ಗಣತಿ ಸರ್ಕಾರದ ಯೋಜನೆಗಳಿಗೆ ಮಾರ್ಗದರ್ಶಿ
ಮುಳಬಾಗಲು: ಆರನೇ ಅರ್ಥಿಕ ಗಣತಿ ಅತ್ಯಂತ ಮಹತ್ತರವಾದುದಾಗಿದ್ದು, ಸರ್ಕಾರದ ಯೋಜನೆಗಳು ಇಂತಹ ಗಣತಿಯ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ ಎಂದು ಕೋಲಾರ ಅರ್ಥಿಕ ಮತ್ತು ಸಾಂಖ್ಯಿಕ ಸಹಾಯಕ ನಿರ್ದೇಶಕಿ ಎಸ್. ಪದ್ಮಾವತಮ್ಮ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಆರನೇ ಅರ್ಥಿಕ ಗಣತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೇಲ್ವಿಚಾರಕರು ಗಣತಿದಾರರೊಂದಿಗೆ ಸಮನ್ವಯವಾಗಿ ಕೆಲಸ ಮಾಡಬೇಕು, ಗ್ರಾಮದ ನಕ್ಷೆ, ಮನೆ ಸಂಖ್ಯೆ,ಭೌಗೋಳಿಕ ವಿಸ್ತೀರ್ಣ ಇವುಗಳ ಆಧಾರದ ಮೇಲೆ ಗಣತಿ ನಡೆಸುವುದರೊಂದಿಗೆ ಕುಟುಂಬ ಸದಸ್ಯರು ಅರ್ಥಿಕ ಲೇವಾದೇವಿ ಹಾಗೂ ಅರ್ಥಿಕ ಚಟುವಟೆಕೆಗಳ ಮೇಲೆ ನಿಗಾ ವಹಿಸಬೇಕು ಎಂದರು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಸಹಾಯಕ ಸಂಖ್ಯಾಧಿಕಾರಿ ಎನ್. ವೆಂಕಟರವಣ, ಉಪ ತಹಸೀಲ್ದಾರ್ಗಳಾದ ಆನಂದ್, ವೆಂಕಟೇಶ್, ಹನುಮೇಶ್, ರಾಜಸ್ವ ನಿರೀಕ್ಷಕ ಕೃಷ್ಣಪ್ಪ, ಅಲಂಗೂರು ನಾಗರಾಜು, ಸಿ. ಸುಬ್ರಮಣಿ ಇದ್ದರು.
ನಮೋ ಸಭೆಗೆ 5 ಸಾವಿರ ಮಂದಿ
ಮುಳಬಾಗಲು: ಬೆಂಗಳೂರಿನಲ್ಲಿ ನ.17ರಂದು ಏರ್ಪಡಿಸಿರುವ ಬಿಜೆಪಿ ಸಭೆಗೆ ಮುಳಬಾಗಲು ತಾಲೂಕಿನಿಂದ 5 ಸಾವಿರ ಕಾರ್ಯಕರ್ತರು ಭಾಗವಹಿಸುವರೆಂದು ಕೋಲಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ. ವೆಂಕಟೇಶ್ ಹೆಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 2 ಸಾವಿರ ಟೆಕೆಟ್ ಮಾರಾಟವಾಗಿದೆ, ಇನ್ನು ಹೆಚ್ಚುವರಿಯಾಗಿ ಮೂರು ಸಾವಿರ ಟೆಕೆಟ್ ಬೇಕಾಗಿದೆ ಎಂದರು. ಹರೀಶ್, ಶ್ರೀರಾಮಯ್ಯ, ಶಕ್ತಿಪ್ರಸಾದ್, ವಕೀಲ ಶ್ರೀನಿವಾಸ್, ಮುನಿರಾಜು, ಕೊಲದೇವಿ ಶ್ರೀರಾಮ್, ಸುನಿಲ್ ಇದ್ದರು.
ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆ
ಶಿಡ್ಲಘಟ್ಟ: ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆ 13 ರಿಂದ ಪ್ರಾರಂಭಗೊಂಡಿದ್ದು 17 ರವರೆಗೂ ನಡೆಯಲಿದೆ. ಪೋಷಕರು ಸರಿಯಾದ ಮಾಹಿತಿ ನೀಡಿ ಶಿಕ್ಷಕರಿಗೆ ಸಹಕರಿಸಬೇಕೆಂದು ಶಿಕ್ಷಕ ಗಂಗರೆಡ್ಡಿ ಕೋರಿದ್ದಾರೆ. ಪಟ್ಟಣದ 1ನೇ ವಾರ್ಡ್ನ ಕೆ.ಕೆ. ಪೇಟೆ, ಅಂಜನಿ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆಯಲ್ಲಿ ಮಾತನಾಡಿದರು. ಸಮೀಕ್ಷೆಯಲ್ಲಿ ಶಿಕ್ಷಕ ಡಿ. ಗಂಗಾರೆಡ್ಡಿ, ಎಂ.ಅರ್. ರಾಘವೇಂದ್ರ, ಟಿ.ಎನ್. ಮುರಳಿಮೋಹನ್, ಅಂಗನವಾಡಿ ಕಾರ್ಯಕರ್ತೆ ಎಂ. ಮಂಜುಳ ಇದ್ದರು.
ರಕ್ತ ಚಂದನ ವಶ
ಮುಳಬಾಗಲು: ತಾಲೂಕಿನ ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಈರಗಮತ್ತನಹಳ್ಳಿ ಗ್ರಾಮದ ತೋಟದ ಮನೆಯ ಮೇಲೆ ಮುಳಬಾಗಲು ಮತ್ತು ನಂಗಲಿ ಪೊಲೀಸರು ಗುರುವಾರ ದಾಳಿ ನಡೆಸಿ ಎರಡು ಟನ್ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗ್ರಾಮದ ಹೊರವಲಯದ ಚಂಗಲರಾಯಪ್ಪ ಎಂಬವರ ತೋಟದ ಮನೆಯ ಮೇಲೆ ದಾಳಿ ನಡೆಸಿದಾಗ ಮಾಲು ಮತ್ತು ಆರೋಪಿ ಸಿಕ್ಕಿಬಿದ್ದಿದ್ದಾರೆ. ಡಿವೈಎಸ್ಪಿ ಟೆ. ಸಿದ್ದಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ಗಳಾದ ಶ್ರೀಧರ್, ಮೇಲ್ವಿನ್ ಪ್ರಾನ್ಸಿಸ್ ದಾಳಿಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂಗಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ನಾಳೆ ಜನಸ್ಪಂದನಾ ಸಭೆ
ಗುಡಿಬಂಡೆ: ತಾಲೂಕಿನ ಉಲ್ಲೋಡು ಪಂಚಾಯತಿ ವ್ಯಾಪ್ತಿಯ ಹಳೇ ಗುಡಿಬಂಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನ.16ರ ಮಧ್ಯಾಹ್ನ 3ಗಂಟೆಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದೆಂದು ತಹಶೀಲ್ದಾರ್ ಶೈಲಜಾ ತಿಳಿಸಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಇರಲಿ: ಶಾಸಕ
ಚಿಂತಾಮಣಿ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್, ಕರಾಟೆ, ಜಾನಪದ, ಸಂಸ್ಕೃತ ಕಲಿಕೆ ಇಂತಹ ಕಾರ್ಯಕ್ರಮಗಳು ಬಹಳ ಅತ್ಯಗತ್ಯ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕಿವಿಮಾತು ಹೇಳಿದರು. ತಾಲೂಕಿನ ನಾಯನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸರ್ಕಾರೇತರ ಸಂಘವೊಂದ ವತಿಯಿಂದ ಕೊಡುಗೆ ನೀಡಿದ ಕಂಪ್ಯೂಟರ್, ಲೇಖನಿ ಮತ್ತಿತರೆ ಶಾಲಾ ಸಾಮಗ್ರಗಳನ್ನು ವಿತರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಸಮಾಜ ಸೇವಕರು ನೀಡುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸದುಪಯೋಗ ಪಡಿಸಿಕೊಂಡು ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದು ಇದೇ ವೇಳೆ ಸಲಹೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಸೈಯದ್ ನೂರುದ್ದೀನ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮ ಸಂಸ್ಥೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಪ್ರಕಾಶ್, ಮಂಜುನಾಥ್, ಮುಖಂಡರಾದ ರಾಜಣ್ಣ, ಬೈರರೆಡ್ಡಿ, ನಾಗರಾಜ್, ಆಂಜನೇಯರೆಡ್ಡಿ, ಮುಖ್ಯ ಶಿಕ್ಷಕ ಗೋಪಾಲರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ ಸೇರಿದಂತೆ ಮತ್ತತಿರರು ಭಾಗವಹಿಸಿದ್ದರು.
ಕನಕ ಜಯಂತಿ ಪೂರ್ವಬಾವಿ ಸಭೆ
ಶ್ರೀನಿವಾಸಪುರ: ಕನಕ ಜಯಂತಿ ಪೂರ್ವಬಾವಿ ಸಭೆಯಲ್ಲಿ ಕಳೆದ ವರ್ಷದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್, ಮೈಕು ಮತ್ತು ಕುರ್ಚಿಗಳ ಬಾಡಿಗೆ ಚರ್ಚೆ ನಡೆಯಿತು. ಈ ಬಗ್ಗೆ ತಿಳಿಸಿದ ಪಟ್ಟಣದ ಗ್ರಾಮಾಲೆಕ್ಕಾಧಿಕಾರಿಯ ಮಾತನ್ನು ಆಲಿಸಿದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಎಚ್. ಜಯರವರು ರಂಗಮಂದಿರ ನಿರ್ಮಾಣದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದೆಂದು ಹೇಳಿದಾಗ ಎಲ್ಲರೂ ಸಮ್ಮತಿಸಿ ರಂಗಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಂಡರು. ಬಿಸಿಎಂ ಇಲಾಖೆಯ ಈಶ್ವರಮ್ಮ ಜಿಪಂ ಸದಸ್ಯ ಜಿ.ಕೆ. ನಾಗರಾಜ್, ಎಂ. ನಾಗರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ. ರಾಘವೇಂದ್ರ ಇದ್ದರು.
ತರಬೇತಿ ಶಿಬಿರ
ಶಿಡ್ಲಘಟ್ಟ: ಮಾನವ ಅಭಿವೃದ್ಧಿಯಲ್ಲಿ ಭಾರತ 134 ನೇ ಸ್ಥಾನದಲ್ಲಿದೆ ಎಂದು ಐಸಾಕ್ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ. ದೇವೇಂದ್ರಪ್ಪ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಳಿಗೆ ಏರ್ಪಡಿಸಿದ್ದ ಮಾನವ ಸಂಪನ್ಮೂಲದ ಅಂಕಿ ಅಂಶಗಳ ಕ್ರೋಡಿಕರಣದ ತರಬೇತಿ ಶಿಬಿರದಲ್ಲಿ ಮಾತನಾಡಿದರು. ಐಸಾಕ್ ಸಂಸ್ಥೆಯ ವಸಂತಕುಮಾರಿ, ತಾಪಂ ಅಧ್ಯಕ್ಷ ಯರಬಚ್ಚಪ್ಪ, ಕಾರ್ಯನಿರ್ವಹಣಾಧಿಕಾರಿ ದೇವರಾಜಗೌಡ, ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಗಣಪತಿ ಎಸ್ ಸಾಕರೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

