ನಗರಸಭೆ ಮುಂದೆ ಕಸ ಸುರಿದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಕೋಲಾರ, ನ.11
ನಗರದಲ್ಲಿ ಕಸ ವಿಲೇವಾರಿಯ ಸಮಸ್ಯೆ ಕೂಡಲೇ ನಿವಾರಿಸಬೇಕೆಂದು ಒತ್ತಾಯಿಸಿ ಡಿವೈಎಫ್ಐನಿಂದ ನಗರಸಭೆಯ ಮುಂದೆ ಕಸ ಸುರಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಟ್ರ್ಯಾಕ್ಟರ್ನಲ್ಲಿ ಕಸ ತುಂಬಿಕೊಂಡು ಬಂದು ನಗರಸಭೆ ಮುಂದೆ ಸುರಿದು ಜನತೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಕೋಲಾರ ನಗರದ ಜನಸಂಖ್ಯೆ 1.50 ಲಕ್ಷ ದಾಟಿದೆ. ಅಗತ್ಯಕ್ಕೆ ತಕ್ಕಷ್ಟು ಪೌರ ಕಾರ್ಮಿಕರ ನೇಮಕವಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ 250 ಪೌರ ಕಾರ್ಮಿಕರು ಇರಬೇಕಾಗಿತ್ತು. ಸಿಬ್ಬಂದಿ ಕೊರತೆಯಿಂದ ನಗರದ ನೈರ್ಮಲ್ಯ ಹಾಳಾಗುತ್ತಿದೆ, ಜನತೆ ಸೊಳ್ಳೆ ಮತ್ತು ಸಾಂಕ್ರಾಮಿಕ ರೋಗದ ಭೀತಿಯಿಂದ ತತ್ತರಿಸುತ್ತಿದ್ದಾರೆಂದು ಪ್ರತಿಭಟನಾಕಾರರು ದೂರಿದರು.
ಪೌರ ಕಾರ್ಮಿಕರ ನೇಮಕಕ್ಕೆ ಕಳೆದ ವರ್ಷ ಕರೆದಿದ್ದ ಟೆಂಡರ್ ಮುಗಿದು ನಾಲ್ಕು ತಿಂಗಳು ಆಗಿದೆ. ಕಳೆದ ವರ್ಷ ಕೇವಲ 83 ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು, ಈ ಪೈಕಿ 15 ರಿಂದ 20 ಮಂದಿ ಅನೇಕ ಕಾರಣಗಳಿಂದ ಗೈರು ಹಾಜರಾಗಿರುವುದರಿಂದ ನಗರದ 35 ವಾರ್ಡುಗಳಲ್ಲಿ ಸಮಪರ್ಕವಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲವೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಪಿಎಂ ನಗರಸಭಾ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಆರೋಪಿಸಿದರು.
ಕಾಯಂ ಸಿಬ್ಬಂದಿ 40 ರಿಂದ 45 ಮಂದಿ ಇದ್ದಾರೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರು 65 ರಿಂದ 70 ಮಂದಿ. ಇವರಿಂದ ನೂರಾರು ಟನ್ ಕಸ ವಿಲೇವಾರಿ ಮಾಡಲು ಕಷ್ಟವಾಗುತ್ತಿದೆ. ನಾಗರೀಕರು ವಾಸ ಮಾಡುವ ಬಡಾವಣೆಗಳಲ್ಲಿ ಕಸ-ಕಡ್ಡಿಗಳ ರಾಶಿ ಹಾಗೆಯೇ ಉಳಿಯುತ್ತಿರುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ನಗರಸಭೆ ಕಾರ್ಯವೈಖರಿಯನ್ನು ಟೀಕಿಸಿದರು.
ಕೂಡಲೇ ಟೆಂಡರ್ ಕರೆದು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ಕಸ ವಿಲೇವಾರಿಗೆ ಸೂಕ್ತವಾದ ಜಮೀನು ಹುಡುಕಿ ಘಟಕ ಸ್ಥಾಪಿಸಬೇಕು, ಅನೇಕ ವಾರ್ಡುಗಳಲ್ಲಿ ಚರಂಡಿಗಳ ದುರಸ್ತಿ, ಬೀದಿ ದೀಪಗಳ ಅಳವಡಿಕೆ ಹಾಗೂ ಇನ್ನಿತರ ಮೂಲ ಸೌಕರ್ಯ ಕಲ್ಪಿಸಬೇಕೆಂದು ಅವರು ನಗರಸಭೆ ಆಯುಕ್ತ ಜಗದೀಶ್ ಅವರನ್ನು ಆಗ್ರಹಿಸಿದರು.
ಗಾಂಧಿನಗರ ನಾರಾಯಣಸ್ವಾಮಿ, ವಿಜಯಕೃಷ್ಣ, ಕೆ.ವಿ. ಮಂಜುನಾಥ್, ರಮಣ, ಕಟ್ಟಿಕಪಲ್ಲಿ ಮುರಳಿ, ರೌತ್ ಆಂಜಿ, ನಾಗರಾಜ್, ಮಲ್ಲಪ್ಪ, ಕಿಟ್ಟಿ, ಸೀನಪ್ಪ, ಸಂಪಂಗಿರಾಮಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

