'ಅಧಿಕಾರಿಗಳಿಂದ ದಲಿತರ ಹಣ ದುರುಪಯೋಗ'
ಕ.ಪ್ರ.ವಾರ್ತೆ ಕೋಲಾರ ಜೂ.30
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಹೆಚ್ಚಿರುವ ಕೋಲಾರ ಜಿಲ್ಲೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದರೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದಿರುವುದಕ್ಕೆ ಕೆಲ ಅಧಿಕಾರಿಗಳ ಧೋರಣೆಯೇ ಕಾರಣ ಎಂದು ಮಾಜಿ ಜವಳಿ ಸಚಿವ ಹಾಗೂ ಹಾಲಿ ಶಾಸಕ ಆರ್. ವರ್ತೂರ್ ಪ್ರಕಾಶ್ ಆರೋಪಿಸಿದರು.
ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ಭಾನುವಾರ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ದಲಿತರ ಅಭಿವೃದ್ಧಿಗಾಗಿ ಸರ್ಕಾರಗಳು ಸಾಕಷ್ಟು ಅನುದಾನ ನೀಡಿದ್ದರೂ ಕೆಲ ಅಧಿಕಾರಿಗಳು ಹಣವನ್ನು ಗುಳುಂ ಮಾಡಿರುವುದರಿಂದ ಹಾಸ್ಟೆಲ್ಗಳಲ್ಲಿ ನೆಲೆಸಿರುವ ಬಡ ದಲಿತ ವಿದ್ಯಾರ್ಥಿಗಳು ಹಾಗೂ ವಿವಿಧ ಯೋಜನೆಗಳಡಿ ಸವಲತ್ತು ಪಡೆಯಲು ಅರ್ಜಿ ಹಾಕಿರುವ ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಗದಂತಾಗಿದೆ ಎಂದು ಆರೋಪಿಸಿದರು.
ವಿವಿಧ ಇಲಾಖೆಯಲ್ಲಿ ಕೆಲ ದಲಿತ ಮುಖಂಡರು ತಮ್ಮ ಪ್ರಭಾವ ಬಳಸಿ ಬಡ ಫಲಾನುಭವಿಗಳನ್ನು ವಂಚಿಸುತ್ತಿರುವ ಹಲವಾರು ಪ್ರಕರಣಗಳು ತಮ್ಮ ಮುಂದಿದೆ. ಇವರಿಗೆ ಶೀಘ್ರದಲ್ಲೇ ತಕ್ಕ ಶಾಸ್ತಿ ಮಾಡುವುದಲ್ಲದೆ ವಿದ್ಯಾರ್ಥಿಗಳ ಹಿತ ಕಾಯುವ ಕೆಲಸವನ್ನು ಮಾಡುವುದಾಗಿ ಭರವಸೆ ನೀಡಿದರು.
ಪ್ರತಿ ಗ್ರಾಮದಲ್ಲೂ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಅವರನ್ನು ದೇವರಂತೆ ಪೂಜಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ದಲಿತ ಸಂಘಟನೆಗಳು ಸಮುದಾಯದಲ್ಲಿ ಅರಿವು ಮೂಡಿಸಬೇಕು. ದಲಿತ ವರ್ಗ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವಂತೆ ವರ್ತೂರ್ ಪ್ರಕಾಶ್ ಸಲಹೆ ಮಾಡಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಶೀಘ್ರವೇ ಕಲ್ಪಿಸುವ ಭರವಸೆಯಿತ್ತ ಅವರು, 2ನೇ ಬಾರಿ ಶಾಸಕನಾಗಲು ಸಹಕಾರ ನೀಡಿದ ದಲಿತ ವರ್ಗ ಮುಂದಿನ ದಿನಗಳಲ್ಲೂ ಕ್ಷೇತ್ರದ ಅಭಿವೃದ್ಧಿಗಾಗಿ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮಾತನಾಡಿ, ಅಹಿಂದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅಂಬೇಡ್ಕರ್ ಪರಿಶ್ರಮವನ್ನು ಎಂದೆಂದಿಗೂ ಮರೆಯುವಂತಿಲ್ಲ, ಈ ಮಹಾತ್ಮನ ಆದರ್ಶದಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದರು.
ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಅಂಬೇಡ್ಕರ್ ಹಾಕಿಕೊಟ್ಟ ಬುನಾದಿಗೆ ನಾವೆಲ್ಲರೂ ಋಣಿಗಳಾಗಿರಬೇಕು, ಒಗ್ಗಟ್ಟಿನಿಂದ ಏನೂ ಬೇಕಾದರೂ ಸಾಧಿಸಬಹುದಾಗಿದ್ದು ದಲಿತರು ಶಿಕ್ಷಣದ ಮೂಲಕ ಹೆಚ್ಚಿನ ಸ್ಥಾನ-ಮಾನ ಪಡೆಯಬೇಕೆಂದು ಸಲಹೆ ನೀಡಿದರು.
ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ವೆಂಕಟೇಶಮೂರ್ತಿ, ತಾಪಂ ಉಪಾಧ್ಯಕ್ಷೆ ಸರಸ್ವತಿ ಮುನಿಕೃಷ್ಣ, ಡಾ. ಬಿ.ಆರ್. ಅಂಬೇಡ್ಕರ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಚಿ.ನಾ. ರಾಮು, ಬೆಗ್ಲಿ ಪ್ರಕಾಶ್, ರಾಜಣ್ಣ, ರಘುರಾಂ, ಕಾರ್ಯಕ್ರಮದ ಆಯೋಜಕ ಪ್ರಸನ್ನ, ಆಟೋ ನಾರಾಯಣಸ್ವಾಮಿ, ಮುನಿರಾಜ್, ಮೆಕಾನಿಕ್ ಶ್ರೀನಿವಾಸ್, ಕಲ್ವಮಂಜಲಿ ಶಿವಣ್ಣ, ಕೆಂದಟ್ಟಿ ಶಂಕರ್, ನಗರಸಭೆ ಸದಸ್ಯರಾದ ಸೋಮಶೇಖರ್, ಮಂಜು ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

