ಮರಳು ಮಾಫಿಯಾ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ನ.14
ಮರಳು ಮಾಫಿಯಾ ನಿಯಂತ್ರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ದಿಟ್ಟ ಕ್ರಮ ಕೈಗೊಂಡಿರುವುದರಿಂದ ದಂಧೆ ಮುಂದುವರೆಸಲು ಹೆಣಗಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಪೊಲೀಸರನ್ನು ಬಲಿ ತೆಗೆದುಕೊಂಡು ಕಾನೂನಿಗೆ ಸವಾಲು ಹಾಕುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಗುರುವಾರ ಪ್ರತಿಭಟನೆ ನಡೆಸಿತು.
ಹಲವು ದಶಕಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿ ಪ್ರಕೃತಿ ಸಂಪತ್ತು ಲೂಟಿ ಆಗುವುದನ್ನು ತಡೆಯಬೇಕೆಂದು ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಮರಳು ದಂಧೆಗೆ ಕಡಿವಾಣ ಹಾಕಲು ದಿಟ್ಟ ನಿರ್ಧಾರ ಕೈಗೊಂಡಿರುವುದರಿಂದ ಹತಾಶರಾಗಿರುವ ಮರಳು ಮಾಫಿಯಾದಲ್ಲಿ ತೊಡಗಿರುವವರು ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಲು ಪೊಲೀಸರನ್ನು ಬಲಿ ತೆಗೆದುಕೊಳ್ಳುತ್ತಿದ್ದು ಇದಕ್ಕೆ ಆಂಜದೆ, ಅಳುಕದೆ ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿರುವವರನ್ನು ಮಟ್ಟ ಹಾಕಬೇಕೆಂದು ಆಗ್ರಹಿಸಿದರು.
ಪೊಲೀಸ್‌ರು ವಶ ಪಡಿಸಿಕೊಂಡ ಅಕ್ರಮ ಮರಳು ಲಾರಿಗಳಿಗೆ ಕಂದಾಯ ಕಾಯಿದೆ ಮತ್ತು ಹೈಕೋರ್ಟಿನ ಆದೇಶದಂತೆ ಒಂದು ಲಕ್ಷ ದಂಡ ವಿಧಿಸಿ ಲಾರಿ ಮಾಲೀಕ ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಕ್ರಮ ಮರಳು ಪಿಲ್ಟರ್ ಹಾಗೂ ಮರಳು ಸಾಗಾಣಿಕೆಗೆ ಪ್ರೋತ್ಸಾಹ ನೀಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಜಿಲ್ಲೆಯಿಂದ ಎತ್ತಂಗಡಿ ಮಾಡುವಂತೆ ಸರ್ಕಾರವನ್ನು ಕೋರಿದರು.
ಮರಳು ಮಾಫಿಯಾಗೆ ಉತ್ತೇಜನ ನೀಡುವ ಜನ ಪ್ರತಿನಿಧಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಮರಳು ಪಿಲ್ಟರ್ ದಂಧೆಗೆ ಕಡಿವಾಣ ಹಾಕಲು ಗ್ರಾಮ ಲೇಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರಿಗೆ, ಸಣ್ಣ ನೀರಾವರಿ ಮತ್ತು ಪಿಡಬ್ಯೂ ಇಲಾಖೆ ಅಧಿಕಾರಿಗಳಿಗೆ ಅಧಿಕಾರ ನೀಡಿ ಕೆರೆಗಳಲ್ಲಿ ಪಿಲ್ಟರ್ ಮಾಡಿದ್ದು ಕಂಡು ಬಂದರೆ ಈ ಅಧಿಕಾರಿಗಳನ್ನೆ ನೇರೆ ಹೊಣೆ ಮಾಡಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಹುಲ್ಕೂರು ಹರಿಕುಮಾರ್, ಮೂರಂಡಹಳ್ಳಿ ಶಿವಾರೆಡ್ಡಿ, ನೀಲಟೂರು ರಮೇಶ್, ಹೂಹಳ್ಳಿ ನಾಗರಾಜ್, ರಂಜಿತ್ ಕುಮಾರ್, ಬಂಗಾರಿ ಮಂಜು, ಪುರುಷೋತ್ತಮ್, ಸಾಗರ್, ಹರೀಶ್, ರಘು, ಫಾರುಕ್ ಪಾಷ, ಅಮರನಾರಾಯಣ ಸ್ವಾಮಿ, ಮಂಜುನಾಥ್, ಬಡಗಿ ರಮೇಶ್, ನೀಕಂಠಪುರ ಮುನೇಗೌಡ, ರಜೇಶ್, ಕ್ಯಾಸಂಬಳ್ಳಿ ಪ್ರತಾಫ್, ಕಾರಿ ವಿಶ್ವನಾಥ್ ಇದ್ದರು.
ರಾಮಸಂದ್ರ ಬಳಿ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಚಿಂತನೆ
ಕ.ಪ್ರ.ವಾರ್ತೆ ಕೋಲಾರ ನ.14
ಅಕ್ರಮ ಮರಳು ಸಾಗಾಣೆಗೆ ಕಠಿಣ ಕ್ರಮ ಕೈಗೊಂಡಿರುವುದರಿಂದ ಜಿಲ್ಲೆಯಲ್ಲಿ ಶೇ.70 ರಷ್ಟು ನಿಯಂತ್ರಣಕ್ಕೆ ಬಂದಿದ್ದರೂ ಕಳ್ಳರು ಪೊಲೀಸರ ಕಣ್ಣು ತಪ್ಪಿಸಿ ಮರಳು ಸಾಗಾಣೆ ಮಾಡಲು ಯತ್ನಿಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 4ರ ರಾಮಸಂದ್ರ ಗೇಟಟ್ಬಳಿ ಮತ್ತೊಂದು ಚೆಕೆ ಪೊಸ್ಟ್ ನಿರ್ಮಿಸಲು ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅವರು ಪತ್ರಕರ್ತರೊಂದಿಗೆ ಮಾತನಾಡಿ,ಕಳೆದ ರಾತ್ರಿ ಕರ್ತವ್ಯ ನಿರತ ಪೊಲೀಸ್ ಮರಳು ಲಾರಿ ಹರಿದ ಪರಿಣಾಮ ಮೃತಪಟ್ಟಿರುವುದು ಬೇಸರ ಉಂಟು ಮಾಡಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮರಳು ಮಾಫಿಯಾಗೆ ಕಡಿವಾಣ ಹಾಕಬೇಕಾದರೆ ಪೊಲೀಸರಿಗೆ ಮೊದಲು ಅಗತ್ಯ ರಕ್ಷಣೆ ಒದಗಿಸಬೇಕಾಗಿದೆ. ಪ್ರತಿಯೊಬ್ಬರ ಜೀವ ಅಮೂಲ್ಯವಾಗಿರುವುದರಿಂದ ಪೊಲೀಸರ ರಕ್ಷಣೆ ಜೊತೆಗೆ ಮರಳು ಮಾಫಿಯಾಗೂ ಕಡಿವಾಣ ಹಾಕಬೇಕಾಗಿರುವುದರಿಂದ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ರಾಮಸಂದ್ರ ರಾಷ್ಟ್ರೀಯ ಹೆದ್ದಾರಿಗೆ ಒಳಪಟ್ಟಿರುವುದರಿಂದ ಅಲ್ಲಿ ಚೆಕ್ ಪೋಸ್ಟ್ ಮಾತ್ರವಲ್ಲದೆ ಸಿಸಿ ಟಿವಿಗಳನ್ನು ಅಳವಡಿಕೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಹೊಸ ಮರಳು ನೀತಿ ಜಾರಿಗೆ ಬರುವ ತನಕ ಸರ್ಕಾರಿ ಆದೇಶದ ಪ್ರಕಾರ ವಶವಡಿಸಿಕೊಳ್ಳುವ ಅಕ್ರಮ ಮರಳು ಲಾರಿಗಳಿಗೆ 10 ಸಾವಿರ ರು.ದಂಡ ವಸೂಲಿ ಮಾಡಲಾಗುತ್ತದೆ. ಹೊಸ ನೀತಿಯಲ್ಲಿ ಏನಿದೆ ಎಂಬುದು ಅರಿತು ಸರ್ಕಾರದ ಆದೇಶದಂತೆ ಮುಂದಿನ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಳೆದ ರಾತ್ರಿ ಮರಳು ಲಾರಿ ಡಿಕ್ಕಿಯಿಂದ ಮೃತಪಟ್ಟ ಪೊಲೀಸ್ ಪೇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ಪ್ರಾರಂಭಿಸಿದ್ದು, ಈಗಾಗಲೇ ಲಾರಿ ಮಾಲೀಕ ಯಾರೆಂಬುದನ್ನು ಪತ್ತೆ ಹಚ್ಚಲಾಗಿದೆ, ಪೊಲೀಸರು ಶೀಘ್ರವೇ ಲಾರಿ ಚಾಲಕನನ್ನು ಬಂಧಿಸುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರೈತರು ತಮ್ಮ ಹೊಲಗಳಲ್ಲಿ ಪೀಲ್ಟರ್ ಮರಳ ದಂಧೆ ನಡೆಸಿದರೆ ಇನ್ನು ಮುಂದೆ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

