ಬಾರದ ವೇತನ ದೇವಾಲಯಕ್ಕೆ ಬೀಗ ಜಡಿದು ಪ್ರತಿಭಟನೆ
ಚಿಕ್ಕಬಳ್ಳಾಪುರ: ತಮಗೆ ವೇತನ ಸರಿಯಾಗಿ ನೀಡುತ್ತಿಲ್ಲ ಎಂದು ಕೋಪಿಸಿಕೊಂಡ ಮುಜರಾಯಿದೇವಾಲಯದ ಅರ್ಚಕರೊಬ್ಬರು ದಿಢೀರನೇ ಪೂಜೆ ನಿಲ್ಲಿಸಿ ಆಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಇಂತಹ ಅಪರೂಪದ ಘಟನೆ ನಡೆದಿರುವುದು ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿಯ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ. ಕಳೆದ ಏಳೆಂಟು ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕೆ ಪ್ರತಿಫಲವಾಗಿ ವೇತನದ ಸಿಗದಿದ್ದರಿಂದ ಕೋಪಗೊಂಡ ಅರ್ಚಕರು ಚಂದ್ರಶೇಖರ್ ಶರ್ಮ.
ದೇವಾಲಯಗಳ ಊರು ಎಂದು ಹೆಸರನ್ನು ಪಡೆದಿರುವ ಸೋಮೇನಹಳ್ಳಿಯಲ್ಲಿ ಅನೇಕ ಶತಮಾನಗಳ ಇತಿಹಾಸವನ್ನು ಹೊಂದಿರುವ ಸಾಕಷ್ಟು ಪುರಾತನ ದೇವಾಲಯಗಳಿವೆ. ಇದರಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯವೂ ಒಂದು. ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಕಾರ್ತಿಕ ಮಾಸ, ಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ದೊಡ್ಡ ಹಬ್ಬದ ಮಾದರಿಯಲ್ಲಿ ಧಾರ್ಮಿಕ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ಮುಜರಾಯಿ ಇಲಾಖೆ ಈ ದೇವಾಲಯದ ಅಭಿವೃದ್ಧಿಯ ವಿಚಾರದಲ್ಲಿ ಗಮನಕೊಟ್ಟಿಲ್ಲ. ಇಲ್ಲಿ ಕಾಡುತ್ತಿರುವ ಸಮಸ್ಯೆಗಳ ನಡುವೆ ಅರ್ಚಕರು ಪೂಜೆ ಮಾಡಿಕೊಂಡು ಬಂದಿದ್ದು ಕಳೆದ ಏಳೆಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಸಂಬಳ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅರ್ಚಕ ಚಂದ್ರಶೇಖರ್ ಶರ್ಮ ಬುಧವಾರ ಪೂಜೆ ನಿಲ್ಲಿಸಿ ಆಲಯಕ್ಕೆ ಬೀಗ ಜಡಿದರು. ಇನ್ನು ಮುಂದೆ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿ ಬೀಗದ ಕೈಯನ್ನು ತೆಗೆದುಕೊಂಡು ಸ್ಥಳೀಯ ನಾಡಕಚೇರಿಯಲ್ಲಿರುವ ಉಪ ತಹಸೀಲ್ದಾರ್ ಅವರಿಗೆ ಕೊಡಲು ಹೋದರು. ಆದರೆ, ತಮಗೆ ಬೀಗದ ಕೈಯನ್ನು ಪಡೆದುಕೊಳ್ಳುವ ಅಧಿಕಾರ ಇಲ್ಲ ಎಂದು ಉಪ ತಹಸೀಲ್ದಾರ್ ತಿಳಿಸಿದ್ದು ಇದರಿಂದ ಮತ್ತೆ ವಾಪಸ್ ಬಂದ ಅರ್ಚಕರು ಆಲಯದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಅಸಲಿ ವಿವಾದ: ಕಳೆದ ಏಳೆಂಟು ವರ್ಷಗಳ ಹಿಂದೆ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ವೆಂಕಟನರಸಯ್ಯ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇವರು ಕೆಲ ಅನಿವಾರ್ಯ ಕಾರಣಗಳಿಂದ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ ನಂತರ ಅರ್ಚಕರಾಗಿ ಚಂದ್ರಶೇಖರ್ ಶರ್ಮ ಸೇವೆ ಮಾಡಿಕೊಂಡು ಬಂದರಾದರೂ ಇತ್ತೀಚೆಗೆ ಮುಜರಾಯಿ ಇಲಾಖೆ ಶರ್ಮರವರಿಗೆ ನೇಮಕಾತಿ ಆದೇಶ ಕೊಟ್ಟಿದೆ. ಅದರಂತೆ ನೇಮಕಾತಿಯಾದ ದಿನಾಂಕದಿಂದ ವೇತನ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದು ಇದು ಅರ್ಚಕರ ಕೋಪಕ್ಕೆ ಕಾರಣ.
ತಾವು ಕಳೆದ ಏಳೆಂಟು ವರ್ಷಗಳಿಂದ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಬಂದಿರುವುದು ಅಧಿಕಾರಿಗಳಿಗೂ ತಿಳಿದಿರುವ ವಿಷಯ. ಹಿಂದೆಯೆಲ್ಲಾ ತಮ್ಮನ್ನು ಸಮಾಧಾನಪಡಿಸಿಕೊಂಡು ಬಂದು ಇದೀಗ ಏಳೆಂಟು ವರ್ಷಗಳಿಂದ ಕಾರ್ಯ ನಿರ್ವಹಿಸಿರುವುದಕ್ಕೆ ವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಇಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಬೇರೆ ಯಾರನ್ನಾದರೂ ಅರ್ಚಕರನ್ನಾಗಿ ನೇಮಿಸಿಕೊಳ್ಳಲಿ, ಈಗ ತಾವು ಆಲಯದ ಬೀಗದ ಕೈ ಕೊಟ್ಟು ಹೋಗುತ್ತೇವೆ ಎಂದು ತಿಳಿಸಿದರು. ಇದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಗ್ರಾಮಸ್ಥರು ಅರ್ಚಕರ ಮನವೊಲಿಸುವ ಕೆಲಸ ಮಾಡಿದರು. ಕೊನೆಗೆ ಗ್ರಾಮಸ್ಥರಿಂದ ಮಾಹಿತಿ ತಿಳಿದುಕೊಂಡ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ದೂರವಾಣಿಯಲ್ಲಿ ಅರ್ಚಕರೊಂದಿಗೆ ಮಾತನಾಡಿ ಸಮಾಧಾನಪಡಿಸಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತ್ವರಿತವಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

