ಮಾಲೂರು: ಬೆಂಗಳೂರಿನ ಕೊಳಚೆ ನೀರನ್ನು ಪಿನಾಕಿನಿ ನದಿಯ ನೀರೆಂದು ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ತಕ್ಷಣವೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವಾಸ್ತವ ಸಂಗತಿಯನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಮುಗಳೂರು ಕಾಲುವೆ ನೀರು ಹೋರಾಟ ಸಮಿತಿ ಸಂಚಾಲಕ ತ್ಯಾವನಹಳ್ಳಿ ಡಾ.ಗೋಪಾಲ್ ಗೌಡ ಮನವಿ ಮಾಡಿದ್ದಾರೆ. ಅವರು ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಅ ನೀರನ್ನು ಮಾಲೂರಿನ 24 ಹಾಗೂ ಬಂಗಾರಪೇಟೆಯ 4 ಕೆರೆಗಳಿಗೆ ಹರಿಸುವ 70 ಕೋಟಿ ರು. ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಬರ ಪ್ರದೇಶವಾಗುತ್ತಿರುವ ಮಾಲೂರು ತಾಲೂಕಿನಲ್ಲಿ ಒಯಸಿಸ್ ಸಿಕ್ಕಿದಂತೆ ಆಗಿತ್ತು.
ಆದರೆ ಸದಾ ಕರ್ನಾಟಕದ ಕೇಡುಕನ್ನೇ ಬಯಸುವ ಜಯಲಲಿತ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿತಪ್ಪು ದಾರಿಗೆ ಎಳೆಯುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಕೇಂದ್ರಕ್ಕೆ ವಾಸ್ತವ ತಿಳಿಸುವ ಅಗತ್ಯ ಇದೆ ಎಂದರು. ಪಿನಾಕಿನಿ ನದಿಗೆ ಬಿಡದಂತೆ ಬೇರೆ ಕಾಲುವೆ ನಿರ್ಮಿಸಿ ನೀರನ್ನು ಹರಿಸಬೇಕು ಎಂದೂ ಮನವಿ ಮಾಡಿದ್ದಾರೆ. ಕರವೇ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಶ್ರೀನಿವಾಸ್ ಇತರರು ಈ ಸಂದರ್ಭದಲ್ಲಿ ಇದ್ದರು.