ಶಿಡ್ಲಘಟ್ಟ: ಅಡುಗೆ ಅನಿಲದ ಸೋರಿಕೆಯಿಂದ ಸಿಲಿಂಡರ್ ಸ್ಫೋಟಿಸಿ ಐವರು ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಅನಿಲ್(11), ಆಶಾ (7), ಭಾನುಪ್ರಸಾದ್(7), ನೂತನ್(5), ಶಿಲ್ಪ(4) ಗಾಯಾಳುಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ರಂಗನಾಥ್ ಬಿನ್ ನರಸಿಂಹಾಚಾರಿ ಎಂಬುವವರ ಮನೆಯಲ್ಲಿ ಅವರ ಪತ್ನಿ ಪುಷ್ಪಾ ಎಂಬುವವರು ಅಡುಗೆ ಮಾಡಲು ಭರ್ತಿಯಾಗಿದ್ದ ಅನಿಲ ಸಿಲಿಂಡರ್ ಅಳವಡಿಕೆ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿದೆ. ಆ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸಿಡಿದಿದ್ದರಿಂದ ಮನೆಯ ಚಾವಣಿ ಕುಸಿದು ಬಿದ್ದಿದೆ. ಮನೆ ಸಂಪೂರ್ಣವಾಗಿ ಜಖಂಗೊಂಡು ನೆಲಕಚ್ಚಿದೆ. ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದ 5 ಜನ ಮಕ್ಕಳು ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾರಾದ ಪುಷ್ಪ: ತುಮ್ಮನಹಳ್ಳಿ ಗ್ರಾಮದಲ್ಲಿ ಅಡಿಗೆ ಅನಿಲ ಸೋರಿಕೆಯಿಂದ ಚಿಂತಾಕ್ರಾಂತವಾಗಿದ್ದ ಅರ್ಚಕ ರಂಗನಾಥ್ ಪತ್ನಿ ಪುಷ್ಪ ಗಾಬರಿಗೊಂಡಿದ್ದು ನೆರೆಹೊರೆಯವರು ತಕ್ಷಣ ಆಕೆಯನ್ನು ಮನೆಯಿಂದ ಹೊರ ಕರೆದುಕೊಂಡು ಬಂದಿದ್ದಾರೆ. ನಂತರ ಸಿಲಿಂಡರ್ ಸ್ಫೋಟಿಸಿದ್ದು ಪುಷ್ಪ ಸಾವಿನ ದವಡೆಯಿಂದ ಪಾರಾಗಿದ್ದಾರೆ. ರಂಗನಾಥ್ ಅವರ ಮನೆ ನೆಲಕಚ್ಚುವುದರ ಜತೆಗೆ ಅಕ್ಕಪಕ್ಕದ ಸಂಬಂಧಿಕರ ಮನೆಗಳು ಸಹ ಬಿರುಕು ಬಿಟ್ಟಿದ್ದು ಅಡುಗೆ ಅನಿಲ ವಿತರಕರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಬ್ ಇನ್ಸೆಪೆಕ್ಟರ್ ಹನುಮಂತಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.