ಕೋಲಾರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತ್ಯೇಕ ಪ್ರತಿಭಟನೆ

Published On :

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಮತ್ತು ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಘೋಷಣೆಗಳನ್ನು ಕೂಗಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಸ್ಞಜ್ಗರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ: ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅಕ್ಷರ ದಾಸೋಹ ನೌಕರರು, ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ರತಿಯೊಂದು ಮಗು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಆಕರ್ಷಿಸಲು ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜಾರಿಗೆಗೆ ತಂದಿದ್ದು ಇದರ ಯಶಸ್ವಿಗಾಗಿ ರಾಜ್ಯದಲ್ಲಿ 1,03,874 ಮಂದಿ ಅಡುಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇವರಿಗೆ ಯಾವುದೇ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಕನಿಷ್ಠ ವೇತನ ನೀಡದಿರುವುದರಿಂದ ನೌಕರರು ಜೀವನ ನಡೆಸಲು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ರಾಜ್ಯದಲ್ಲಿ ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಈಗಾಗಲೇ 40 ಸಾವಿರ ಜನ ಕೆಲಸವನ್ನು ಕಳೆದುಕೊಂಡು ದಿಕ್ಕೆಟ್ಟಿದ್ದು ಈ ಹಿನ್ನೆಲೆಯಲ್ಲಿ ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಎಂದಿನಂತೆ ಸರ್ಕಾರವೇ ನಿರ್ವಹಿಸಿ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. ಇದರ ಜತೆಗೆ ಕೊಡುತ್ತಿರುವ ಕೂಲಿ ಹೆಚ್ಚಿಸಿ ನೌಕರರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಕನಿಷ್ಠ 3 ಸಾವಿರ ರು.ಗಳನ್ನು ಹಾಗೂ ಬಿಸಿಯೂಟ ತಯಾರಿಸುವಾಗ ಅವಘಡಗಳು ಸಂಭವಿಸಿದಾಗ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ತಾಲೂಕು ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ಮಂಜುಳಾ, ಬಸಮ್ಮ, ಭಾರತಿ ಭಾಗವಹಿಸಿದ್ದರು.
ಆಶಾ ಕಾರ್ಯಕರ್ತೆಯರ ಹೋರಾಟ: ನಗರದ ಬಿ.ಬಿ. ರಸ್ತೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ಕನಿಷ್ಠ ವೇತನಕ್ಕಾಗಿ ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಹಂಗಾಮಿಗಳಾಗಿ ದುಡಿಯುತ್ತಿರುವವರಿಗೆ ಕನಿಷ್ಠ 4 ಸಾವಿರ ರೂಗಳಿಂದ 5 ಸಾವಿರ ರು.ಗಳನ್ನು ನೀಡಲಾಗುತ್ತಿದೆ. ಆದರೆ, ಆಶಾ ಕಾರ್ಯಕರ್ತೆಯರು ಸಮಯದ ನಿಗದಿಯಿಲ್ಲದೇ ದುಡಿದರೂ ತಿಂಗಳಿಗೆ 500 ರೂಮಾತ್ರ ಸಿಗುತ್ತಿದೆ ಎಂದ ಅವರು, ಎನ್‌ಆರ್‌ಎಚ್‌ಎಂ ಯೋಜನೆಯನ್ನು  ಕಾಯಂಗೊಳಿಸಿ ಜನಶ್ರೀ ಭೀಮಾ ಯೋಜನೆಯನ್ನು ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿ.ಎಂ. ಲಕ್ಷ್ಮೀದೇವಮ್ಮ, ಸರಸ್ವತಮ್ಮ, ಶೋಭಾ, ಭಾಗ್ಯಮ್ಮ, ವಿಜಯಲಕ್ಷ್ಮೀ ಭಾಗವಹಿಸಿದ್ದರು.

ಬಿಸಿಯೂಟ ನೌಕರರ ಕಡೆಗಣನೆ ಆರೋಪ: ಡಿ.2ರಿಂದ ಹೋರಾಟ
ಬಂಗಾರಪೇಟೆ: ರಾಜ್ಯ ಸರ್ಕಾರ ಅಕ್ಷರ ದಾಸೋಹ ನೌಕರರನ್ನು ಕಡೆಗಣಿಸುತ್ತಿದ್ದು ತಿಂಗಳ ಅಂತ್ಯದೊಳಗೆ ಎಲ್ಲಾ ಬೇಡಿಕೆಗಳನ್ನು ಬಗೆಹರಿಸದಿದ್ದರೆ ಡಿ. 2ರಿಂದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸುಛವುದಾಗಿ ನೌಕರರು ತಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಬಿಸಿಯೂಟ ನೌಕರರಿಗೆ ಯಾವುದೇ ಸೇವಾ ಭದ್ರತೆಯಿಲ್ಲ, ನೌಕರಿ ಕಾಯಂ ಸಹ ಇಲ್ಲ. ಇದರ ಮಧ್ಯೆ ಮಕ್ಕಳಿಗೆ ಪ್ರತಿದಿನ ಬಿಸಿಯೂಟವನ್ನು ಮಾಡಬೇಕು. ಕನಿಷ್ಠ ವೇತನ ಸಹ ಇಲ್ಲದಿರುವುದು ಇಂದಿನ ದಿನಗಳಲ್ಲಿ ನಾವು ಸಂಸಾರ ನೂಕುವುದು ಕಷ್ಟಕರವಾಗಿದೆ. ಇದರ ನಡುವೆ ವಾರಕ್ಕೆ ಒಂದು ದಿನ ಗೋಧಿ ಭಾಗ್ಯ ಯೋಜನೆ ಬೇರೆ ಜಾರಿಗೆ ತಂದಿದ್ದು ನಮ್ಮ ಬೇಡಿಕೆಗಳನ್ನು ಈಡೇರುವವರೆಗೂ ಬಿಸಿಯೂಟ ನಿಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ 6000 ಸಾವಿರ ವೇತನ ನೀಡಬೇಕು, ಅಪಘಾತ ವಿಮೆ ಕೂಡಲೆ ಜಾರಿ ಮಾಡಬೇಕು, ನೌಕರರಿಗೆ ವೈಯಕ್ತಿಕ ಖಾತೆಗಳಿಗೆ ವೇತನ ಸಂದಾಯವಾಗಬೇಕು, ನೌಕರರಿಗೆ ಸೇವಾ ಭದ್ರತೆ ಹಾಗೂ ಹೆರಿಗೆ ರಜೆ ಮತ್ತು ಹೆರಿಗೆ ಭತ್ಯೆ ಮಂಜೂರು ಮಾಡಬೇಕು, ದಾಸರ ಮತ್ತು ಬೇಸಿಗೆ ರಜೆಗಳಲ್ಲು ವೇತನ ನೀಡಬೇಕು ಮತ್ತು ಇತರೇ ಬೇಡಿಕೆಗಳ್ನು ಮುಂದಿಟ್ಟು ಪ್ರತಿಭಟನೆ ಮಾಡಿ ನವೆಂಬರ್ ಅಂತ್ಯದೊಳಗೆ ಈಡೇರಬೇಕು ತಪ್ಪಿದರೆ ಡಿಸೆಂಬರ್‌ನಿಂದ ಬಿಸಿಯೂಟವೂ ಸ್ಥಗಿತವಾಗಲಿದೆ. ಇದರಿಂದ 61.40 ಲಕ್ಷ ಮಕ್ಕಳು ಬಿಸಿಯೂಟದಿಂದ ವಂಚಿತರಾಗುವರು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರಿಂದ ಮನವಿ ಪಡೆದ ಇಒ ಬೇಡಿಕೆಗಳನ್ನು ಜಿಪಂ ಸಿಎಸ್ ಅವರ ಗಮನಕ್ಕೆ ತಂದು ಬಗೆಹರಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಜಯಲಕ್ಷ್ಮೀ ಶ್ರೀನಿವಾಸ್, ಸರಸ್ವತಿ, ರವೀಂದ್ರ ಮತ್ತಿತರರು ಇದ್ದರು.

ಬಾಗೇಪಲ್ಲಿಯಲ್ಲಿ ಮನವಿ ಸಲ್ಲಿಕೆ
ಬಾಗೇಪಲ್ಲಿ: ರಾಜ್ಯ ಅಕ್ಷರದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆಯೆಂದು ತಾಲೂಕು ಸಮಿತಿಯ ಗೌರವಾಧ್ಯಕ್ಷ ಮುಸ್ತಾಫ್ ಆರೋಪಿಸಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ತಾಲೂಕು ಸಮಿತಿ ಡಾ.ಎಚ್.ಎನ್. ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ತಾಲೂಕು ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಮುನಿಗೋವಿಂದಮ್ಮ, ಕಾರ್ಯದರ್ಶಿ ಅಮರಾವತಿ, ಸಂಚಾಲಕ ಬಿ. ಆಂಜನೇಯರೆಡ್ಡಿ, ವರಲಕ್ಷ್ಮೀ, ಶಾಂತಮ್ಮ, ಮಭೋನಾ, ಶಭೀನಾ, ವೆಂಕಟಲಕ್ಷ್ಮಮ್ಮ ಭಾಗವಹಿಸಿದ್ದರು.

ಚಿಂತಾಮಣಿಯಲ್ಲಿ....
ಚಿಂತಾಮಣಿ: ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ರಾಜ್ಯ ಅಕ್ಷರ ದಾಸೋಹ ನೌಕರರ ತಾಲೂಕು ಶಾಖೆ ಕಾರ್ಯಕರ್ತರು ತಾಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.  ಪಟ್ಟಣದ ತಾಪಂ ಕಚೇರಿ ಎದುರು ಅಕ್ಷರ ದಾಸೋಹ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲೂಕು ಘಟಕದ ಅಧ್ಯಕ್ಷೆ ಇಂದಿರಮ್ಮ ಮಾತನಾಡಿ, ಅಕ್ಷರ ದಾಸೋಹ ನೌಕರರ ಕ್ಷೇಮ-ಸಮಾಚಾರದ ಬಗ್ಗೆ ಕಳೆದ 11 ವರ್ಷಗಳಿಂದ ಸ್ಪಂದಿಸದೆ ಇರುವ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.
ಕನಿಷ್ಠ ವೇತನಕ್ಕೆ ದುಡಿಮೆ: ಅಕ್ಷ ದಾಸೋಹ ಯೋಜನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಯಾವುದೇ ಸೌಲತ್ತುಗಳಿಲ್ಲದೆ ದಿನಕ್ಕೆ ಕೇವಲ 38 ರುಪಾಯಿಗೆ ದುಡಿಯುತ್ತಿದ್ದಾರೆ. ಆದರೆ ಪಕ್ಕದ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ಅಡಿಗೆಯವರ ಗೌರವ ಧನ ದಿನಕ್ಕೆ 150 ಗಳಷ್ಟಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಸಿಪಿಎಂ ಸಾಥ್:  ಸಿಪಿಎಂ ಮುಖಂಡ ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿ, ಅಕ್ಷರ ದಾಸೋಹ ನೌಕರರಿಗೆ ಸಾಮಾಜಿಕ ಹಾಗು ಉದ್ಯೋಗ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಡಿ. 2 ರಂದು ಹೋರಾಟ: ನೌಕರರ ಭದ್ರತೆಗೆ ವಿವಿಧ ಬೇಡಿಕೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಡಿಸೆಂಬರ್ 2 ರಂದು ಬೆಂಗಳೂರಿನಲ್ಲಿ ಬಿಸಿಯೂಟ ನೌಕರರ ಅನಿರ್ದಿಷ್ಠಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಿಡ್ಲಘಟ್ಟದಲ್ಲಿ....
ಶಿಡ್ಲಘಟ್ಟ: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿದಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಪಂ ಕಚೇರಿ ಮುಂದೆ ಘೋಷಣೆ ಕೊಗುತ್ತಾ ಪ್ರತಿಭಟನೆ ನಡೆಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.