ಕೋಲಾರ

ಶಾಸಕಿ ರಾಮಕ್ಕ ಬಂಧನಕ್ಕೆ ಆಗ್ರಹ

Published On :

ಕೆಜಿಎಫ್:  ಜಮೀನು ಖರೀದಿಗೆ ನಕಲಿ ದಾಖಲೆ ಸೃಷ್ಟಿಸಿದ ಬಗ್ಗೆ ದೂರು ದಾಖಲಾದ ಹಿನ್ನೆಲೆ ಶಾಸಕಿ ವೈ.ರಾಮಕ್ಕ ಅವರನ್ನು ಕೂಡಲೇ ಬಂಧಿಸಬೇಕು. ಅವರು ತಮ್ಮ ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮಾಜಿ ಶಾಸಕರಾದ ಎಂ.ಭಕ್ತವತ್ಸಲಂ ಹಾಗೂ ಎಸ್.ರಾಜೇಂದ್ರನ್ ಒತ್ತಾಯಿಸಿ ಬುಧವಾರ ಕೆಜಿಎಫ್ ಬಂದ್‌ಗೆ ಕರೆ ನೀಡಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಎಲ್ಲಾ ರಾಜಕೀಯ ಸರ್ವಪಕ್ಷಗಳ ಮುಖಂಡರ ಸಭೆಯ ನೇತೃತ್ವ ವಹಿಸಿದ್ದ ಆರ್‌ಪಿಐ ಪಕ್ಷದ ರಾಷ್ಟೀಯ ಅಧ್ಯಕ್ಷ ಮತ್ತು ಕೆಜಿಎಫ್‌ನ ಮಾಜಿ ಶಾಸಕ ಎಸ್.ರಾಜೇಂದ್ರನ್ ಮಾತನಾಡಿ,
ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಅವರು ನಕಲಿ ದಾಖಲೆ ಸೃಷ್ಟಿಸಿದ ಜಮೀನು ಖರೀದಿಸಿದ ಆರೋಪಕ್ಕೆ ಸಂಬಂಧಿಸಿ ಕೆಜಿಎಫ್‌ನ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಬೇತಮಂಗಲ ಪೊಲೀಸರು ಶಾಸಕಿ ವೈ.ರಾಮಕ್ಕ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದರು.
ಅಡಂಪಲ್ಲಿ ನಿವಾಸಿ ಬೀರಪ್ಪ ಎಂಬವರಿಗೆ ಸೇರಿದ ಕಗ್ಗಿನಹಳ್ಳಿ ಪ್ರದೇಶದಲ್ಲಿರುವ 1.23 ಎಕರೆ ಜಮೀನನ್ನು ನಾಗಶೆಟ್ಟಿಹಳ್ಳಿ ನಿವಾಸಿ ಶ್ರೀರಾಮಪ್ಪ, ಶ್ರೀರಾಮರೆಡ್ಡಿ, ರವಿಕುಮಾರ್, ವೆಂಕಟಮ್ಮ ಹಾಗೂ ಕೊತ್ತೂರು ನಾರಾಯಣಪ್ಪ ಅವರು ನಕಲಿ ದಾಖಲೆ ಸೃಷ್ಟಿಸಿ ನೋಂದಾಯಿಸಿದ್ದ ಜಮೀನನ್ನು ಶಾಸಕಿ ರಾಮಕ್ಕ ಖರೀದಿಸಿ ಈ  ಆರೋಪಕ್ಕೆ ಈಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದರು.
ಶಾಸಕಿ ವೈ.ರಾಮಕ್ಕ ಸೇರಿದಂತೆ ಇತರೆ 5 ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಬೇತಮಂಗಲ ಪಿಎಸ್‌ಐ ಜಗದೀಶ್ ಶಾಸಕಿ ರಾಮಕ್ಕ ಮತ್ತಿತರರನ್ನು ಇನ್ನೂ ಏಕೆ ಬಂಧಿಸಿಲ್ಲ. ಕಾನೂನು ರೀತ್ಯಾ ಕ್ರಮ ಏಕೆ ಕೈ ಗೊಂಡಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೇವಲ 1 ಎಕರೆ ಜಮೀನಿನ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಲ್ಲಾ ರಾಜಕೀಯ ಸರ್ವ ಪಕ್ಷಗಳ ಮುಖಂಡರು, ಕಾನೂನು ಎಲ್ಲರಿಗೂ ಎಂದೆ. ಆದ್ದರಿಂದ ಶಾಸಕಿ ರಾಮಕ್ಕ ಅವರನ್ನು ಕೂಡಲೇ ಬಂಧಿಸಬೇಕು. ತಮ್ಮ ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಕೆಜಿಎಫ್ ಬಂದ್‌ಗೆ ಕರೆ ನೀಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಂ.ಭಕ್ತವತ್ಸಲಂ ಮಾತನಾಡಿ, ಅಡಂಪಲ್ಲಿ ಗ್ರಾಮ ವ್ಯಾಪ್ತಿಯ ಕಗ್ಗಿನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ವೈ.ಸಂಪಂಗಿ 40 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲು ಈ ಜಮೀನಿನ ಸುತ್ತಮುತ್ತಲಿನಲ್ಲಿರುವ 15 ಎಕರೆ ಜಮೀನನ್ನು ತಮ್ಮ ತಾಯಿ ಶಾಸಕಿ ವೈ.ರಾಮಕ್ಕ ಅವರ ಹೆಸರಿನಲ್ಲಿ ಖರೀದಿಸಿದ್ದಾರೆ.  ಈ ಜಮೀನಿನ ಮೇಲೆ ಸ್ಥಳೀಯ ಬ್ಯಾಂಕ್‌ನಿಂದ 1.60 ಕೋಟಿ ಸಾಲ ಪಡೆದಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು.
ಮಾಜಿ ಶಾಸಕ ವೈ.ಸಂಪಂಗಿ 5 ವರ್ಷಗಳ ಅವಧಿಯಲ್ಲಿ ಬಿಡುಗಡೆಯಾದ 5 ಕೋಟಿ ಶಾಸಕರ ಅನುದಾನದಲ್ಲಿ ಕೆಜಿಎಫ್ ನಗರದಲ್ಲಿ 10 ಲಕ್ಷ ಅಭಿವೃದ್ಧಿ ಕೆಲಸ ಸಹ ಮಾಡಿಲ್ಲ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಕಾರ್ತಿಕ್ ಮಾತನಾಡಿ, ಮಾಜಿ ಶಾಸಕ ವೈ.ಸಂಪಂಗಿ ಲಂಚ ಪ್ರಕರಣಕ್ಕೆ ಸಿಲುಕಿ ಕೆಜಿಎಫ್‌ಗೆ ಕೆಟ್ಟ ಹೆಸರನ್ನು ತಂದುಕೊಟ್ಟಿದ್ದರು. ಅದೇ ರೀತಿ ಅವರ ತಾಯಿ ಶಾಸಕಿ ವೈ.ರಾಮಕ್ಕ ನಕಲಿ ದಾಖಲೆ ಸೃಷ್ಟಿಸಿದ್ದ ಜಮೀನನ್ನು ಖರೀದಿಸಿದ ಆರೋಪದಲ್ಲಿ ಸಿಲುಕಿದ್ದರಿಂದ ಕೆಜಿಎಫ್‌ಗೆ ಕಪ್ಪು ಚುಕ್ಕೆಯಾಗಿದೆ ಎಂದರು.
ಸಭೆಯಲ್ಲಿ ಎಐಎಡಿಎಂಕೆ ಪಕ್ಷದ ಮುಖಂಡ ಎ.ಅನ್ಬು, ಡಿಎಂಕೆ ಪಕ್ಷದ ಮುಖಂಡ ಕರುಣಾನಿಧಿ, ಸಿಪಿಐ(ಎಂ) ಪಶ್ರದ ಮುಖಂಡ ಅರ್ಜುನನ್, ನಗರಸಭೆ ಮಾಜಿ ಅಧ್ಯಕ್ಷ ಪಿ.ದಯಾನಂದ್, ಆರ್‌ಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಶಾಂತಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್‌ಗೌಡ, ಮಾಜಿ ನಗರಸಭೆ ಸದಸ್ಯೆ ತಂಗತಾಯಿ, ಸಮಾಜ ಸೇವಕರಾದ ವಿ.ಮುನಿಸ್ವಾಮಿ ಸೇರಿದಂತೆ ಇತರೇ ಪಕ್ಷಗಳ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.