ಕೋಲಾರ

ಬಿಇಒ ಕಚೇರಿಯಲ್ಲಿ ಎಸ್ಸಾರ್ಗಳೇ ಮಾಯ!?

Published On :


ಕನ್ನಡಪ್ರಭ ವಾರ್ತೆ   ಕೋಲಾರ   ನ.5
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ ಸೇವಾ ಪುಸ್ತಕಗಳು(ಎಸ್.ಆರ್) ಮಂಗ ಮಾಯವಾಗಿರುವುದರಿಂದ ಸೇವಾ ಸೌಲಭ್ಯಕ್ಕಾಗಿ ಶಿಕ್ಷಕರು ಪರದಾಡುವಂತಾಗಿದೆ.
ಜಿಲ್ಲೆಯ ಇನ್ನಿತರ ತಾಲೂಕುಗಳಲ್ಲಿ ಶಿಕ್ಷಕರ ಸೇವಾ ಪುಸ್ತಕಗಳು(ಎಸ್.ಆರ್) ಜೋಪಾನವಾಗಿದ್ದು ಶಿಕ್ಷಕರು ಸೇವಾ ಸೌಲಭ್ಯ ಪಡೆಯಲು ಯಾವುದೇ ಸಮಸ್ಯೆಗಳು ಇರುವುದಿಲ್ಲ. ಆದರೆ, ಕೋಲಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ 1750 ದಾಖಲೆಗಳು ಕಾಣೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಸಾಮಾನ್ಯವಾಗಿ ಶಿಕ್ಷಕರ ಸೇವಾ ದಾಖಲೆಗಳನ್ನು ಕಾಲ ಕಾಲಕ್ಕೆ ಪರಿಷ್ಕರಿಸಬೇಕು, ಶಿಕ್ಷಕರ ಸೇವೆ, ಸರ್ಕಾರದಿಂದ ದೊರೆತಿರುವ ಸೌಲಭ್ಯ, ಒಂದು ವೇಳೆ ಶಿಕ್ಷಣ ಇಲಾಖೆಯ ವಕ್ರ ದೃಷ್ಟಿಗೆ ಬಿದ್ದು ಏನಾದರೂ ಶಿಕ್ಷೆ ಅನುಭವಿಸಿದ್ದರೆ ಅದನ್ನು ಎಸ್.ಆರ್. ಪುಸ್ತಕದಲ್ಲಿ ಕಡ್ಡಾಯವಾಗಿ ನಮೋದಿಸಬೇಕಾಗುತ್ತದೆ. ಆದರೆ, ಎಸ್.ಆರ್.ಗಳು ಕಾಣೆಯಾಗಿರುವುದರಿಂದ ವಿವರಗಳು ಪಡೆಯುವುದಕ್ಕೆ ಶಿಕ್ಷಕರು ಹೆಣಗಾಡುವಂತಾಗಿದೆ.
ಕೈಯಲ್ಲಿ ಬರೆಯಲಾಗುತ್ತಿದ್ದ ಎಸ್.ಆರ್.ಗಳನ್ನು ಕಂಪ್ಯೂಟರಿಕರಣಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿ ಬಿಇಒ ಕಚೇರಿಯಲ್ಲಿನ ಗುಮಾಸ್ತರಿಗೆ ತರಬೇತಿ ಸಹ ನೀಡಲಾಗಿದ್ದರೂ ಎಸ್.ಆರ್. ಪುಸ್ತಕಗಳು ಮಾಯವಾಗಿರುವುದರಿಂದ ಕಡತಗಳನ್ನು ಕ್ರಮಬದ್ಧಗೊಳಿಸುವುದು ತಲೆ ನೋವಾಗಿ ಪರಿಣಮಿಸಿದೆ.
ವೇತನ ಬಡ್ತಿ, ಆರೋಗ್ಯ ಭತ್ಯೆ, ವಿಮಾ ಸೌಲಭ್ಯಕ್ಕಾಗಿ ಶಿಕ್ಷಕರು ಸಂಬಂಧಪಟ್ಟ ಇಲಾಖೆಗಳಿಗೆ ಎಸ್.ಆರ್.ಗಳನ್ನು ಜೆರಾಕ್ಸ್ ಮಾಡಿ ಅರ್ಜಿಯೊಂದಿಗೆ ಲಗತ್ತಿಸಿದಾಗ ಮಾತ್ರ ಶಿಕ್ಷಕರು ಮುಂಗಡವಾಗಿ ಖರ್ಚು ಮಾಡಿರುವ ಹಣ ವಾಪಸ್ ಪಡೆಯಲು ಸಾದ್ಯವಾಗುತ್ತದೆ. ಆದರೆ, ಬಿಇಒ ಕಚೇರಿಯಲ್ಲಿ ಎಸ್.ಆರ್.ಗಳು ಇಲ್ಲದಿರುವುದರಿಂದ ದಾಖಲೆಗಳಿಗಾಗಿ ಅಲೆಯುವಂತಾಗಿದೆ.
25 ರಿಂದ 30 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರ ವಿವರಗಳು ಎಸ್.ಆರ್.ನಲ್ಲಿ ಲಭ್ಯವಿರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮಹಮ್ಮದ್ಮೋಹಿಸಿನ್ ಅವರು ಕೆಲವು ದಿನಗಳ ಹಿಂದೆ ಎಲ್ಲಾ ಜಿಲ್ಲೆಗಳಿಗೆ ಸುತ್ತೂಲೆಯನ್ನು ಕಳುಹಿಸಿ ಎಸ್.ಆರ್.ಗಳನ್ನು ಕಂಪ್ಯೂಟರಿಕರಣ ಮೂಲಕ ಮೇಲ್ದರ್ಜೆಗೆ ಏರಿಸಲು ಆದೇಶಿಸಿದ್ದಾರೆ.
ಆದರೆ, ಕೋಲಾರ ಬಿಇಒ ಕಚೇರಿಯಲ್ಲಿ ಕೈಬರಹದ ಮೂಲಕ ಸಿದ್ಧಪಡಿಸಿದ್ದ ದಾಖಲೆಗಳು ಸಿಗುತ್ತಿಲ್ಲವೆಂದು ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಹಿಂದೆ ಇದ್ದ ಬಿಇಒ ಶಿವಲಿಂಗಯ್ಯನವರು ಸರ್ಕಾರದ ಆದೇಶದಂತೆ ಶಿಕ್ಷಕರ ವೇತನ ಬಡ್ತಿಗಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಇವರ ವರ್ಗಾವಣೆಯಿಂದ ಪ್ರಕ್ರಿಯೆ ನೆನಗುದಿಗೆ ಬೀಳುವಂತಾಗಿದೆ.  ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಶಿಕ್ಷಕರ ವೇತನವನ್ನು ಆನ್ಲೈನ್ ಮೂಲಕ ವಿಲೇವಾರಿ ಮಾಡುತ್ತಿರುವುದರಿಂದ ಕೈಬರಹದ ಎಸ್.ಆರ್.ಗಳನ್ನು ಕಂಪ್ಯೂಟರಿಕರಣಗೊಳಿಸಲು ಬಿಇಒ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಶಿಕ್ಷಕರು ತಮ್ಮ ಸೇವಾ ಸೌಲಭ್ಯಪಡೆದುಕೊಳ್ಳಲು ಸಂಬಂಧಪಟ್ಟ ಗುಮಾಸ್ತರನ್ನು ಕೇಳಿದಾಗ ಎಸ್.ಆರ್.ಗಳು ಕಚೇರಿಯಲ್ಲಿ ಇಲ್ಲ. ಇದನ್ನು ಖಾಸಗಿ ಕಂಪ್ಯೂಟರ್ ಸೆಂಟರ್ಗಳಿಗೆ ನೀಡಲಾಗಿದ್ದು ಅಲ್ಲಿಂದ ಬರುವವರೆಗೆ ಕಾಯಬೇಕೆಂದು ಹೇಳುತ್ತಿರುವುದರಿಂದ ಶಿಕ್ಷಕರ ಸರ್ಕಾರಿ ಸೇವಾ ಸೌಲಭ್ಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಎಸ್.ಆರ್.ಗಳನ್ನು ಬಿಇಒ ಕಚೇರಿಯಲ್ಲೇ ಸಿದ್ಧಪಡಿಸಬೇಕಾದ ಗುಮಾಸ್ತರು ಖಾಸಗಿ ಕಂಪ್ಯೂಟರ್ ಸೆಂಟರ್ಗಳಲ್ಲಿ ಮಾಡಿಸುತ್ತಿರುವುದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ. ಪ್ರತಿ ಎಸ್.ಆರ್.ಗೆ ಕನಿಷ್ಠ 400 ರು. ವಸೂಲಿ ಕಾರ್ಯ ಶಿಕ್ಷಕರ ಮುಖಂಡರಿಂದಲೇ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇದರಿಂದ ಮುಂದೊಂದು ದಿನ ಬಿಇಒ ಅವರು ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿರುವುದರಿಂದ ನೂತನ ಬಿಇಒ ಪಟ್ಟಭದ್ರ ಹಿತಾಸಕ್ತಿಗಳನ್ನು ದೂರವಿಟ್ಟು ಎಸ್.ಆರ್.ಗಳನ್ನು ತಮ್ಮ ಸುಪರ್ದಿಯಲ್ಲಿರಿಸಿಕೊಂಡು ಶಿಕ್ಷಕರ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವತ್ತ ಆಡಳಿತ ನೀಡಬೇಕಾದ ಅಗತ್ಯವಿದೆ.


ಮುಖಂಡರ ಗಡುವು
ಕೋಲಾರ ಬಿಇಒ ಕಚೇರಿಯಲ್ಲಿ ಕಳೆದ ಎರಡು ತಿಂಗಳಿಂದ ಎಸ್.ಆರ್.ಗಳು ಲಭ್ಯವಾಗುತ್ತಿಲ್ಲ. ಶಿಕ್ಷಕರು ಸರ್ಕಾರಿ ಸವಲತ್ತುಗಳಿಗಾಗಿ ಪರದಾಡುತ್ತಿದ್ದಾರೆ. ಅನೇಕ ಶಿಕ್ಷಕರು ಮೌಖಿಕವಾಗಿ ತಮಗೆ ದೂರು ಸಹ ನೀಡಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಬೆಂಗಳೂರಿಗೆ ಕಳುಹಿಸಿರುವುದಾಗಿ ಹೇಳುತ್ತಿದ್ದಾರೆ. ಕಚೇರಿಯ ಸಿಬ್ಬಂದಿಯೇ ಕಂಪ್ಯೂಟರ್ ಕಲಿತು ಎಸ್.ಆಸ್. ಪುಸಕ್ತಗಳನ್ನು ಸಿದ್ಧಪಡಿಸಬೇಕಾಗಿತ್ತು. ಆದರೆ. ಸಿಬ್ಬಂದಿ ಅಥವಾ ಅಧಿಕಾರಿಗಳು ಕಂಪ್ಯೂಟರ್ಕ್ಲಿಯದಿರುವುದು ದುರ್ದೈವದ ಸಂಗತಿ. ನ.8ರೊಳಗೆ ಎಸ್.ಎಸ್.ಪುಸಕ್ತಗಳು ವಾಪಸ್ ತರಿಸಿಕೊಳ್ಳದಿದ್ದಲ್ಲಿ ಶಿಕ್ಷಕರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ ಎಚ್ಚರಿಕೆ ನೀಡಿದ್ದಾರೆ.

ಡಿಡಿಪಿಐ ಹೇಳಿದ್ದು
ಕೋಲಾರ ಬಿಇಒ ಕಚೇರಿಯಲ್ಲಿ ಶಿಕ್ಷಕರ ಎಸ್.ಆರ್.ಗಳ ನಾಪತ್ತೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ದೂರು ಬಂದಲ್ಲಿ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವೆ. ಎಸ್.ಆರ್.ಗಳು ಆಯಾ ಬಿಇಒಗಳ ಕಚೇರಿಯಲ್ಲಿದ್ದು ಆಯಾ ಕಾಲಕ್ಕೆ ಶಿಕ್ಷಕರಿಗೆ ಸಲ್ಲಬೇಕಾದ ಸೇವೆ ಸೌಲಭ್ಯಗಳ ಕನ್ನಡಿಯಾಗಿದ್ದು ನಾಪತ್ತೆ ಎಂಬುದೇ ನಿಗೂಢವಾಗಿದೆ ಇದನ್ನು ತನಿಖೆಗೆ ಒಳಪಡಿಸುತ್ತೇನೆಂದು ಡಿಡಿಪಿಐ ಪದ್ಮನಾಭ್ ತಿಳಿಸಿದ್ದಾರೆ.


ಬಿಇಒ ಏನಂದ್ರು
ನಾನು ಅಧಿಕಾರ ವಹಿಸಿಕೊಂಡು ಎರಡು ವಾರ ಆಗಿದ್ದು ಎಸ್.ಆರ್. ಪುಸಕ್ತಗಳು ನಾಪತ್ತೆ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಕೋಲಾರ ಬಿಇಒ ಜಗದೀಶ್ ತಿಳಿಸಿದ್ದಾರೆ.


 ಪಾ.ಶ್ರೀ.ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.