ಕೆಎಸ್ಆರ್ಟಿಸಿ ನೌಕರರ ವಿರುದ್ಧ ಎಸ್ಮಾ ಬೇಡ
ಕಾರ್ಮಿಕ ಮುಖಂಡ ಎಚ್.ವಿ. ಅನಂತಸುಬ್ಬರಾವ್ ಆಗ್ರಹ
ಕೋಲಾರ: ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಹಕ್ಕು ದಮನ ಮಾಡಲು ಎಸ್ಮಾ ಜಾರಿಗೆ ಪ್ರಯತ್ನಿಸುತ್ತಿದೆ ಎಂದು ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ತಿಂಗಳ 25 ರಂದು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ ಮತ್ತು ಹಕ್ಕು ಮೊಟಕುಗೊಳಿಸಲು ಎಸ್ಮಾ ಕಾಯಿದೆ ಮಂಡನೆಗೆ ಸರ್ಕಾರ ತಯಾರಿ ನಡೆಸುತ್ತಿದ್ದು ಈ ಕರಾಳ ಕಾಯಿದೆ ವಿರುದ್ಧ ನ.21 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಳಗಾಂ ಅಧಿವೇಶನದಲ್ಲಿ ಎಸ್ಮಾ ಕಾಯಿದೆ ಶಾಸಕರು ಅನುಮೋದನೆ ನೀಡಿದರೆ ಅಂದಿನಿಂದಲೇ ಕೆಎಸ್ಆರ್ಟಿಸಿ ನೌಕರರು ಮುಷ್ಕರ ಆರಂಭಿಸಲಿದ್ದು ಇದರಿಂದ ಆಗುವ ಪರಿಣಾಮಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿ, ಸಾರಿಗೆ ಸಚಿವ ಹಾಗೂ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕಾರ್ಮಿಕರನ್ನು ದಮನಗೊಳಿಸುವ ಉದ್ದೇಶದಿಂದ ಸರ್ಕಾರ ಎಸ್ಮಾ ಜಾರಿಗೆ ಪ್ರಯತ್ನಿಸುತ್ತಿದ್ದು ಇದಕ್ಕೆ ಜನಪ್ರತಿನಿಧಿಗಳು ಒಪ್ಪಿಗೆ ನೀಡಬಾರದೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಖಾಸಗಿ ಬಸ್ಸುಗಳು ರಾಜಾರೋಷವಾಗಿ ಓಡಾಡುತ್ತಿದ್ದು ಸರ್ಕಾರವೇ ಕುಮ್ಮಕ್ಕು ನೀಡುತ್ತಿರುವುದರಿಂದ ಕೆಎಸ್ಆರ್ಟಿಸಿಗೆ ನಷ್ಟ ಸಂಭವಿಸುತ್ತಿದೆ. ಸರ್ಕಾರ ಕೂಡಲೇ ಖಾಸಗೀ ಬಸ್ಸುಗಳ ಓಡಾಟಕ್ಕೆ ಕಡಿವಾಣ ಹಾಕಬೇಕೆಂದು ತಿಳಿಸಿದರು. ಕೆಎಸ್ಆರ್ಟಿಸಿ ಬಸ್ಸುಗಳಿಗೆ ವೇಗ ಮಿತಿ ಇರುತ್ತದೆ. ಒಂದು ವೇಳೆ ಅಪಘಾತಕ್ಕೊಳಗಾಗಿ ಸಾರ್ವಜನಿಕರಿಗೆ ತೊಂದರೆ ಅದರೆ ಸಂಸ್ಥೆ ಪರಿಹಾರ ನೀಡುವುದರ ಜೊತೆಗೆ ಸಾರ್ವಜನಿಕರ ಹಿತ ಕಾಪಾಡಲು ಮುಂದಾಗುತ್ತದೆ. ಆದರೆ ಖಾಸಗಿ ಬಸ್ಸುಗಳು ವೇಗ ಮಿತಿ ಇಲ್ಲದೆ ಇಷ್ಟ ಬಂದ ಹಾಗೆ ಚಲಿಸುತ್ತವೆ, ಅಪಘಾತಕ್ಕೀಡಾದರೆ ಸಾರ್ವಜನಿಕರಿಗೆ ಯಾವುದೇ ರೀತಿಯಿಂದಲೂ ಪರಿಹಾರ ಸಿಗುವುದಿಲ್ಲವೆಂದರು.
ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ವಿ. ಜೋಸೆಪ್, ಕೋಲಾರ ವಿಭಾಗದ ಅಧ್ಯಕ್ಷ ಕೆ.ಎನ್.ಎಂ. ಪ್ರಸಾದ್, ಪ್ರಧಾನ ಕಾರ್ಯದರ್ಶಿ ಕೆ. ಸಂಪತ್, ಜಂಟಿ ಕಾರ್ಯದರ್ಶಿಗಳಾದ ಆರ್. ಬಾಲಕೃಷ್ಣ, ಎಚ್.ಎಂ. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಈರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

