ಕೋಲಾರ

8ಕ್ಕೆ ಕೋಲಾರ-ಚಿಕ್ಕಬಳ್ಳಾಪುರ ರೈಲು ಸಂಚಾರ ಪುನರಾರಂಭ

Published On :

ಕ.ಪ್ರ.ವಾರ್ತೆ   ಕೋಲಾರ   ನ.5
ಇದೇ ನವೆಂಬರ್ 8 ರಂದು ಕೋಲಾರ-ಚಿಕ್ಕಬಳ್ಳಾಪುರ ನಡುವೆ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಪ್ರಕಟಿಸಿದರು.
ನ್ಯಾರೋಗೇಜ್ ರೈಲು ಮಾರ್ಗದಿಂದ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಪ್ರಯೋಜನವಾಗುವುದಿಲ್ಲವೆಂದು ರೈಲು ಸಂಚಾರ ನಿಲ್ಲಿಸಲಾಗಿತ್ತು. ಆದರೆ, ರೈಲು ಹೋರಾಟ ಸಮಿತಿಯ ಒತ್ತಾಸೆ ಹಾಗೂ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ನ್ಯಾರೋಗೇಜ್ ರೈಲು ಮಾರ್ಗವನ್ನು ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸಲಾಗಿದ್ದು ನ.8 ರಿಂದ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನಮ್ಮ ರಾಜ್ಯದವರೇ ಆಗಿರುವ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ನ.8 ರಂದು ಬೆಳಿಗ್ಗೆ 10.30ಕ್ಕೆ ಚಿಕ್ಕಬಳ್ಳಾಪುರದಲ್ಲಿ ರೈಲು ಸಂಚಾಲಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಕೋಲಾರದಲ್ಲಿ ನವೀಕರಣಗೊಂಡಿರುವ ರೈಲು ನಿಲ್ದಾಣ ಮತ್ತು ನೂತನ ಕಚೇರಿಯನ್ನು ಉದ್ಘಾಟಿಸಿ ನಂತರ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರೆಂದು ಹೇಳಿದರು.
450 ಕೋಟಿ ರು.ವೆಚ್ಚ:  ನ್ಯಾರೋಗೇಜ್ ರೈಲಿನಿಂದ ಆದಾಯ ಇಲ್ಲವೆಂಬ ಕಾರಣದಿಂದ ನಿಲ್ಲಿಸಲಾಗಿದ್ದ ರೈಲು ಸಂಚಾರವನ್ನು ಪುನರಾರಂಭಿಸಲು ರೇಲ್ವೆ ಇಲಾಖೆಯ ನಿವೃತ್ತ ನೌಕರ ಮುನಿಸ್ವಾಮಿ ಸೇರಿದಂತೆ ಅನೇಕರು ನಿರಂತರವಾಗಿ ಹೋರಾಟಗಳನ್ನು ನಡೆಸಿದ್ದರು. ತಾವು ಮತ್ತು ಕೃಷ್ಣರಾವ್ ಅವರುಗಳು ರೇಲ್ವೆ ಸಚಿವರಾಗಿದ್ದ ಜಾಫರ್ಷ್ರೀಪ್ಮೇಲೆ ಒತ್ತಡ ತಂದು ಚಿಕ್ಕಬಳ್ಳಾಪುರ-ಕೋಲಾರ ರೈಲು ಸಂಚಾರ ಆರಂಭಕ್ಕೆ ಮತ್ತು ನ್ಯಾರೋಗೇಜಜ್ರೈಲು ಮಾರ್ಗವನ್ನು ಬ್ರಾಡ್ಗೇಜ್ ಮಾರ್ಗವನ್ನಾಗಿ ಪರಿವರ್ತಿಸಲು ಸಂಸತ್ನಲ್ಲಿ ಒತ್ತಾಯ ತಂದು ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿದ್ದರಿಂದ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ ಎಂದು ನೆನಪು ಮಾಡಿದರು.
ಲಾಲೂ ಪ್ರಸಾದ್ ಯಾದವ್ ಅವರು ರೇಲ್ವೆ ಸಚಿವರಾಗಿದ್ದಾಗಲೂ ಬೇಗನೆ ರೈಲು ಮಾರ್ಗಕ್ಕೆ ಚಾಲನೆ ನೀಡುವಂತೆ ನಾನು ಮನವಿ ಮಾಡಿದ್ದೆ. ರೈಲು ಮಾರ್ಗಕ್ಕೆ 99 ಕೋಟಿ ರು.ಮಂಜೂರು ಮಾಡಲು ಒಪ್ಪಿಗೆ ಸಿಕ್ಕಿತ್ತು. ಆದರೆ ಅಧಿಕಾರಿಗಳು ಯೋಜನೆಗೆ ಅಡ್ಡಗಾಲು ಹಾಕಿದ್ದರು. ತಾವು ಯುಪಿಎ ಸರ್ಕಾರದಲ್ಲಿ ರೇಲ್ವೆ ಸಹಾಯಕ ಸಚಿವರಾದ ಬಳಿಕ ಮತ್ತೊಬ್ಬ ರೇಲ್ವೆ ಸಚಿವ ಬಾಲು ಅವರೊಂದಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದು ವಿವರಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಬ್ರಾಡ್ಗೇಜ್ ರೈಲು ಮಾರ್ಗ, ರೈಲು ನಿಲ್ದಾಣ ಹಾಗೂ ಸೇತುವೆಗಳ ನಿರ್ಮಾಣಕ್ಕೆ 400 ರಿಂದ 450 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಬಹುತೇಕ ಕಾಮಗಾರಿಗಳು ಮುಕ್ತಾಯಗೊಂಡಿದೆ. ಬಂಗಾರಪೇಟೆ ತಾಲೂಕಿನ ಹುದುಕೂಳ, ಚಿನ್ನಕೋಟೆಯಲ್ಲಿ ರೈಲು ನಿಲ್ದಾಣ ನಿರ್ಮಾಣಕ್ಕೆ ಹಾಗೂ ಕೋಲಾರ ಅಂತರಗಂಗೆ ರಸ್ತೆಯಲ್ಲಿ ರೈಲು ನಿಲುಗಡೆಗೆ ಅವಕಾಶ ಕೋರಲಾಗಿದ್ದು ನ.8ರಂದು ಈ ಸಂಬಂಧ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಆಶಾದಾಯಕ ಹಾಗೂ ಜನಪರವಾದ ನಿಲುವು ಪ್ರಕಟಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಸಾಧನೆಯ ವಿವರ: ಗುಣಮಟ್ಟದ ಕಾಮಗಾರಿ ನಡೆದಿದೆ, ಬೆಂಗಳೂರು-ಚನ್ನೈ ನಡುವಿನ ರೈಲು ಮಾರ್ಗಕ್ಕೆ ಅನುಗುಣವಾಗಿ ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗವನ್ನು ನಿರ್ಮಿಸಲಾಗಿದೆ. ಕಡಪದಿಂದ ಬಂಗಾರಪೇಟೆವರೆಗೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಗುತ್ತಿರುವುದರಿಂದ ಸಧ್ಯಕ್ಕೆ ಕಡಪದಿಂದ ಮದನಪಲ್ಲಿವರೆಗೆ ರೈಲು ಮಾರ್ಗದ ಕಾರ್ಯ ಆರಂಭಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಮುಂದುವರಿಯುತ್ತದೆ ಎಂದು ತಿಳಿಸಿದರು.
ಚಿತ್ತೂರು ರೈಲು ಮಾರ್ಗಕ್ಕೆ ಸರ್ವೆ ಕಾರ್ಯ ಮುಗಿದಿದೆ, ಶ್ರೀನಿವಾಸಪುರ-ಮದನಪಲ್ಲಿ ರೈಲು ಮಾರ್ಗದ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಕೋಲಾರ-ವೈಟ್ಫೀಲ್ಡ್ ನಡುವೆ ರೈಲು ಮಾರ್ಗಕ್ಕೆ ಭೂಸ್ವಾಧೀನ ಆಗಬೇಕಾಗಿದೆ. ಈ ಹಿಂದಿನ ಸರ್ಕಾರ ರೇಲ್ವೆ ಯೋಜನೆಗಳಿಗೆ ಸಾಕಷ್ಟು ಸಹಕಾರ ನೀಡಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಆಸಕ್ತಿ ವಹಿಸಿ ಕೋಲಾರದಲ್ಲಿ ರೇಲ್ವೆ ಕೋಚ್ ಕಾರ್ಖಾನೆ ನಿರ್ಮಾಣಕ್ಕೆ ಬೇಕಾದ ಭೂಮಿ ಹಾಗೂ ಹಣಕಾಸಿನ ನೆರವು ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದಾರೆಂದು ಹೇಳಿದರು.
ಕೆಜಿಎಫ್ನಿಂದ ಕುಪ್ಪಂಗೆ ನೇರ ರೈಲು ಸಂಚಾರಕ್ಕೆ ಮಂಜೂರಾತಿ ಸಿಕ್ಕಿದ್ದು ಭೂ ಸ್ವಾಧೀನ ಕಾರ್ಯ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ, ಕೋಲಾರ, ಚಿಕ್ಕಬಳ್ಳಾಪುರ ರೈಲು ಸಂಚಾರ ಆರಂಭದಿಂದ ರೈತರಿಗೆ ಮತ್ತು ಸರಕು ಸಾಗಾಣೆದಾರರಿಗೆ ಅನುಕೂಲವಾಗುತ್ತದೆ, ಸಾರ್ವಜನಿಕರು ಸಹ ಕಡಿಮೆ ದರದಲ್ಲಿ ಪ್ರಯಾಣ ಮಾಡಲು ಸಹಾಯವಾಗುತ್ತದೆ ಎಂದರು.
ನ.8 ರ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೈಲು ಸಂಚಾರಕ್ಕೆ ಸಾಕ್ಷಿಯಾಗಬೇಕು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದರು.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸಚಿವ ನಿಸಾರ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಮುಖಂಡರಾದ ಪಾರ್ಥಸಾರಥಿ, ಚಂದ್ರಾರೆಡ್ಡಿ, ಗೋಪಾಲಗೌಡ, ವೆಂಕಟಪತಪ್ಪ, ಕುಮಾರ್, ಜಯದೇವ, ಊರುಬಾಗಿಲು ಶ್ರೀನಿವಾಸ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.