ಉದ್ಯಮಿ ಕೊಲೆ: ಪತ್ನಿ ಸೇರಿ ಐವರ ಸೆರೆ
ಕ.ಪ್ರ. ವಾರ್ತೆ , ಬಂಗಾರಪೇಟೆ , ಜೂ.26
ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದ 24 ಗಂಟೆಯೊಳಗೆ ಮೃತನ ಪತ್ನಿ ಸೇರಿದಂತೆ ಐವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳವಾರ ಪಟ್ಟಣದ ಹೊರವಲಯದ ಕೆಸರನಹಳ್ಳಿ ಮತ್ತು ಅಜ್ಜಪ್ಪನಹಳ್ಳಿ ರಸ್ತೆ ಬದಿಯಲ್ಲಿ ಬೆಂಗಳೂರಿನ ಮಹದೇವಪುರದ ಎ.ನಾರಾಯಣಪುರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥನನ್ನು ಕೊಲೆ ಮಾಡಿ ನಂತರ ಮೃತದೇಹ ಗುರುತು ಸಿಗದಂತೆ ಪೆಟ್ರೋಲ್ ಹಾಕಿ ಸುಡಲಾಗಿದ್ದ ಶವ ಪತ್ತೆಯಾಗಿತ್ತು.
ಈ ಪ್ರಕರಣವನ್ನು ಭೇದಿಸಲು ಸಿಪಿಐ ವೆಂಕಟಾಚಲಪತಿ, ಪಿಎಸ್ಐಗಳಾದ ಶ್ರೀಧರ್, ರವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣ ನಡೆದ 24 ಗಂಟೆಯೊಳಗೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೀನಾ, ಕಿರಣ್, ಮುರಳಿ, ಬಾಬು ಮತ್ತು ಲೋಕೇಶ್ ಎಂದು ಗುರುತಿಸಲಾಗಿದೆ.
ಆರೋಪಿಗಳೆಲ್ಲರೂ ಬೆಂಗಳೂರು ನಿವಾಸಿಗಳಾಗಿದ್ದು, ಪ್ರಮುಖ ಆರೋಪಿ ಕಿರಣ್ ಮೃತ ಮಂಜುನಾಥನ ಮನೆಯಲ್ಲಿ ಬಾಡಿಗೆಗೆ ಇದ್ದು, ಐದು ವರ್ಷಗಳಿಂದ ಮೃತನ ಪತ್ನಿ ಮೀನಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರ ಅಕ್ರಮ ಸಂಬಂಧ ಮಂಜುನಾಥನಿಗೆ ತಿಳಿದು ಕಿರಣನನ್ನು ಮನೆ ಖಾಲಿ ಮಾಡುವಂತೆ ಸೂಚಿಸಿದ್ದೆ ಈ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸೋಮವಾರ ರಾತ್ರಿ ಎಲ್ಲಾ ಆರೋಪಿಗಳು ಸೇರಿ ಮಂಜುನಾಥನ ಮನೆಯಲ್ಲೆ ಚಾಕುವಿನಿಂದ ಇರಿದು ಕೊಲೆಗೈದು ಶವವನ್ನು ದಫನ್ ಮಾಡಲು ದಿಕ್ಕು ತೋಚದೆ ನಂತರ ಮೃತನ ಕಾರಿನಲ್ಲೇ ಶವ ಇಟ್ಟು ಇಡೀ ರಾತ್ರಿ ಸುತ್ತಾಡಿ ನಂತರ ಬಂಗಾರಪೇಟೆಗೆ ಬಂದು ಬೀಸಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಬಿಸಾಡಿ ನಂತರ ಶವದ ಮೇಲೆ ಪೆಟ್ರೋಲ್ ಹಾಕಿ ಸುಡಲಾಗಿತ್ತು.
ಶವ ಬಿಸಾಡಿ ನಂತರ ಇನೋವಾ ಕಾರನ್ನು ಬೆಂಗಳೂರಿನ ಕಾಡುಗೋಡಿ ಸೀಗೇಹಳ್ಳಿ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಸಾರ್ವನಿಕರು ಜಮಾಯಿಸಿದಾಗ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಕಾರಿನಲ್ಲಿ ಕೊಲೆ ಮಾಡಲು ಬಳಸಿದ್ದ ಚಾಕುಗಳು ಪತ್ತೆಯಾಗಿದ್ದವು. ಇಷ್ಟಾದರೂ ಮೃತನ ಪತ್ನಿ ಮೀನಾ ಮಾತ್ರ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡದೆ ಪತಿ ಬಗ್ಗೆ ಎಳ್ಳಷ್ಟು ಚಿಂತೆ ಮಾಡದೆ ಆರಾಮವಾಗಿದ್ದಳು. ಆದರೆ, ಮೃತನ ಸಹೋದರ ಅಣ್ಣ ಕಾಣೆಯಾಗಿರುವ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೃತ ಪತ್ನಿ ವರ್ತನೆ ಬಗ್ಗೆ ಅನುಮಾನಗೊಂಡು ಪೊಲೀಸರು ವಿಚಾರಣೆ ಕೈಗೊಂಡಾಗ ನಿಜಾಂಶ ಬಯಲಿಗೆ ಬಂತು ಎಂದು ಕೋಲಾರ ಹೆಚ್ಚುವರಿ ರಕ್ಷಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಪಟ್ಟಣ ಪೊಲೀಸರ ಈ ಸಾಧನೆಯನ್ನು ಸೆಂಟ್ರಲ್ ರೆಂಜ್ ಐಜಿಪಿ ಅಮರ್ಕುಮಾರ ಪಾಂಡೆ ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

