಲಯ ಇಒ ಮರಿರಾಜು, ಶ್ರೀನಿವಾಸಶೆಟ್ಟಿ, ಕಸಾಪ ಅಧ್ಯಕ್ಷ ಆರ್.ಅಶ್ವಥ್, ಕುರುಬರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ರಾಜಗೋಪಾಲ್, ಕೆ.ರಮೇಶ್, ಹೆಚ್.ಎಲ್.ಆನಂದ್, ಸುರೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.