ಕಲುಷಿತ ಆಹಾರ ಸೇವನೆ, ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥ
ಕೆಜಿಎಫ್: ಕೆಜಿಎಫ್ನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ಪ್ರಾರ್ಥನೆ ಸಮಯದಲ್ಲಿ ಮೂರ್ಛೆ ಹೋಗಿ ಕೆಳಗೆ ಕುಸಿದು ಬಿದಿದ್ದು ಮತ್ತು ಇವರೊಂದಿಗೆ ಇತರೆ ಶಾಲಾ ಮಕ್ಕಳು ಅಸ್ವಸ್ಥರಾಗಿ, ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 260 ಮಕ್ಕಳಿದ್ದು ಬೆಳಗ್ಗೆ 8.30ಕ್ಕೆ ಪೊಂಗಲ್ ಉಪಹಾರವನ್ನು ಸೇವಿಸಿದ್ದಾರೆ. ನಂತರ ಶಾಲೆಗೆ ಹೋಗಲು ಪ್ರಾರ್ಥನೆಗೆ ಸಾಲಿನಲ್ಲಿ ನಿಂತಿದ್ದಾಗ ಕೆಲ ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ. ಇವರೊಂದಿಗೆ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಹಾಗೂ ಇತರೆ 6 ಮಕ್ಕಳು ಸುಸ್ತಾಗಿರುವುದಾಗಿ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಶಾಲಾ ಶಿಕ್ಷಕರು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿದ್ದು ಯಾವುದೇ ಪ್ರಾಣಪಾಯವಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳು ಬೆಳಗ್ಗೆ ಪೊಂಗಲ್ ಉಪಹಾರ ಸೇವಿಸಿದ್ದು ಜೀರ್ಣವಾಗದೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆಯಿಂದ ನಗರದಲ್ಲಿ ಕೆಲ ಕಾಲ ಭೀತಿಯ ವಾತಾವರಣ ಉಂಟಾಗಿತ್ತು. ಆಸ್ಪತ್ರೆಗೆ ಕೋಲಾರ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ನಾಗರಾಜ್, ಡಿವೈಎಸ್ಪಿ ಗುರುಮೂರ್ತಿ ಮತ್ತು ಮಾಜಿ ಶಾಸಕ ವೈ.ಸಂಪಂಗಿ ಭೇಟಿ ನೀಡಿ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಭೋಜನಾಲಯಕ್ಕೆ ಭೇಟಿ ನೀಡಿ ಅಡುಗೆ ಬಟ್ಟರುಗಳಾದ ವೆಂಕಟಲಕ್ಷ್ಮಮ್ಮ, ಸೀನಪ್ಪ, ಮತ್ತು ಭಾಗ್ಯಮ್ಮ ಅವರನ್ನು ವಿಚಾರಿಸಿ ತಿಂಡಿಯನ್ನು ಪರಿಶೀಲಿಸಿದರು. ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಟಿಸಿ.ವೆಂಕಟೇಶ್ ಮತ್ತು ಪಿಎಸ್ಐ ರಾಜಣ್ಣ ಮತ್ತಿತ್ತರರು ಹಾಜರಿದ್ದರು.
ಕಳೆದ ಎರಡು ದಿನಗಳ ಹಿಂದೆ ಶಾಲೆಯಲ್ಲಿ ಮಕ್ಕಳಿಗೆ ಊಟ, ತಿಂಡಿ, ರಗ್ಗುಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್ ಶಶಿಕಲಾ ಅವರು ಸರಿಯಾಗಿ ಒದಗಿಸುತ್ತಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳು ನಗರದ ಸೂರಜ್ಮುಲ್ ವೃತ್ತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ರಸ್ತೆತಡೆ ಪ್ರತಿಭಟನೆಗಳನ್ನು ನಡೆಸಿದ್ದರು.
ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಕೆ.ಜಿ.ಹಳ್ಳಿ ಗ್ರಾಮಸ್ಥರಿಂದ ಮನವಿ
ಟೇಕಲ್: ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಕೆ.ಜಿ.ಹಳ್ಳಿ ಗ್ರಾಮದಲ್ಲಿ ಸುಮಾರು 1 ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಲ್ಲಿ ಸ್ಥಳೀಯ ಗ್ರಾಪಂ ಆಗಲಿ, ತಾಪಂ ಆಗಲಿ ನೀರು ಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಸಮಸ್ಯೆ ನಿವಾರಿಸುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮದ ಹೃದಯಭಾಗದಲ್ಲಿರುವ ಕೊಳವೆ ಬಾವಿಯೊಂದರ ಅಂತರ್ಜಲ ಮಟ್ಟ ಕುಸಿದು ನೀರು ಖಾಲಿಯಾಯಿತು.
ಅಂದಿನಿಂದ ಇಂದಿನವರೆಗೂ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದ್ದು 8 ತಿಂಗಳಿನಿಂದ ಈಚೆಗೆ ಸಮಸ್ಯೆ ಉಲ್ಬಣಗೊಂಡಿದೆ. ಅದರಲ್ಲೂ ಖಾಸಗಿ ಟ್ಯಾಂಕರ್ನಿಂದ ನೀರು ಬೇಕೆಂದರೆ 750 ರಿಂದ 800 ತೆರಬೇಕು.
ಕೂಲಿ ಕೆಲಸ ಮಾಡುವ ಜನಕ್ಕೆ ಅರ್ಧದಷ್ಟು ಹಣ ನೀರಿಗೆ ವ್ಯಯಿಸುವುದರಿಂದ ಅಗತ್ಯ ವಸ್ತುಗಳ ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಗ್ರಾಮದಲ್ಲಿ ಜಿಪಂ ವತಿಯಿಂದ ಒಂದುವರೆ ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ದು ಅದಕ್ಕೆ ಪಂಪು ಮೋಟಾರ್ ಅಳವಡಿಸಲು ಕೂಡ ಗ್ರಾ.ಪಂ. ಮೀನಾಮೇಷ ಎಣಿಸುತ್ತಿದೆ ಎಂದು ಜನತೆ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ನಿವಾರಿಸಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

