ಕೋಲಾರ

ಮೇಷ್ಟ್ರ ಸಂಬ್ಳಕ್ಕೆ ತಿಂಗ್ಳ 15 ಕೋಟಿ ವೆಚ್ಚ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ನ.11
ಜಿಲ್ಲೆಯಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪ್ರತಿ ತಿಂಗಳು ಸಾರ್ವಜನಿಕ ಶಿಕ್ಷಣ ಅಭಿಯಾನದಡಿ 15 ಕೋಟಿ ರು. ಕೇವಲ ಸಂಬಳಕ್ಕೆ ವಿನಿಯೋಗಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ನೀಡಿದ ಮಾಹಿತಿಯಿಂದ ಜಿ.ಪಂ. ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಬೆಚ್ಚಿಬಿದ್ದ ಪ್ರಸಂಗ ನಡೆಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಇಲಾಖೆಯ ಬಗ್ಗೆ ಪ್ರತಿಯೊಂದು ಸಭೆಯಲ್ಲೂ ಒಂದೇ ರೀತಿಯ ಮಾಹಿತಿ ನೀಡುತ್ತಿದ್ದೀರಾ, ಶಿಕ್ಷಕರಿಗೆ ನೀಡುತ್ತಿರುವ ಸಂಬಳಕ್ಕೆ ಹೆಚ್ಚು ಖರ್ಚು ಮಾಡಲಾಗುತ್ತಿದೆ ತಿಳಿಸಿ ಎಂದರು.
ಸರ್ವಶಿಕ್ಷಣ ಅಭಿಯಾನದಲ್ಲಿ ಜಿಲ್ಲೆಗೆ 21 ಕೋಟಿ 66 ಲಕ್ಷ ರು.ಗಳು ಮಂಜೂರಾಗಿದೆ. ಜಿಲ್ಲೆಯಲ್ಲಿ 8 ಸಾವಿರ ಪ್ರಾಥಮಿಕ ಶಿಕ್ಷಕರು ಹಾಗೂ 800 ಪ್ರೌಢಶಾಲಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿ ತಿಂಗಳು ಶಿಕ್ಷಕರ ವೇತನಕ್ಕೆ 15 ಕೋಟಿ ರು. ವೆಚ್ಚವಾಗುತ್ತಿದೆ ಎಂದು ಡಿಡಿಪಿಐ ಪದ್ಮನಾಭ್ ತಿಳಿಸಿದರು.
ಡಿಡಿಪಿಐ ನೀಡಿದ ವಿವರದಿಂದ ಬೆಚ್ಚಿಬಿದ್ದ ಜಿ.ಪಂ ಅಧ್ಯಕ್ಷರು, ಶಿಕ್ಷಕರ ಸಂಬಳಕ್ಕೆ ಮಾತ್ರ 15 ಕೋಟಿ ಖರ್ಚು ಆಗುತ್ತಿದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ಇಲಾಖೆಯಿಂದ ಅನುಕೂಲ ಪಡೆಯುತ್ತಿರುವ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಳೆದ ವರ್ಷದಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವ ಭರವಸೆಯಿದೆ. ಶಿಕ್ಷಕರು ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆಂದಾಗ ಸಮಾಧಾನಗೊಂಡ ಜಿ.ಪಂ ಅಧ್ಯಕ್ಷರು, ಹಾಗಾದರೆ 15 ಕೋಟಿ ಸಂಬಳ ನೀಡುತ್ತಿರುವುದು ಸರಿಯಾಗಿದೆ ಎಂದೇ ಭಾವಿಸುತ್ತೆನೆಂದರು.
ನರೇಗಾ ಸಾಧನೆ ಆಗಿಲ್ಲ: ಖಾತರಿ ಯೋಜನೆಯಲ್ಲಿ ಕೋಲಾರ ಜಿಲ್ಲೆ 17ನೇ ಸ್ಥಾನದಲ್ಲಿದ್ದು ಶ್ರೀನಿವಾಸಪುರ ತಾಲೂಕಿನಲ್ಲಿ ಕೇವಲ 60 ಸಾವಿರ ಮಾತ್ರ ಖರ್ಚು ಮಾಡಲಾಗಿದೆ.  ಇದನ್ನು ಗಮನಿಸಿದಾಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂದು ಪರಿಗಣಿಸಬೇಕಾಗುತ್ತದೆ. ನರೇಗಾ ಯೋಜನೆ ಸಾಧನೆ ಮಾಡದಿರುವ  ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ ಅಧ್ಯಕ್ಷರು ಎಚ್ಚರಿಕೆ ನೀಡಿದರು.
ನಿರ್ಮಲ ಭಾರತ ಯೋಜನೆಯಲ್ಲಿ ಶಾಲಾ ಶೌಚಾಲಯ ನಿರ್ಮಿಸಲು 20 ಲಕ್ಷ ರು. ಮಂಜೂರು ಮಾಡಿದ್ದು ಇನ್ನು 50 ಲಕ್ಷ ರು.ಗಳಿಗೆ ಏರಿಕೆ ಮಾಡಲಾಗಿರುವುದರಿಂದ ಶಾಲಾ ಶೌಚಾಲಯಗಳನ್ನು ತ್ವರಿತವಾಗಿ ನಿರ್ಮಿಸಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್ ಉಲ್ಲಾ ಜಿ.ಪಂ. ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದು ಸಾರ್ವಜನಿಕರ ಗಮನಕ್ಕೆ ಬರುತ್ತಿಲ್ಲ, ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ಜಿ.ಪಂ.  ಅಧ್ಯಕ್ಷರಿಗೂ ತಿಳಿಸಬೇಕೆಂದು ಹೇಳಿದರು. ಜಿಲ್ಲೆಯ 150 ಗ್ರಾಮ ಪಂಚಾಯಿತಿಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು 54 ಸಾವಿರ ಅನಕ್ಷರಸ್ಥರಿದ್ದಾರೆ.  162 ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 9 ಸಮಿತಿಗಳನ್ನು ರಚಿಸಲಾಗಿದೆ. 312 ಸಂಯೋಜಕರನ್ನು ಆಯ್ಕೆ ಮಾಡಲಾಗಿದೆ.  162 ಪ್ರೇರಕರನ್ನು ಆಯ್ಕೆ ಮಾಡಿದೆ ಎಂದು ಕಾರ್ಯಕ್ರಮ ಅನುಷ್ಠಾನಾಧಿಕಾರಿ ರಾಜಪ್ಪ ಸಭೆಗೆ ವಿವರಿಸಿದರು. ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ  ಕೇಂದ್ರ ಸರ್ಕಾರ 1 ಕೋಟಿ 80 ಲಕ್ಷ ಬಿಡುಗಡೆ ಮಾಡಿದೆ.  ಇದನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಜನಪ್ರತಿನಿಧಿಗಳ ಸಲಹೆಗೆ ಸೂಚನೆ: ನೇರ ಸಾಲ ಕೋರಿ ಪರಿಶಿಷ್ಟ ಜಾತಿ ಜನಾಂಗದವರಿಂದ 8 ಸಾವಿರ ಅರ್ಜಿಗಳು ಬಂದಿದೆ. ಕಳೆದ ವರ್ಷದ 4 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಪರಿಶಿಷ್ಟ ಮತ್ತು ಜನಾಂಗದವರಿಗೆ 35 ಸಾವಿರ ಸಹಾಯಧನ ನೀಡಲು  ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಆನಂದ್ ಮಾತನಾಡಿ ಫಲಾನುಭವಿಗಳ ಆಯ್ಕೆಗೆ ಜಿ.ಪಂ. ಸದಸ್ಯರು ಸೇರಿದಂತೆ ಸಮಿತಿಗಳನ್ನು ರಚಿಸಿ ಆ ಮೂಲಕ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಡಾವಳಿಯನ್ನು ಮಾಡಿ ಕಳುಹಿಸುವಂತೆ ಸಭೆಗೆ ತಿಳಿಸಿದರು.
ಜಿ.ಪಂ. ಅಧ್ಯಕ್ಷರು ಮಾತನಾಡುತ್ತಾ ಪ್ರತಿ ತಾಲೂಕಿಗೆ 35 ಫಲಾನುಭವಿಗಳಿಗೆ ಸಹಾಯಧನ ನೀಡುತ್ತಿದ್ದು ಸಾರ್ವಜನಿಕರಿಂದ ಅರ್ಜಿಗಳನ್ನು ಕರೆದು ಸಾವಿರಾರು ಅರ್ಜಿಗಳು ಬರುತ್ತವೆ. ಇದರಿಂದ ಯಾವ ಪ್ರಯೋಜನವಾಗುವುದಿಲ್ಲ. ಆದುದರಿಂದ ತಾಲೂಕುವಾರು ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷರಾದ ಅಲುವೇಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿಮೋಲ್‌ಮೋಹನ್, ಎಂ.ಎಸ್. ಆನಂದ್, ನಾಗರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್‌ಉಲ್ಲಾ, ಉಪ ಕಾರ್ಯದರ್ಶಿ ಬದನೂರು ಇದ್ದರು.

ಪರಿಹಾರ ಬಂದಿಲ್ಲ
ಜಿಲ್ಲೆಯಲ್ಲಿ ಕಾಲುಬಾಯಿ ರೋಗದಿಂದ ಈವರೆವಿಗೂ 1721 ರಾಸುಗಳು ಮೃತಪಟ್ಟಿವೆ. ಪರಿಹಾರಕ್ಕಾಗಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಸರ್ಕಾರದಿಂದ ಸಹಾಯಧನ ಮಂಜೂರಾಗಿರುವುದಿಲ್ಲ. ಸರ್ಕಾರದ ಆದೇಶದಂತೆ ಹಾಲು ಕರೆಯುವ ಹಸುವಿಗೆ 25 ಸಾವಿರ, ಎಮ್ಮೆ,  ಎತ್ತುಗಳಿಗೆ 20 ಸಾವಿರ, ಕರುವಿಗೆ 10ಸಾವಿರದಂತೆ ಸಹಾಯದನ ನೀಡಲು ಆದೇಶವಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರಲ್ಲದೆ, ಹಣ ಬಂದ ಮೇಲೆ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಜಲ್ಲಿ ಕ್ರಷರ್‌ಗಳು ಲೈಸನ್ಸ್ ಇಲ್ಲದೆ ಬಹಳಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಅಂತಹ ಕಲ್ಲು ಕ್ರಷರ್‌ಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಒತ್ತಾಯಿಸಿದರು. ಬೆಸ್ಕಾಂ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆ ಪಂಪ್‌ಗಳ ವಿದ್ಯುತ್ ಕಡಿತಗೊಳಿಸಬಾರದು ಬಿಲ್ಲುಗಳನ್ನು ನೀಡಿ ಹಣ ಪಾವತಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.