ದಂಪತಿ ನೇಣಿಗೆ ಶರಣು
ಬಂಗಾರಪೇಟೆ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ವಟ್ರಕುಂಟೆ ಗ್ರಾಮದ ನಾಗರಾಜ್ 45 ಮತ್ತು ನಾರಾಯಣಮ್ಮ 40 ಎಂಬುವರೆ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಸುಮಾರು ಮೂರು ಲಕ್ಷದಷ್ಟು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ತೀರಿಸಲು ಮಾರ್ಗವಿಲ್ಲದೆ ಮತ್ತು ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಮನೆಯಲ್ಲಿ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು ಇಬ್ಬರಿಗೆ ವಿವಾಹವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಜಿಪಂ ಸದಸ್ಯ ಎಂ.ಎಸ್. ಆನಂದ್ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣವನ್ನು ಪಟ್ಟಣ ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪಾದಚಾರಿ ಸಾವು: ತಾಲೂಕಿನ ಐನೋರಹೊಸಹಳ್ಳಿ ಗ್ರಾಮದ ರಾಮು 23 ಎಂಬ ಯುವಕ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಪಾದಚಾರಿಗೆ ಡಿಕ್ಕಿ ಹೊಡೆದ ವಾಹನ ಯಾವುದು ಎಂಬುದು ತಿಳಿದು ಬಂದಿಲ್ಲ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದರೋಡೆಕೋರರರ ಬಂಧನ
ಕೋಲಾರ: ತಾಲೂಕಿನ ವೇಮಗಲ್ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಕಾಲೇಜಿನಲ್ಲಿ ದರೋಡೆ ಮಾಡಲು ಗುಂಪುಕಟ್ಟಿಕೊಂಡು ಬಂದಿದ್ದ ಆರೋಪಿಗಳನ್ನು ವೇಮಗಲ್ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಅ.10ರಂದು ದರೋಡೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ವೇಮಗಲ್ ಠಾಣೆಯ ಪಿ.ಎಸ್.ಐ ಯಶವಂತ್ ಅವರ ನಾಯಕತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಬಂಧಿತರು ಚಿಂತಾಮಣಿ ತಾಲೂಕಿನ ಬೇರ್ಜೇನಹಳ್ಳಿ, ಗಂಗಾಧರ್, ಮುರಳಿ, ಮಣಿಕಂಠ, ರಮೇಶ್,ಅನಿಲ್ ಹಾಗೂ ಬೆಟ್ಟಪ್ಪ ಬೇರ್ಜೇನಹಳ್ಳಿಯ ಮಂಜುನಾಥ್ ಎಂಬುವರಾಗಿದ್ದಾರೆ.
ಶಾದಿ ಭಾಗ್ಯ: ಕೆಜೆಪಿ ಪ್ರತಿಭಟನೆ
ಕೋಲಾರ: ಶಾದಿ ಭಾಗ್ಯ ಯೋಜನೆಯನ್ನು ಎಲ್ಲಾ ಬಡವರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಸೋಮವಾರ ಪ್ರತಿಭಟನೆ ನಡೆಯಿತು. ನಗರದ ಸರ್ಕಾರಿ ಬಸ್ನಿಲ್ದಾಣ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮಹಿಳೆಯರು ಕೆಲ ನಿಮಿಷ ರಸ್ತೆ ತಡೆ ಮಾಡಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇವಲ ಒಂದು ವರ್ಗಕ್ಕೆ ಮಾತ್ರ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದು ಓಟ್ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಕೆಜೆಪಿಯ ರಾಜ್ಯ ಉಪಾಧ್ಯಕ್ಷ ಎಸ್.ಎನ್. ಶ್ರೀರಾಮ್, ಜಿಲ್ಲಾಧ್ಯಕ್ಷ ಆರ್. ಚಂದ್ರಶೇಖರರೆಡ್ಡಿ, ಮುಖಂಡರಾದ ಜಗದೀಶ್ವರಾಚಾರಿ, ಸಿ.ಡಿ. ರಾಮಚಂದ್ರಗೌಡ, ರಾಜೇಶ್ವರಿ ಇದ್ದರು.
ಇಂದು ಕೋಲಾರಕ್ಕೆ ಸಚಿವ ಅಂಬರೀಷ್
ಕೋಲಾರ: ರಾಜ್ಯ ವಸತಿ ಸಚಿವ ಅಂಬರೀಷ್ ಅವರು ಮಂಗಳವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿ ತಮ್ಮ ಇಲಾಖೆಯಿಂದ ಆಗಿರುವ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಸಚಿವ ಅಂಬರೀಷ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಚಿವರು ಕೋಲಾರದ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಂತರ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯಲಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರೆಂದು ತಿಳಿಸಿದ್ದಾರೆ.
ಇಂದು ವಸತಿ ಸಚಿವರ ಜತೆ ಅಧಿಕಾರಿಗಳ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಸತಿ ಸಚಿವ ಎಂ. ಅಂಬರೀಷ್ ನ.12 ರಂದು ಮಧ್ಯಾಹ್ನ 3.30 ಕ್ಕೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಜಿಲ್ಲೆಯ ವಸತಿ, ಆಶ್ರಯ, ಬಸವಾ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಡಜನರಿಗೆ ವಸತಿ ಸೌಲಭ್ಯವನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಶೀಘ್ರ ಲಿಪಿಗಾರರ 9 ಹುದ್ದೆಗಳಿಗೆ ಅರ್ಜಿ
ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ಮತ್ತು ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರರ 9 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಮುಖ್ಯ ಆಡಳಿತಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ಇಲ್ಲಿ ಪಡೆದು ಭರ್ತಿ ಮಾಡಿದ ಡಿ.20 ರೊಳಗೆ ಸಲ್ಲಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಜೆ. ಚಂದ್ರಶೇಖರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೊಂದಲದ ಗೂಡಾದ ಕನಕ ಜಯಂತಿ ಪೂರ್ವಭಾವಿ ಸಭೆ
ಗುಡಿಬಂಡೆ: ಕನಕ ಜಯಂತಿ ಅಂಗವಾಗಿ ಪೂರ್ವಸಿದ್ಧತೆ ಬಗ್ಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆ ಹಲವು ಗೊಂದಲಗಳ ನಡುವೆ ಮುಕ್ತಾಯಗೊಂಡ ಪ್ರಸಂಗ ನಡೆಯಿತು. ತಹಸೀಲ್ದಾರ್ ಶೈಲಜಾ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಾರಂಭವಾದ ಸಭೆಯಲ್ಲಿ ಮೊದಲಿಗೆ ಇಲಾಖಾ ಅಧಿಕಾರಿಗಳ ಹಾಜರಾತಿ ಬಗ್ಗೆ ಆಕ್ಷೇಪವೆತ್ತಿ ಮಾತನಾಡಿದ ಕುರುಬರ ಸಂಘದ ತಾಲೂಕು ಅಧ್ಯಕ್ಷ ಕಾರಕೂರಪ್ಪ ಕನಕ ಜಯಂತಿ ಸೇರಿದಂತೆ ಮಹತ್ವಪೂರ್ಣ ದಿನಾಚರಣೆ ಹಾಗೂ ಸಮಾರಂಭಗಳ ಬಗ್ಗೆ ಚರ್ಚಿಸಲು ತಾಲೂಕು ಮಟ್ಟದ ಬಹಳಷ್ಟು ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಇದರಿಂದಾಗಿ ಸಮಾರಂಭಗಳನ್ನು ಕೇವಲ ಕಾಟಾಚಾರಕ್ಕೆ ಆಚರಿಸುವಂತಾಗಿದೆ. ಹೀಗಾಗಿ ಸಭೆ ಮುಂದೂಡಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ರೇಷ್ಮೆ ಇಲಾಖೆಯ ಮ.ಗ. ಹೆಗಡೆ, ಶಿರಸ್ತೇದಾರ್, ಬೆಸ್ಕಾಂ ಅಧಿಕಾರಿ ಸದಾಶಿವ, ಶಿಕ್ಷಣ ಇಲಾಖೆಯ ಶಿವಪ್ರಕಾಶ್, ಸಿಡಿಪಿಒ ಸಿದ್ದಲಿಂಗಪ್ಪ, ಪ್ರಭಾರ ಉಪನೊಂದಣಾಧಿಕಾರಿ ಮುನಿರಾಜು, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ತಿಮ್ಮಾರೆಡ್ಡಿ, ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಮುನಿಕೃಷ್ಣ, ಶಿಕ್ಷಕ ಎನ್. ನಾರಾಯಣಸ್ವಾಮಿ ಮತ್ತಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

