ಹನಿ ನೀರಾವರಿಯಲ್ಲಿ ಬತ್ತ ಬೆಳೆದ ರೈತ
ಚಿಕ್ಕಬಳ್ಳಾಪುರ: ಅಂತರ್ಜಲ ಮತ್ತು ನೀರಾವರಿ ಸಮಸ್ಯೆಯಿಂದ ನಲುಗುತ್ತಿರುವ ಜಿಲ್ಲೆಯಲ್ಲಿ ಹೆಚ್ಚಿಗೆ ನೀರು ಅಪೇಕ್ಷಿಸುವ ಬತ್ತವನ್ನು ಹನಿ ನೀರಾವರಿ ಪದ್ಧ್ದತಿಯಲ್ಲಿ ಸಮೃದ್ಧಿಯಾಗಿ ಬೆಳೆಯುವ ಮೂಲಕ ಇಲ್ಲಿನ ಪ್ರಗತಿಪರ ರೈತರೊಬ್ಬರು ಗಮನ ಸೆಳೆದಿದ್ದಾರೆ.
ಕಡಿಮೆ ನೀರಿನ ಬಳಕೆಯಲ್ಲಿ ಬತ್ತ ಬೆಳೆದು ಉತ್ತಮ ಇಳುವರಿ ಪಡೆಯುತ್ತಿರುವ ಪ್ರಗತಿಪರ ರೈತ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಚಂದ್ರಶೇಖರ್. ಕೃಷಿ ಕ್ಷೇತ್ರದ ಹೊಸ ವೈಜ್ಞಾನಿಕ ಪ್ರಯೋಗಗಳನ್ನು ಅನುಸರಿಸುವಲ್ಲಿ ಸದಾ ಮುಂದೆ ಇರುವ ಇವರು, ತಮ್ಮ 36 ಗುಂಟೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಬಳಕೆ ಮಾಡಿಕೊಂಡು ಬತ್ತವನ್ನು ಬೆಳೆದಿದ್ದಾರೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಮತ್ತು ಅಂತರ್ಜಲ ಸಮಸ್ಯೆ ಹೆಚ್ಚಾಗಿರುವುದರಿಂದ ರೈತರು ಹೆಚ್ಚಿಗೆ ನೀರು ಅವಶ್ಯಕತೆ ಇರುವ ಬತ್ತವನ್ನು ಬೆಳೆಯಲು ಹೋಗುವುದಿಲ್ಲ. ರೇಷ್ಮೆ, ದ್ರಾಕ್ಷಿ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುಲು ಹೆಚ್ಚು ಆಸಕ್ತಿ ತೋರುತ್ತಾರೆ. ಒಳ್ಳೆಯ ನೀರಾವರಿ ಸೌಲಭ್ಯ ಹೊಂದಿರುವ ಕೆಲ ರೈತರು ಮಾತ್ರ ಅಲ್ಲಲ್ಲಿ ಬತ್ತ ಬೆಳೆಯುತ್ತಿರುವುದು. ಎಲ್ಲೆಡೆ ಬತ್ತ ಬೆಳೆಯಲು ಕೆಸರು ಗದ್ದೆ ಮಾಡಿ ಸಸಿ ಉತ್ಪಾದನೆ, ಆ ನಂತರ ನಾಟಿ ಮಾಡಲಾಗುತ್ತದೆ. ಅಲ್ಲದೇ ಬೆಳೆಗೆ ಹೆಚ್ಚಿಗೆ ನೀರನ್ನು ಹರಿಸಲಾಗುತ್ತದೆ. ಈ ನಡುವೆ ಆಗಾಗ ವಿದ್ಯುತ್ ಕೈ ಕೊಡುವ, ಅಂತರ್ಜಲ ಸಮಸ್ಯೆಯಿಂದ ಸಮರ್ಪಕವಾಗಿ ನೀರನ್ನು ಹರಿಸಲಾಗದೇ ಬತ್ತದ ಬೆಳೆಯ ಇಳುವರಿಯಲ್ಲಿ ಕುಸಿತ ಕಾಣಲಾಗುತ್ತದೆ. ಆದರೆ, ಇದೆಲ್ಲದರ ಸಮಸ್ಯೆ ಬದಿಗೊತ್ತಿ ಕಡಿಮೆ ನೀರಿನ ಬಳಕೆಯ ಏರೋಬಿಕ್ ವಿಧಾನದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬತ್ತ ಬೆಳೆದಿರುವುದು ವಿಶೇಷವಾಗಿದೆ. ಇಲ್ಲಿ ಕೆಸರು ಗದ್ದೆ ಮಾಡಿ, ನಂತರ ಸಸಿ ಮಾಡಿ ನಾಟಿ ಮಾಡುವ ಅನಾದಿ ಕಾಲದ ಪದ್ಧತಿ ಅನುಸರಿಸುವ ಅವಶ್ಯಕತೆಯಿಲ್ಲ. ನೇರ ಬೀಜ ಉತ್ಪಾದನೆ, ಜತೆಗೆ ನೀರು ಹೆಚ್ಚಿಗೆ ಬೇಕಾಗಿಲ್ಲ.
ಹೊಸ ಪ್ರಯೋಗ: ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಶೈಲಜ ಹಿತ್ತಲಮನಿಯವರು ಎಂಎಎಸ್ 946-1 ಬತ್ತ ತಳಿಯನ್ನು ಸಂಶೋಧಿಸಿದ್ದು ಇದನ್ನು ಉಪಯೋಗಿಸಿಕೊಂಡು ಬತ್ತ ಬೆಳೆಯಲು ರೈತರಿಗೆ ಮಾಹಿತಿ ತಿಳಿಸಲಾಗಿತ್ತು. ಆದರೆ, ಬಹುಪಾಲು ರೈತರು ಈ ಹೊಸ ಪ್ರಯೋಗದ ಬಗ್ಗೆ ಅನುಮಾನಗೊಂಡು ಹಿಂದೇಟು ಹಾಕಿದ್ದು ಅಗಲಗುರ್ಕಿ ಚಂದ್ರಶೇಖರ್ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ತಮ್ಮ 32 ಗುಂಟೆ ಜಮೀನಿನಲ್ಲಿ ಸಾಲಾಗಿ ಬಿತ್ತನೆ ಬೀಜವನ್ನು ನಾಟಿ ಮಾಡಿ ಹನಿ ನೀರಾವರಿ ಪೈಪ್ ಅಳವಡಿಸಿ ವಾರಕ್ಕೊಮ್ಮೆ ಎರಡ್ಮೂರು ಬಾರಿ ನೀರನ್ನು ಹಾಯಿಸಿದ್ದಾರೆ. ಕೃಷಿ ವಿಜ್ಞಾನಿಗಳು ತಿಳಿಸಿರುವಂತೆ ರಸಗೊಬ್ಬರ ಬಳಕೆ ಮಾಡಿದ್ದಾರೆ. ಇದರಿಂದ ಇದೀಗ ಬತ್ತ ಸಮೃದ್ಧಿಯಾಗಿ ಬೆಳೆದಿದ್ದು ಇಳುವರಿ ಬರುವುದು ಸಾಮಾನ್ಯದ ಬತ್ತದ ಬೆಳೆಗಳಿಗಿಂತಲು ತಡವಾದರೂ ಒಳ್ಳೆಯ ಇಳುವರಿ ಪಡೆಯುವಲ್ಲಿದ್ದಾರೆ.
ಅನುಕೂಲಕರ ವಿಧಾನ: ಬತ್ತವನ್ನು ಇದೇ ಮೊದಲ ಬಾರಿಗೆ ಬೆಳೆಯುತ್ತಿದ್ದು ನೀರಾವರಿ ಸಮಸ್ಯೆಯಿಂದ ಈ ಬೆಳೆಯನ್ನು ಬೆಳೆಯುವ ಯೋಚನೆ ಇರಲಿಲ್ಲ. ಆದರೆ, ಜಿಕೆವಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ತಮಗೆ ಸೂಕ್ತ ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ವಿನೂತನ ಏರೋಬಿಕ್ ಕೃಷಿ ಪದ್ಧತಿ ಬಳಸಿಕೊಂಡು ಬತ್ತ ಬೆಳೆದಿದ್ದು ಕೃಷಿ ನಿರ್ವಹಣೆಗೆ ತಗುಲುವ ಖರ್ಚಿನಲ್ಲೂ, ನೀರಿನ ಬಳಕೆಯಲ್ಲೂ ಉಳಿತಾಯವಾಗಿದೆ. ಅಲ್ಲದೇ ಒಳ್ಳೆಯ ಇಳುವರಿ ಸಿಗುತ್ತಿದೆ. ಈ ಹೊಸ ಪ್ರಯೋಗವನ್ನು ಜಿಲ್ಲೆಯ ಉಳಿದ ರೈತರು ಕೈಗೊಳ್ಳಬೇಕೆಂದು ಸಲಹೆ ನೀಡಿದ ಅಗಲಗುರ್ಕಿ ಚಂದ್ರಶೇಖರ್, ಪ್ರಗತಿಪರ ರೈತರು ಅಧಿಕಾರಿಗಳಿಂದ ಮಾಹಿತಿ ಪಡೆದು ವೈಜ್ಞಾನಿಕ ವಿಧಾನ ಅನುಸರಿಸಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ಆಗ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೈಜ್ಞಾನಿಕ ಪದ್ಧತಿ ಅನುಸರಿಸಿ: ಬತ್ತ ಬೆಳೆಯಲು ಹೆಚ್ಚಿಗೆ ನೀರಿನ ಅವಶ್ಯಕತೆಯಿಲ್ಲ. ವೈಜ್ಞಾನಿಕ ಪದ್ಧತಿ ಅನುಸರಿಸಿ ಕಡಿಮೆ ನೀರಿನಲ್ಲೂ ಬತ್ತ ಬೆಳೆಯಬಹುದೆಂದು ಜಿಕೆವಿಕೆ ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಡಾ. ಶೈಲಜಾ ಹಿತ್ತಲಮನಿ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಅಗಲಗುರ್ಕಿ ಚಂದ್ರಶೇಖರ್ ಅವರ ತೋಟದಲ್ಲಿ ಜಿಪಂ ಮತ್ತು ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಹಿಂದೆ ಬತ್ತ ಬೆಳೆಯುವ ಕೆಸರು ಗದ್ದೆ ನಿರ್ಮಾಣ ಮಾಡಿ, ಏರೋಬಿಕ್ ವಿಧಾನವೇ ಕಡಿಮೆ ನೀರಿನ ಬಳಕೆಯ ಗುರಿ ಹೊಂದಿದೆ. ಪ್ರಸ್ತುತ ಅಂತರ್ಜಲ ಸಮಸ್ಯೆ ಎಲ್ಲೆಡೆ ಕಂಡು ಬರುತ್ತಿದ್ದು ಏರೋಬಿಕ್ ವಿಧಾನ ಅನುಸರಿಸಿ ರೈತರು ಬತ್ತ ಬೆಳೆಯಲು ಮುಂದಾಗಬೇಕೆಂದು ತಿಳಿಸಿದರು.
ಅಗಲಗುರ್ಕಿ ಚಂದ್ರಶೇಖರ್ ಅವರು ಈ ಹೊಸ ಪ್ರಯೋಗವನ್ನು ಅನುಸರಿಸಿ ಬತ್ತ ಬೆಳೆದಿರುವುದು ಶ್ಲಾಘನೀಯ. ಈ ಮೂಲಕ ಅವರು ಎಲ್ಲಾ ರೈತರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ಭಾರತಿ ಕಿಸಾನ್ ಸಭಾ ಅಧ್ಯಕ್ಷ ಅಗಲಗುರ್ಕಿ ಕೃಷ್ಣಪ್ಪ, ಶ್ರೀನಿವಾಸ ರೆಡ್ಡಿ, ಮೈಲಪನಹಳ್ಳಿ ಕೃಷ್ಣಪ್ಪ, ಮೋಹನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

