ಕೋಲಾರ: ಸ್ವಾತಂತ್ರ್ಯ ಹೋರಾಟಗಾರ, ಪ್ರತಿಭಾವಂತ ಸಂಸದೀಯ ಪಟು ದಿವಂಗತ ಕೆ. ಪಟ್ಟಾಭಿರಾಮನ್ ಈಗ ನಮ್ಮ ನಡುವೆ ಇಲ್ಲದಿದ್ದರೂ ಅವರಲ್ಲಿದ್ದ ಸ್ವದೇಶಿ ಪ್ರೇಮ, ರಾಷ್ಟ್ರ ಭಕ್ತಿ, ಬಡವರ ಬಗ್ಗೆ ಇದ್ದ ಕಾಳಜಿ ಹಾಗೂ ವಿಧಾನಸಭೆಯಲ್ಲಿ ಜನತೆ ಪರವಾಗಿ ಮಂಡಿಸಿರುವ ವಿಷಯಗಳು ಅವಿಸ್ಮರಣೀಯವಾಗಿದೆ.
ಪಟ್ಟಾಭಿರಾಮನ್ ಬಣಜಿಗ ಕೋಮಿನ ಬಡ ಕುಟುಂಬದಲ್ಲಿ ಹುಟ್ಟಿದ್ದು 1901ರಲ್ಲಿ. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಬಂಧುಗಳು ಮತ್ತು ಅಪ್ತರ ಆಶ್ರಯದಲ್ಲಿ ಬೆಳೆದ ಇವರು ಕೋಲಾರದಲ್ಲಿ ಜನಿಸಿದರೂ ಬೆಂಗಳೂರಿನಲ್ಲಿ ಬಾಲ್ಯದ ದಿನಗಳನ್ನು ಕಳೆದರು.
ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದರ ಜತೆಗೆ ನಾಯಕತ್ವದ ಗುಣಗಳನ್ನು ಪಡೆದುಕೊಂಡರಲ್ಲದೆ ತಮ್ಮಲ್ಲಿನ ಪಾಂಡಿತ್ಯದ ಮೂಲಕ ರಾಜ್ಯದ ಗಮನ ಸೆಳೆದಿದ್ದರು. 1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1923ರಲ್ಲಿ ಪದವಿ ಮುಗಿದ ಬಳಿಕ ಅದೇ ವರ್ಷ ಭದ್ರಾವತಿಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಪಟ್ಟಾಭಿರಾಮನ್, ಜನತೆಯ ಕಷ್ಟ, ಸುಖಗಳಿಗೆ ಸ್ಪಂದಿಸಬೇಕೆಂಬ ಸಾಮಾಜಿಕ ತುಡಿತದಿಂದಾಗಿ ಶಿಕ್ಷಕ ವೃತ್ತಿಗೆ ಗುಡ್‌ಬೈ ಹೇಳಿ ಆಗಿನ ಮದ್ರಾಸಿನಲ್ಲಿ ಕಾನೂನು ಪದವಿ ಪಡೆದು ಕೋಲಾರಕ್ಕೆ ವಾಪಸ್ ಬಂದು ವಕೀಲಿ ವೃತ್ತಿ ಆರಂಭಿಸುವ ಮೂಲಕ ಸಾರ್ವಜನಿಕರ ಅಚ್ಚುಮೆಚ್ಚಿನ ನ್ಯಾಯವಾದಿಯಾಗಿ ಗುರುತಿಸಿಕೊಂಡರು.
ಪಕ್ಷೇತರರಾಗಿ ಸ್ಪರ್ಧೆ: ಇದೇ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದರು. ಕಾಂಗ್ರೆಸ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಪಟ್ಟಾಭಿರಾಮನ್ 1947ರವರೆಗೆ ದೇಶಕ್ಕಾಗಿ ನಡೆದ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಂತರ ಕಾಂಗ್ರೆಸ್‌ನೊಂದಿಗೆ ಭಿನ್ನಮತ ಉಂಟಾಗಿದ್ದರಿಂದ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆದು 1952ರಲ್ಲಿ ಕೋಲಾರದಿಂದ ವಿಧಾನಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ನೇತೃತ್ವದ ಸರ್ಕಾರದಲ್ಲಿ ಇವರಿಗೆ ರಾಜ್ಯ ಶಿಕ್ಷಣ ವ್ಯಸ್ಥೆ ಸುಧಾರಣಾ ಸಲಹಾ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಅತ್ಯಂತ ಪ್ರತಿಭಾವಂತ ಸಂಸದೀಯಪಟುವಾಗಿದ್ದ ಇವರು ನಿಜಲಿಂಗಪ್ಪ, ವೀರಣ್ಣಗೌಡ, ಟಿ. ಚನ್ನಯ್ಯನವರೊಂದಿಗೆ ಕೆಲಸ ಮಾಡಿದ್ದಾರೆ.
ಲಾಬಿ ನಡೆಸಲಿಲ್ಲ: ಕೆ.ಸಿ. ರೆಡ್ಡಿ ನಂತರ ಪಟ್ಟಾಭಿರಾಮನ್ ಅವರೇ ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಯಿತ್ತಾದರೂ ಅಧಿಕಾರಕ್ಕೆ ಆಸೆ ಪಡದಿದ್ದರಿಂದ ಅವಕಾಶ ಕೈತಪ್ಪಿತು. ಆ ಕಾಲದಲ್ಲೂ ಜಾತಿ ವ್ಯವಸ್ಥೆ ಇದ್ದುದ್ದರಿಂದ ಪದವಿಗಾಗಿ ಲಾಬಿ ನಡೆಸಲಿಲ್ಲ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿನ್ನೆಲೆಯಲ್ಲಿ ಇವರಿಗೆ ಅನೇಕ ಪುರಸ್ಕಾರಗಳು ಸಿಕ್ಕಿತ್ತಾದರೂ ಅವುಗಳನ್ನು ನಯವಾಗಿಯೇ ನಿರಾಕರಿಸಿದರು. ಅಧಿಕಾರಕ್ಕಾಗಿ ಆಸೆ ಪಟ್ಟಿದ್ದರೆ ಸುಪ್ರೀಂ ಕೋರ್ಟ್ ನ್ಯಾಯಧೀಶರಾಗಿ, ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ, ಮೈಸೂರಿನ ರಾಜ್ಯಪಾಲರಾಗುವ ಅವಕಾಶಗಳಿತ್ತಾದರೂ ಅಧಿಕಾರಕ್ಕೆ ಆಸೆ ಪಡಲಿಲ್ಲ.
ಸರ್ವೋದಯ ಚಳವಳಿ: ಗಾಂಧೀಜಿಯವರ ಸರ್ವೋದಯ ತತ್ವಗಳಡಿ ಪಕ್ಷ ಕಟ್ಟಲು ನಡೆಸಿದ ಪ್ರಯತ್ನ ವಿಫಲವಾದ ಬಳಿಕ ಪಟ್ಟಾಭಿರಾಮನ್ ರಾಜಕಾರಣದಿಂದ ದೂರ ಉಳಿದರಾದರೂ ಸರ್ವೋದಯ ಚಳವಳಿ ಇವರನ್ನು ಬಿಡಲಿಲ್ಲ.
ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಾಭಿರಾಮನ್ ರೈತರು, ಬಡವರ ಪರವಾಗಿ ಮಾತನಾಡಿ ಸರ್ಕಾರದ ಕಣ್ಣು ತೆರೆಸುತ್ತಿದ್ದರು. ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು. ಮೌಲ್ಯಗಳನ್ನು ಮೈಗೂಡಿಸಿಕೊಂಡು ಕೋಲಾರ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ. 1987ರಲ್ಲಿ ವಿಧಿವಶರಾಗಿದ್ದರೂ ಪಟ್ಟಾಭಿರಾಮನ್ ಇಂದಿಗೂ ಜನತೆಯಲ್ಲಿ ನೆನಪಾಗಿ ಉಳಿದಿರುವುದಕ್ಕೆ ಇವರಲಿದ್ದ ಶಿಸ್ತು, ಕರ್ತವ್ಯ ನಿಷ್ಠೆ, ನಿಸ್ವಾರ್ಥತೆಯ ಗುಣ. ಆದರೆ, ಕೋಲಾರ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಕಾಣುತ್ತಿರುವ ಕಲುಷಿತ ರಾಜಕಾರಣ, ನಾಯಕತ್ವದ ಕೊರತೆ, ಜಾತಿಯ ಅಟ್ಟಹಾಸ, ಯುವ ಜನತೆಯನ್ನು ದಾರಿ ತಪ್ಪಿಸುತ್ತಿರುವ ಸ್ವಾರ್ಥ ರಾಜಕಾರಣದಿಂದಾಗಿ ಪಟ್ಟಾಭಿರಾಮನ್ ಅವರಂತಹ ಆದರ್ಶ ವ್ಯಕ್ತಿಗಳ ಆತ್ಮಗಳಿಗೆ ಚಿರ ಶಾಂತಿ ಸಿಗದಂತಾಗಿದೆ.
ಅಧಿಕಾರಕ್ಕಾಗಿ ಹಂಬಲಿಸುತ್ತಿರುವ ಹಾಗೂ ಚುನಾವಣೆಯಲ್ಲಿ ಗೆಲ್ಲುವುದೇ ಮೂಲ ಉದ್ದೇಶವೆಂದು ಭಾವಿಸಿರುವ ರಾಜಕಾರಣಿಗಳು ಪಟ್ಟಾಭಿರಾಮನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ದ್ರೋಹ ಎಸಗಿದಂತಾಗುತ್ತದೆ.